ಗಣಿ ಲಂಚ ಪ್ರಕರಣ: ಬಿಎಸ್‌ವೈ ಪುತ್ರರು, ಅಳಿಯನ ವಿಚಾರಣೆ

7

ಗಣಿ ಲಂಚ ಪ್ರಕರಣ: ಬಿಎಸ್‌ವೈ ಪುತ್ರರು, ಅಳಿಯನ ವಿಚಾರಣೆ

Published:
Updated:
ಗಣಿ ಲಂಚ ಪ್ರಕರಣ: ಬಿಎಸ್‌ವೈ ಪುತ್ರರು, ಅಳಿಯನ ವಿಚಾರಣೆ

ಬೆಂಗಳೂರು: ಜಿಂದಾಲ್ ಸಮೂಹದ ಗಣಿ ಕಂಪೆನಿಯಿಂದ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರರಾದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ ಮತ್ತು ಅಳಿಯ ಆರ್.ಎನ್.ಸೋಹನ್‌ಕುಮಾರ್ ಅವರನ್ನು ಸಿಬಿಐ ಅಧಿಕಾರಿಗಳು ಶನಿವಾರ ದೀರ್ಘ ಕಾಲ ವಿಚಾರಣೆ ನಡೆಸಿದರು.ಸಿಬಿಐ ನೋಟಿಸ್‌ನಲ್ಲಿದ್ದ ಸೂಚನೆಯಂತೆ ಮೂವರೂ ಗಂಗಾನಗರದಲ್ಲಿರುವ ಸಿಬಿಐ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿದರು. ರಾಘವೇಂದ್ರ ಅವರನ್ನು ಸುಮಾರು ಆರು ಗಂಟೆಗಳ ಕಾಲ ಪ್ರಶ್ನಿಸಿರುವ ತನಿಖಾ ತಂಡ, ಹಲವು ಪ್ರಶ್ನೆಗಳಿಗೆ ಉತ್ತರ ಪಡೆದಿದೆ. ವಿಜಯೇಂದ್ರ ಅವರನ್ನು ನಾಲ್ಕೂವರೆ ಗಂಟೆಗೂ ಹೆಚ್ಚು ಕಾಲ ಪ್ರಶ್ನಿಸಿದೆ. ಸೋಹನ್‌ಕುಮಾರ್ ಎರಡೂವರೆ ಗಂಟೆಗೂ ಹೆಚ್ಚು ಕಾಲ ವಿಚಾರಣೆ ಎದುರಿಸಿದರು.ಬೆಳಿಗ್ಗೆ 9.30ಕ್ಕೆ ರಾಘವೇಂದ್ರ ಸಿಬಿಐ ಕಚೇರಿಗೆ ಹಾಜರಾದರು. 10 ಗಂಟೆಯಿಂದ ವಿಚಾರಣೆ ಆರಂಭವಾಯಿತು. 11.30ರ ಸುಮಾರಿಗೆ ವಿಜಯೇಂದ್ರ ಸಿಬಿಐ ಕಚೇರಿಗೆ ಬಂದರು. ಇಬ್ಬರನ್ನೂ ಮಧ್ಯಾಹ್ನ 2 ಗಂಟೆಯವರೆಗೂ ಪ್ರಶ್ನಿಸಲಾಯಿತು. ನಂತರ ಮಧ್ಯಾಹ್ನದ ಊಟಕ್ಕಾಗಿ ಹೊರಹೋಗಲು ಇಬ್ಬರಿಗೂ ಅವಕಾಶ ನೀಡಲಾಯಿತು.ಮಧ್ಯಾಹ್ನ 2.30ಕ್ಕೆ ಸೋಹನ್‌ಕುಮಾರ್ ತನಿಖಾ ತಂಡದ ಎದುರು ಹಾಜರಾದರು. 3.30ಕ್ಕೆ ರಾಘವೇಂದ್ರ ಮತ್ತು ವಿಜಯೇಂದ್ರ ಮತ್ತೆ ಹಾಜರಾದರು. ಮೂವರನ್ನೂ ಸಂಜೆ 5.10ರವರೆಗೆ ಪ್ರಶ್ನಿಸಲಾಗಿದೆ. ನಂತರ ಒಂದೇ ವಾಹನದಲ್ಲಿ ಸಿಬಿಐ ಕಚೇರಿಯಿಂದ ಮೂವರೂ ನಿರ್ಗಮಿಸಿದರು. ಆದರೆ, ವಿಚಾರಣೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.ಬೆಂಗಳೂರಿನ ಸಿಬಿಐ ಡಿಐಜಿ ಆರ್.ಹಿತೇಂದ್ರ, ಎಸ್‌ಪಿ ಡಾ.ಸುಬ್ರಹ್ಮಣ್ಯೇಶ್ವರ ರಾವ್, ಪ್ರಕರಣದ ತನಿಖಾಧಿಕಾರಿ ಬಿಸ್ವಜಿತ್ ದಾಸ್ ನೇತೃತ್ವದಲ್ಲಿ ಆರೋಪಿಗಳ ವಿಚಾರಣೆ ನಡೆದಿದೆ. ಸಿಬಿಐನ ಇನ್ನೂ ಕೆಲವು ಅಧಿಕಾರಿಗಳು ವಿಚಾರಣೆಯಲ್ಲಿ ಪಾಲ್ಗೊಂಡಿದ್ದರು. ಮೊದಲು ಆರೋಪಿಗಳನ್ನು ಪ್ರತ್ಯೇಕವಾಗಿ ಪ್ರಶ್ನಿಸಲಾಗಿದೆ.

 

ನಂತರ ಒಟ್ಟಿಗೆ ಕೆಲ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ಸಲ್ಲಿಸಿದ್ದ ವರದಿಯಲ್ಲಿ ಪ್ರಸ್ತಾಪವಾಗಿದ್ದ ವಿಷಯ, ಸುಪ್ರೀಂಕೋರ್ಟ್‌ನ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಸಲ್ಲಿಸಿದ ವರದಿ, ಮೇ 16ರಂದು ಸಿಬಿಐ ವಿವಿಧ ಕಡೆ ದಾಳಿ ನಡೆಸಿ ವಶಪಡಿಸಿಕೊಂಡ ದಾಖಲೆಗಳ ಆಧಾರದಲ್ಲಿ ಮೂವರಿಗೂ ಪ್ರಶ್ನೆಗಳನ್ನು ಕೇಳಲಾಗಿದೆ.ಧವಳಗಿರಿ ಪ್ರಾಪರ್ಟಿ ಡೆವಲಪರ್ಸ್‌ನ ವಹಿವಾಟು, ಪ್ರೇರಣಾ ಶಿಕ್ಷಣ ಸಂಸ್ಥೆಯ ಸ್ವರೂಪ ಮತ್ತು ಅದರ ವ್ಯವಹಾರಗಳು, ರಾಚೇನಹಳ್ಳಿಯಲ್ಲಿ ಅರ್ಕಾವತಿ ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಶಪಡಿಸಿಕೊಂಡಿದ್ದ ಭೂಮಿಯನ್ನು ಅಕ್ರಮವಾಗಿ ಖರೀದಿಸಿರುವುದು, ನಂತರ ಕಾನೂನುಬಾಹಿರವಾಗಿ ಅದನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವುದು, 40 ಲಕ್ಷ ರೂಪಾಯಿಗೆ ಖರೀದಿ ಮಾಡಿದ ಭೂಮಿಯನ್ನು ಗಣಿ ಕಂಪೆನಿಗೆ 20 ಕೋಟಿ ರೂಪಾಯಿಗೆ ಮಾರಾಟ ಮಾಡಿರುವುದು ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಶ್ನಿಸಲಾಗಿದೆ ಎಂದು ತಿಳಿದುಬಂದಿದೆ.ಜಿಂದಾಲ್ ಸಮೂಹದ ಸೌತ್‌ವೆಸ್ಟ್ ಮೈನಿಂಗ್ ಕಂಪೆನಿ ಪ್ರೇರಣಾ ಶಿಕ್ಷಣ ಸಂಸ್ಥೆಗೆ ರೂ 20 ಕೋಟಿ ವಂತಿಗೆ ನೀಡಿರುವುದು, ವಂತಿಗೆಯ ಮೂಲ, ನಷ್ಟದಲ್ಲಿದ್ದ ಕಂಪೆನಿ ಬೇರೊಬ್ಬರಿಂದ ಸಾಲ ಪಡೆದು ವಂತಿಗೆ ನೀಡಲು ಕಾರಣ, ಜಿಂದಾಲ್ ಸಮೂಹದ ಜೊತೆಗಿನ ಸಂಪರ್ಕ ಸೇರಿದಂತೆ ಹಲವು ವಿಯಷಗಳ ಬಗ್ಗೆ ತನಿಖಾ ತಂಡ ಮೂವರನ್ನೂ ಪ್ರಶ್ನಿಸಿದೆ.ವಿಚಾರಣೆಗೆ ಹಾಜರಾಗುವ ಮುನ್ನ ತಾವು ತಂದಿದ್ದ ಕೆಲ ದಾಖಲೆಗಳನ್ನು ರಾಘವೇಂದ್ರ, ವಿಜಯೇಂದ್ರ ಮತ್ತು ಸೋಹನ್‌ಕುಮಾರ್ ಸಿಬಿಐ ಅಧಿಕಾರಿಗಳಿಗೆ ನೀಡಿದ್ದಾರೆ. ತನಿಖಾ ತಂಡ ಕೇಳಿದ ಹಲವು ಪ್ರಶ್ನೆಗಳಿಗೂ ಉತ್ತರ ನೀಡಿದ್ದಾರೆ ಎಂದು ಗೊತ್ತಾಗಿದೆ.ಮತ್ತೆ ವಿಚಾರಣೆ?:  ಮತ್ತೆ ವಿಚಾರಣೆಗೆ ಹಾಜರಾಗುವಂತೆ ಶನಿವಾರ ಮೂವರಿಗೂ ಸೂಚನೆ ನೀಡಿಲ್ಲ. ಅಗತ್ಯವಿದ್ದರೆ ಮತ್ತೊಮ್ಮೆ ಕರೆಯುತ್ತೇವೆ ಎಂದಷ್ಟೇ ತನಿಖಾಧಿಕಾರಿಗಳು ಆರೋಪಿಗಳಿಗೆ ತಿಳಿಸಿದ್ದಾರೆ. ಭಾನುವಾರ ವಿಚಾರಣೆ ನಡೆಸುವ ಸಾಧ್ಯತೆ ಇಲ್ಲ. ಸೋಮವಾರ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಮೂವರಿಗೂ ಸೂಚನೆ ನೀಡುವ ಸಂಭವವಿದೆ ಎನ್ನಲಾಗಿದೆ.ಪ್ರಕರಣದ ಮೊದಲನೇ ಆರೋಪಿಯಾಗಿರುವ ಯಡಿಯೂರಪ್ಪ ಅವರಿಗೆ ನೋಟಿಸ್ ನೀಡುವ ಕುರಿತು ತನಿಖಾಧಿಕಾರಿಗಳು ಈವರೆಗೂ ನಿರ್ಧಾರ ಕೈಗೊಂಡಿಲ್ಲ.ಜಿಂದಾಲ್ ಸಮೂಹದ ಪ್ರಮುಖರು, ಶಾಸಕ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಮತ್ತಿತರರ ವಿಚಾರಣೆಯ ನಂತರ ಯಡಿಯೂರಪ್ಪ ಅವರಿಗೆ ನೋಟಿಸ್ ನೀಡಲು ಸಿಬಿಐ ಅಧಿಕಾರಿಗಳು ಯೋಚಿಸಿದ್ದಾರೆ ಎಂದು ತಿಳಿದುಬಂದಿದೆ.

ದಿನವಿಡೀ ಕುತೂಹಲ

ಸಿಬಿಐ ಕಚೇರಿಯೊಳಗೆ ಯಡಿಯೂರಪ್ಪ ಅವರ ಪುತ್ರರು ಮತ್ತು ಅಳಿಯನ ವಿಚಾರಣೆ ನಡೆಯುತ್ತಿದ್ದರೆ ಹೊರಗೆ ಕುತೂಹಲ ಮನೆ ಮಾಡಿತ್ತು. ಗಂಗಾನಗರದ ಸಿಬಿಐ ರಸ್ತೆಯಲ್ಲಿ ಹೋಗುವವರೆಲ್ಲ ಮೂವರ ಬಂಧನವಾಗಬಹುದೇ ಎಂಬ ಪ್ರಶ್ನೆಯನ್ನು ಅಲ್ಲಿ ನಿಂತಿದ್ದ ಪೊಲೀಸರಿಗೆ, ಮಾಧ್ಯಮ ಪ್ರತಿನಿಧಿಗಳಿಗೆ ಎಸೆಯುತ್ತಿದ್ದರು.ರಾಘವೇಂದ್ರ, ವಿಜಯೇಂದ್ರ ಮತ್ತು ಸೋಹನ್‌ಕುಮಾರ್ ವಿಚಾರಣೆ ಹಿನ್ನೆಲೆಯಲ್ಲಿ ಸಿಬಿಐ ಕಚೇರಿಗೆ ಬಿಗಿ ಭದ್ರತೆ ಒದಗಿಸಲಾಗಿತ್ತು. ವಿಚಾರಣೆ ಅವಧಿಯಲ್ಲಿ ಸಿಬಿಐ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಾತ್ರ ಒಳಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಬೆಳಿಗ್ಗೆ ಕಚೇರಿ ಒಳಕ್ಕೆ ಹೋದ ಸಿಬಿಐ ಅಧಿಕಾರಿಗಳು ವಿಚಾರಣೆ ಮುಗಿಯುವವರೆಗೂ ಹೊರಗೆ ಕಾಣಿಸಿಕೊಳ್ಳಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry