ಗಣಿ: ನ. 26ಕ್ಕೆ ವರದಿ

7

ಗಣಿ: ನ. 26ಕ್ಕೆ ವರದಿ

Published:
Updated:

ಚಿತ್ರದುರ್ಗ: ಗಣಿಗಾರಿಕೆಯಿಂದ ಪರಿಸರದ ಮೇಲೆ ಉಂಟಾಗಿರುವ ಹಾನಿಯ ಕುರಿತು ನ. 26ಕ್ಕೆ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ನೇಮಿಸಿರುವ ಪರಿಸರ ಪರಿಣಾಮಗಳ ಪರಿಶೀಲನಾ ತಂಡದ (ಇಐಎ) ಮುಖ್ಯಸ್ಥ ಡಾ.ವಿ.ಕೆ. ಬಹುಗುಣ ಶನಿವಾರ ಇಲ್ಲಿ ತಿಳಿಸಿದರು. ಅಧಿಕಾರಿಗಳ ಜತೆ ಸಭೆ ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಂಡದ ಮುಖ್ಯಸ್ಥ , ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಪರಿಷತ್ ನಿರ್ದೇಶಕ ಡಾ. ವಿ.ಕೆ. ಬಹುಗುಣ ಅವರು, ವೈಜ್ಞಾನಿಕವಾಗಿ ಗಣಿಗಾರಿಕೆ ಮಾಡಲಾಗಿದೆಯೇ ಅಥವಾ ಇಲ್ಲವೆ ಎನ್ನುವುದನ್ನು ತಂಡ ಪ್ರಮುಖವಾಗಿ ಅಧ್ಯಯನ ಮಾಡುತ್ತಿದೆ ಎಂದರು. `ನಾವು ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿದ್ದೇವೆ.ನಿಯಮಗಳ ಪಾಲನೆ ಬಗ್ಗೆ ಪರಿಶೀಲಿಸಿದ್ದೇವೆ. ಜನಜೀವನದ ಮೇಲೆ ಗಣಿಗಾರಿಕೆ ಯಾವ ರೀತಿ ಪರಿಣಾಮ ಬೀರಿದೆ ಮತ್ತು ಕೃಷಿ ಹಾಗೂ ಕೃಷಿ ಸಂಬಂಧಿಸಿದ ಚಟುವಟಿಕೆಗಳು ಯಾವ ಸ್ಥಿತಿಯಲ್ಲಿ ನಡೆಯುತ್ತಿವೆ ಎನ್ನುವ ಬಗ್ಗೆ ಸಮಗ್ರವಾಗಿ ಪರಿಶೀಲನೆ ಮಾಡುತ್ತೇವೆ~ ಎಂದು ತಿಳಿಸಿದರು. ಮಾಹಿತಿ ಸಂಗ್ರಹ: ಜಿಲ್ಲೆಯಲ್ಲಿ ಗಣಿಗಾರಿಕೆಯಿಂದ ಪರಿಸರಕ್ಕೆ ಉಂಟಾದ ಹಾನಿ ಕುರಿತು ತಂಡ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಜನಜೀವನದ ಮೇಲೆ ಬೀರಿರುವ ಪರಿಣಾಮಗಳ ಬಗ್ಗೆ ಮಾಹಿತಿ ಸಂಗ್ರಹಿಸಿತು. ವೈಜ್ಞಾನಿಕ ವರದಿ ನೀಡುವಂತೆ ಅಧಿಕಾರಿಗಳಿಗೆ ತಂಡ ಸೂಚಿಸಿತು. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕ ಶ್ರೀನಿವಾಸ್, ಬಳ್ಳಾರಿ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್, ಚಿತ್ರದುರ್ಗ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಹಾಜರಿದ್ದರು. ಗಣಿ ಪ್ರದೇಶಕ್ಕೆ ಭೇಟಿ: ಶುಕ್ರವಾರ ತಾಲ್ಲೂಕಿನ ಭೀಮಸಮುದ್ರ ಸುತ್ತಮುತ್ತ ಇರುವ ಗಣಿ ಪ್ರದೇಶಗಳಿಗೆ ಭೇಟಿ ನೀಡಿದ್ದ ತಂಡ, ಅಲ್ಲಿನ ಸ್ಥಿತಿ ಕಂಡು ಬೆಚ್ಚಿಬಿದ್ದಿತು. ಪರಿಸರ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳದೇ ಗಣಿಗಾರಿಕೆ ಕೈಗೊಂಡಿರುವ ಬಗ್ಗೆ ತಂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.ಅರಣ್ಯಕ್ಕೆ ಉಂಟಾಗಿರುವ ಹಾನಿ, ಅಂತರ್ಜಲ ಕುಸಿತ ಹಾಗೂ ಗಿಡಮರಗಳನ್ನು ಬೆಳೆಸದಿರುವ ಅಂಶಗಳ ಬಗ್ಗೆ ತಂಡ ಅಧ್ಯಯನ ಮಾಡಿತು. ಶನಿವಾರ ಹೊಸದುರ್ಗ ತಾಲ್ಲೂಕಿನ ಲಕ್ಕಿಹಳ್ಳಿಯಲ್ಲಿನ ಗಣಿಗಾರಿಕೆ ನಡೆಯು ತ್ತಿರುವ  ಪ್ರದೇಶಕ್ಕೆ ಭೇಟಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry