ಗಣಿ: ಲೋಕಾಯುಕ್ತಕ್ಕೆ ಪತ್ರ

7

ಗಣಿ: ಲೋಕಾಯುಕ್ತಕ್ಕೆ ಪತ್ರ

Published:
Updated:

ಬೆಂಗಳೂರು: ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯನ್ನು ಪರಿಶೀಲಿಸಲು ನೇಮಿಸಿದ್ದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಆ ಕುರಿತು ಇದೇ 28ರಂದು ನಡೆಯುವ ಸಂಪುಟ ಸಭೆ ತೀರ್ಮಾನ ತೆಗೆದುಕೊಳ್ಳಲಿದೆ.ಈ ವಿಷಯವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರು ಲೋಕಾಯುಕ್ತ ರಿಜಿಸ್ಟ್ರಾರ್ ಅವರಿಗೆ ಬುಧವಾರ ಪತ್ರದ ಮೂಲಕ ತಿಳಿಸಿದ್ದಾರೆ. ಜುಲೈ 27ರಂದು ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.ಅದರ ನಂತರ ರಾಜ್ಯ ಸರ್ಕಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್ ನೇತೃತ್ವದ ಸಮಿತಿ ರಚಿಸಿ, ಅದರ ಪರಿಶೀಲನೆಗೆ ಸೂಚಿಸಿತ್ತು. ಈ ಸಮಿತಿ ಇದೇ 24ರಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಅದರಲ್ಲಿನ ಶಿಫಾರಸುಗಳ ಕುರಿತು ಇದೇ 28ರಂದು ನಡೆಯುವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು.ಸಂಪುಟ ಸಭೆ ತೆಗೆದುಕೊಳ್ಳುವ ನಿರ್ಧಾರದಂತೆ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಲೋಕಾಯುಕ್ತಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.ಲೋಕಾಯುಕ್ತರು ವರದಿ ಕೊಟ್ಟ ನಂತರ 90 ದಿನಗಳ ಒಳಗೆ ಅದರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇದೇ 27ಕ್ಕೆ 90 ದಿನ ಆಗಲಿದ್ದು, ಅದರೊಳಗೆ ಸರ್ಕಾರ ಏನೆಲ್ಲ ಕ್ರಮ ತೆಗೆದುಕೊಂಡಿದೆ ಎಂಬುದನ್ನು ಲೋಕಾಯುಕ್ತಕ್ಕೆ ಮನವರಿಕೆ ಮಾಡಿಕೊಡಲು ಈ ಪತ್ರ ಬರೆಯಲಾಗಿದೆ ಎನ್ನಲಾಗಿದೆ.ಸಂಪುಟ ಸಭೆ ತೆಗೆದುಕೊಳ್ಳುವ ತೀರ್ಮಾನಗಳ ಬಗ್ಗೆಯೂ ನಂತರ ಲೋಕಾಯುಕ್ತಕ್ಕೆ ತಿಳಿಸುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry