ಗುರುವಾರ , ಅಕ್ಟೋಬರ್ 17, 2019
22 °C

ಗಣಿ ಹಗರಣ: ಮುಂದುವರಿದ ರೆಡ್ಡಿ ನ್ಯಾಯಾಂಗ ಬಂಧನ

Published:
Updated:

 

ಹೈದರಾಬಾದ್, (ಪಿಟಿಐ): ಓಬಳಾಪುರಂ ಗಣಿ ಕಂಪೆನಿಯು ನಡೆಸಿದ ಅಕ್ರಮ ಗಣಿಗಾರಿಕೆ ಪ್ರಕರಣದ ಪ್ರಮುಖ ಆಪಾದಿತರಾಗಿರುವ ಕರ್ನಾಟಕದ ಬಿಜೆಪಿ ಸರ್ಕಾರದ ಯಡಿಯೂರಪ್ಪ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದ, ಮಾಜಿ ಸಚಿವ ಗಾಳಿ ಜನಾರ್ದನ ರೆಡ್ಡಿ ಹಾಗೂ ಇತರ ಮೂವರು ಆಪಾದಿತರ ನ್ಯಾಯಾಂಗ ಬಂಧನದ ಅವಧಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ಗುರುವಾರ ಮತ್ತೆ  ಜನವರಿ 25ರವರೆಗೆ ವಿಸ್ತರಿಸಿದೆ.

ಕೇಂದ್ರ ತನಿಖಾ ಸಂಸ್ಥೆ ಸಿಬಿಐ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಮೇಲೆ ಕಳೆದ ಸಾಲಿನ ಸೆಪ್ಟಂಬರ್ ತಿಂಗಳಿನಲ್ಲಿ  ಜನಾರ್ದನ ರೆಡ್ಡಿ ಮತ್ತು  ಅವರ ಭಾವ ಓಎಂಸಿಯ ಆಡಳಿತ ನಿರ್ದೇಶಕ  ಬಿ.ವಿ.ಶ್ರೀನಿವಾಸ ರೆಡ್ಡಿ ಅವರನ್ನು ನೆರೆಯ ಕರ್ನಾಟಕದ ಬಳ್ಳಾರಿಯಲ್ಲಿ ಬಂಧಿಸಿತ್ತು. ಅವರು ಅಂದಿನಿಂದ ಇಂದಿನವರೆಗೆ ಇಲ್ಲಿನ ಚಂಚಲಗುಡ ಜೈಲಿನಲ್ಲಿದ್ದಾರೆ.

ಇದಲ್ಲದೇ, ಅಕ್ರಮ ಗಣಿಗಾರಿಕೆಗೆ ಅನುಕೂಲ ಮಾಡಿಕೊಟ್ಟ ಆರೋಪದ ಮೇಲೆ ನ್ಯಾಯಾಂಗದ ಬಂಧನದಲ್ಲಿರುವ ಹಿರಿಯ ಅಧಿಕಾರಿಗಳಾದ ಆಂಧ್ರ ಪ್ರದೇಶದ ಗಣಿ ಇಲಾಖೆಯ ಮಾಜಿ ನಿರ್ದೇಶಕ ವಿ.ಡಿ.ರಾಜಗೋಪಾಲ್ ಹಾಗೂ ವಜಾಗೊಂಡಿರುವ ಆಂಧ್ರ ಪ್ರದೇಶದ ಐಎಎಸ್ ಅಧಿಕಾರಿ ವೈ. ಶ್ರೀಲಕ್ಷ್ಮಿ ಅವರ ನ್ಯಾಯಾಂಗ ಬಂಧನದ ಅವಧಿಯನ್ನು  ಸಿಬಿಐ ವಿಶೇಷ ನ್ಯಾಯಾಲಯ ಜನವರಿ 25ರ ವರೆಗೆ ವಿಸ್ತರಿಸಿದೆ.

ಸಿಬಿಐ ವಿಶೇಷ ನ್ಯಾಯಾಲಯವು ಗುರುವಾರ ಅಕ್ರಮ ಗಣಿಗಾರಿಕೆಯ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿ ಜೈಲಿನಲ್ಲಿರುವ  ಆರೋಪಿಗಳ ಜೊತೆ ವಿಡಿಯೋ ಕಾನ್ಫರನ್ಸ್ ಮೂಲಕ ನ್ಯಾಯಾಲಯದ ಕಲಾಪ ನಡೆಸಿತು.

ಜನಾರ್ದನ ರೆಡ್ಡಿ ಮಾಲಿಕತ್ವದ ಓಬಳಾಪುರಂ ಗಣಿ ಕಂಪೆನಿಯು ಆಂಧ್ರ ಪ್ರದೇಶದ ಅನಂತಪುರ ಮತ್ತು ಕರ್ನಾಟಕದ ಬಳ್ಳಾರಿ ಜಿಲ್ಲೆಯ ರಕ್ಷಿತಾರಣ್ಯ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದೆ ಎಂದು ಆರೋಪಿಸಿ ಸಿಬಿಐ 2009ರಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿತ್ತು.

Post Comments (+)