ಗುರುವಾರ , ನವೆಂಬರ್ 21, 2019
20 °C

ಗಣೇಕಲ್ ಜಲಾಶಯ ಭರ್ತಿಗೆ ಆದೇಶ

Published:
Updated:

ರಾಯಚೂರು: ರಾಯಚೂರು ನಗರಕ್ಕೆ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗುವ ಹಿನ್ನೆಲೆಯಲ್ಲಿ ಗಣೇಕಲ್ ಜಲಾಶಯಕ್ಕೆ 15 ಅಡಿ ನೀರು ಭರ್ತಿ ಮಾಡಲು ಭಾನುವಾರ ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್ ಅವರು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.ಭಾನುವಾರ ತಮ್ಮ ಕಚೇರಿಯಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಿದ ಸಂದರ್ಭದಲ್ಲಿ ಈ ಆದೇಶ ನೀಡಿದ್ದಾರೆ.

ತುಂಗಭದ್ರಾ ಎಡದಂಡೆ ಕಾಲುವೆಗೆ ಭಾನುವಾರ ರಾತ್ರಿಯಿಂದ ನೀರು ಬಿಡುವುದು ಸ್ಥಗಿತವಾಗಲಿದೆ. ಹೀಗಾಗಿ ಕಾಲುವೆಯಲ್ಲಿ ಹರಿದು ಬರುವ ನೀರನ್ನು ಎಲ್ಲಿಯೂ ಪೋಲಾಗದಂತೆ ಎಚ್ಚರಿಕೆ ವಹಿಸಿ ಗಣೇಕಲ್ ಜಲಾಶಯಕ್ಕೆ ಹರಿಸಿ ಭರ್ತಿ ಮಾಡಲು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಮುನಿರಾಬಾದ್‌ನ ಮುಖ್ಯ ಎಂಜಿನಿಯರ್ ಮಲ್ಲಿಕಾರ್ಜುನ ಅವರಿಗೆ ಸೂಚಿಸಿದರು.ಏಪ್ರಿಲ್ 4ರವರೆಗೂ ನೀರು ಕಾಲುವೆಯಲ್ಲಿ ಹರಿಸಬೇಕು. ಇದರಿಂದ ಜಲಾಶಯ ಭರ್ತಿಗೆ ಸಹಕಾರಿ ಆಗಲಿದೆ ಎಂದು ಜಿಲ್ಲಾಧಿಕಾರಿ ಘೋಷ್ ಅವರು ಮುನಿರಾಬಾದ್ ಮುಖ್ಯ ಎಂಜಿನಿಯರ್ ಮಲ್ಲಿಕಾರ್ಜುನ ಅವರಿಗೆ ಕೋರಿದರು.ಆದರೆ, ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯ ಉಲ್ಲಂಘನೆ ಆಗುತ್ತದೆ. ಇದೇ ದಿನ ಮಧ್ಯರಾತ್ರಿಯಿಂದ ನೀರು ಕಾಲುವೆಗೆ ಹರಿಸುವುದು ಬಂದ್ ಆಗಲಿದೆ. ಮುನಿರಾಬಾದ್ ಜಲಾಶಯದಲ್ಲಿ ನೀರಿಲ್ಲ ಎಂದು ವಿವರಿಸಿದರು.ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಈ ನಿರ್ಧಾರ ಪುನರ್ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಗಣೇಕಲ್ ಜಲಾಶಯದಲ್ಲಿ ಸದ್ಯ 9 ಅಡಿ ನೀರಿದೆ. 6 ಅಡಿ ಭರ್ತಿ ಆದರೆ 15 ಅಡಿ ಆಗುತ್ತದೆ. ನೀರಿನ ಸಮಸ್ಯೆ ಹೋಗಲಾಡಿಸಬಹುದು ಎಂದು ಹೇಳಿದರು.

ಪ್ರತಿಕ್ರಿಯಿಸಿ (+)