ಶುಕ್ರವಾರ, ಜೂನ್ 25, 2021
29 °C

ಗಣಿ ಹಂಚಿಕೆ ಪಾರದರ್ಶಕವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಸರ್ಕಾರದ ಕುತ್ತಿಗೆಯನ್ನು ಸುತ್ತಿಕೊಂಡಿರುವ ಕಲ್ಲಿದ್ದಲು ಹಗರಣದ ಹಗ್ಗ ಸದ್ಯಕ್ಕೆ ಸಡಿಲವಾಗಿದೆಯಾದರೂ ಮುಂದಿನ ದಿನಗಳಲ್ಲಿ ಅದು ಪ್ರಧಾನಿ ಮನಮೋಹನ ಸಿಂಗ್ ಅವರ ಉಸಿರು ಕಟ್ಟಿಸುವ ಸಾಧ್ಯತೆ ಇದ್ದಂತಿದೆ. ಕಾಮನ್‌ವೆಲ್ತ್ ಗೇಮ್ಸ ಮತ್ತು 2 ಜಿ ಹಗರಣದ ಸುಳಿಯಿಂದ ಹೊರಬರಲು ಇನ್ನೂ ಕೇಂದ್ರ ಸರ್ಕಾರ ಹೆಣಗುತ್ತಿರುವ ಈ ಸನ್ನಿವೇಶದಲ್ಲಿ ಹೊರಬಿದ್ದಿರುವ ಕಲ್ಲಿದ್ದಲು ಹಗರಣ ಪ್ರಧಾನಿ ಅವರ ಹಿಡಿತವಿಲ್ಲದ ಮತ್ತು ಮುನ್ನೋಟವಿಲ್ಲದ ಆಡಳಿತ ವೈಖರಿಗೆ ಹಿಡಿದ ಕನ್ನಡಿಯಾಗಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಮೊದಲ ಅವಧಿಯಲ್ಲಿ ಹರಾಜು ಮಾಡದೆ, ಹಂಚಿಕೆ ಮಾಡಲಾದ ಕಲ್ಲಿದ್ದಲು ಗಣಿ ಗುತ್ತಿಗೆಯಲ್ಲಿ 10.6 ಲಕ್ಷ ಕೋಟಿ ರೂಪಾಯಿಗಳಷ್ಟು ಹಣ ಸರ್ಕಾರಕ್ಕೆ ನಷ್ಟವಾಗಿದೆ ಎಂದು ಮಹಾಲೇಖಪಾಲಕರ (ಸಿಎಜಿ) ವರದಿ ತಿಳಿಸಿದೆ ಎಂಬ ಮಾಹಿತಿಯನ್ನು ಈಗಾಗಲೇ ಅಲ್ಲಗಳೆಯಲಾಗಿದೆ. ಆದರೆ ಆ ಲೆಕ್ಕಾಚಾರ ಅಂತಿಮವಾದುದಲ್ಲ, ವಿಷಯಕ್ಕೆ ಸಂಬಂಧಿಸಿದ ಸಮಾಲೋಚನೆಯಲ್ಲಿ ಕಂಡು ಬಂದ ಅಂಶಗಳಷ್ಟೆ ಎಂದು ಸಿಎಜಿಯೇ ಸ್ಪಷ್ಟನೆ ನೀಡಿರುವುದರಿಂದ ಕೇಂದ್ರ ಸರ್ಕಾರ ತಾತ್ಕಾಲಿವಾಗಿ ಮುಜುಗರದಿಂದ ಪಾರಾಗಿದೆ. ಆದರೆ ಅಂತಿಮ ವರದಿ ಒಂದೆರಡು ವಾರಗಳಲ್ಲಿ ಬಹಿರಂಗವಾಗಲಿದ್ದು ಸರ್ಕಾರದ ನಿಜವಾದ ಬಣ್ಣ ಬಯಲಾಗಲಿದೆ. ಈಗ ಬಹಿರಂಗವಾಗಿರುವ ಮಾಹಿತಿ ಅಂತಿಮವಲ್ಲದಿದ್ದರೂ 155 ಕಲ್ಲಿದ್ದಲು ಗಣಿಗಳ ಹಂಚಿಕೆಯಲ್ಲಿ ಅನುಸರಿಸಿದ ವಿಧಾನದಿಂದ ಹಲವು ಖಾಸಗಿ ಕಂಪನಿಗಳಿಗೆ ಅನಿರೀಕ್ಷಿತ ಲಾಭವಾಗಿದೆ ಎನ್ನುವುದು ಮೇಲ್ನೋಟಕ್ಕೇ ಕಾಣುತ್ತಿದೆ ಎಂದು ಸಂಸತ್ತಿನ ಎರಡೂ ಸದನಗಳಲ್ಲಿ ವಿರೋಧಿ ಸದಸ್ಯರು ಕೋಲಾಹಲ ಎಬ್ಬಿಸಿದ್ದಾರೆ. ಸರ್ಕಾರಕ್ಕೆ ಆದ ನಷ್ಟ ಎಷ್ಟು ಮತ್ತು ಖಾಸಗಿ ಕಂಪೆನಿಗಳಿಗೆ ಆದ ಲಾಭ ಎಷ್ಟು ಎನ್ನುವುದು ಮತ್ತು ಅದು ಉದ್ದೇಶಪೂರ್ವಕವೇ ಅಥವಾ ಅಲ್ಲವೇ ಎನ್ನುವುದು ಬೇರೆ ವಿಚಾರ. ಆದರೆ ನಷ್ಟ ನಷ್ಟವೇ. ಈ ವಿಚಾರದಲ್ಲಿ ಆಗ ಕಲ್ಲಿದ್ದಲು ಗಣಿ ಖಾತೆ ಜವಾಬ್ದಾರಿಯನ್ನು ಹೊತ್ತಿದ್ದ ಮನಮೋಹನ ಸಿಂಗ್ ಅವರು ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಲಕ್ಷ, ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರವನ್ನೂ ಪ್ರಧಾನಿಯಾದವರು ಗಮನಿಸಲು ಸಾಧ್ಯವಿಲ್ಲ ಅಥವಾ ಅವರ ಕಣ್ಣೆದಿರೇ ಆಗುತ್ತಿದ್ದರೂ ಸುಮ್ಮನಿರುತ್ತಾರೆ ಎಂದರೆ ಅವರ ಸಾಮರ್ಥ್ಯದ ಬಗ್ಗೆಯೇ ಗಂಭೀರ ಅನುಮಾನಗಳು ಏಳುತ್ತವೆ. ಹಿಂದಿನಿಂದ ಅನುಸರಿಸಿದ ನೀತಿಯ ಅನ್ವಯವೇ ಕಲ್ಲಿದ್ದಲು ಗಣಿ ಹಂಚಿಕೆ ಮಾಡಲಾಗಿದೆ ಎಂದು ಕಲ್ಲಿದ್ದಲು ಸಚಿವರು ಹೇಳಿದ್ದಾರೆ. ಜನರಿಗೆ ಕಡಿಮೆ ದರದಲ್ಲಿ ವಿದ್ಯುತ್ ಸಿಗುವಂತಾಗಲು ಆ ರೀತಿ ಗಣಿ ಹಂಚಿಕೆ ಮಾಡಲಾಗಿದೆ ಎಂಬ ವಾದವನ್ನೂ ಸರ್ಕಾರ ಮುಂದಿಟ್ಟಿದೆ. ಈ ವಾದದಲ್ಲಿ ಹುರುಳಿದೆಯೇ ಅಥವಾ ಮೋಸ ನಡೆದಿದೆಯೇ, ನಷ್ಟದ ಪ್ರಮಾಣ ಎಷ್ಟು ಎನ್ನುವುದು ತನಿಖೆಯಿಂದ ಮಾತ್ರ ತಿಳಿದೀತು. ಮೊಂಡು ವಾದ ಮಾಡುವುದನ್ನು ಬಿಟ್ಟು ಕೇಂದ್ರ ಸರ್ಕಾರ ಸಮಗ್ರ ತನಿಖೆ ನಡೆಸಬೇಕು. ಭಾರತ ಉದಾರೀಕರಣ ನೀತಿಗಳಿಗೆ ತೆರೆದುಕೊಂಡ ಮೇಲೆ ಉದ್ಭವವಾಗುತ್ತಿರುವ ಇಂಥ ಹಗರಣಗಳು ಮರುಕಳಿಸದಂತೆ ಮಾಡಲು ವಾಣಿಜ್ಯ ಮುಖವಿರುವ ಎಲ್ಲ ಕ್ಷೇತ್ರಗಳ ನೀತಿಗಳನ್ನು ಪುನರ್‌ಪರಿಶೀಲನೆಗೆ ಒಳಪಡಿಸಿ ಹೆಚ್ಚು ಪಾರದರ್ಶಕವಾದ ಮತ್ತು ಜನಪರವಾದ ನೀತಿಗಳನ್ನು ರೂಪಿಸುವುದು ಒಳಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.