ಗಣೇಶನಿಗೆ ನೈವೇದ್ಯ..

7

ಗಣೇಶನಿಗೆ ನೈವೇದ್ಯ..

Published:
Updated:

ಗೌರಿ–ಗಣೇಶ ಹಬ್ಬದ ಸವಿಯೂಟ

ಗೌರಿ ಗಣೇಶನ ಹಬ್ಬಕ್ಕೆ ಹಳ್ಳಿಮನೆಯಲ್ಲಿ ಅದ್ದೂರಿಯ ಸಿದ್ಧತೆ ನಡೆದಿದೆ. ಸೆಪ್ಪೆಂಬರ್ 8 ಹಾಗೂ 9ರಂದು ಮಲ್ಲೇಶ್ವರದಲ್ಲಿರುವ ಹಳ್ಳಿಮನೆ ತಳಿರು ತೋರಣದಿಂದ ಸಿಂಗಾರಗೊಂಡು ಗೌರಿ ಗಣೇಶನ ಹಬ್ಬಕ್ಕೆ ಜನರನ್ನು ಆಮಂತ್ರಿಸುತ್ತಿದೆ.ಈ ಬಾರಿ ಹಬ್ಬದೂಟದ ಸ್ವರೂಪ ಸ್ವಲ್ಪ ಭಿನ್ನವಾಗಿದೆ. ಪ್ರತಿದಿನವೂ 35 ಬಗೆಯ ತಿಂಡಿ–ತಿನಿಸು ಗ್ರಾಹಕರ ಬಾಯಿರುಚಿಯನ್ನು ತಣಿಸಲಿವೆ. ಸುವರ್ಣ ಗಡ್ಡೆ ಪಲ್ಯ, ಗೋಡಂಬಿ ಪಲ್ಯ, ಕೋಕಂ ಪಾನೀಯ ಹೀಗೆ ನಾನಾ ರೀತಿಯ ತಿನಿಸುಗಳು ಇವೆ.ಕುಟುಂಬದವರ ಜತೆ ಮನೆಯಲ್ಲೇ ಹಳ್ಳಿ ಮನೆಯ ಸವಿಯೂಟವನ್ನು ಆಸ್ವಾದಿಸಬೇಕೆನ್ನುವವರಿಗೆ ಪಾರ್ಸೆಲ್ ಸೇವೆ ಕೂಡ ಹಳ್ಳಿಮನೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ: 99457 61283.

ಕಜ್ಜಾಯ

ಬೇಕಾಗುವ ಸಾಮಗ್ರಿ
: ಅಕ್ಕಿ ಒಂದು ಲೋಟ, ಬೆಲ್ಲ  300 ಗ್ರಾಂ, ಏಲಕ್ಕಿ ಬಾಳೆಹಣ್ಣು  2, ಎಳ್ಳು - ಸ್ವಲ್ಪ, ಏಲಕ್ಕಿ ಪುಡಿ ಸ್ವಲ್ಪ

ಮಾಡುವ ವಿಧಾನ: ಅಕ್ಕಿಯನ್ನು ನೀರಲ್ಲಿ ನೆನೆಸಿ ನಂತರ ನೀರನ್ನು ಬಸಿದು, ನೆರಳಲ್ಲಿ ಒಣಗಿಸಬೇಕು. ನಂತರ ಹಿಟ್ಟು ಮಾಡಿಡಬೇಕು. ಬೆಲ್ಲದ ಪಾಕ ತೆಗೆದು ಪಾಕಕ್ಕೆ ಅಕ್ಕಿ ಹಿಟ್ಟು, ಎಳ್ಳು, ಬಾಳೆಹಣ್ಣು ಹಾಕಿ ತಂಬಿಟ್ಟು ಮಾಡಿಕೊಂಡು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ  ಪ್ಲಾಸ್ಟಿಕ್ ಹಾಳೆಯ ಮೇಲೆ ತಟ್ಟಿ ಎಣ್ಣೆಯಲ್ಲಿ ಕರಿಯಬೇಕು.ಕೊಬ್ಬರಿ ಮಿಠಾಯಿ

ಬೇಕಾಗುವ ಸಾಮಗ್ರಿ:
ಸಕ್ಕರೆ 1 ಪಾವು, ತೆಂಗಿನ ತುರಿ 1 ಪಾವು, ಏಲಕ್ಕಿ ಪುಡಿ ಸ್ವಲ್ಪ. ಮಾಡುವ ವಿಧಾನ: ಸಕ್ಕರೆ, ತೆಂಗಿನ ತುರಿ ಮತ್ತು ಏಲಕ್ಕಿ ಪುಡಿಯನ್ನು ಮಿಕ್ಸ್ ಮಾಡಿ ಅರ್ಧ ಗಂಟೆಯ ನಂತರ ದಪ್ಪ ತಳದ ಪಾತ್ರೆಯಲ್ಲಿ ಇಟ್ಟು ಕೈ ಆಡಿಸುತ್ತಾ ಇರಬೇಕು. ಹದವಾದ ಪಾಕ ಬಂದ ಮೇಲೆ ತುಪ್ಪ ಸವರಿದ ತಟ್ಟೆಗೆ ಸುರಿದು ಸ್ವಲ್ಪ ಆರಿದ ಮೇಲೆ ಬೇಕಾದ ಆಕಾರದಲ್ಲಿ ಕತ್ತರಿಸಬೇಕು.ಕಡ್ಲೆಕಾಳು ಉಸಲಿ

ಕಡ್ಲೆಕಾಳನ್ನು ಹಿಂದಿನ ದಿನ ನೆನೆಸಿರಬೇಕು. ಮಾರನೆಯ ದಿನ ಕಾಳನ್ನು ಚೆನ್ನಾಗಿ ಬೇಯಿಸಿಕೊಳ್ಳಬೇಕು. ಉಪ್ಪು, ತೆಂಗಿನಕಾಯಿ ತುರಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವು ಎಲ್ಲವನ್ನು ರುಬ್ಬಿಕೊಳ್ಳಬೇಕು. ಬಾಣಲಿಯಲ್ಲಿ ಒಗ್ಗರಣೆ ಇಟ್ಟು ರುಬ್ಬಿದ ಮಿಶ್ರಣ ಹಾಕಿ ಹತ್ತು ನಿಮಿಷಗಳ ಕಾಲ ಚೆನ್ನಾಗಿ ಬಿಸಿ ಮಾಡಬೇಕು.ಮಿಕ್ಸ್ಚರ್

ಬೇಕಾಗುವ ಸಾಮಗ್ರಿ
: ಕಡ್ಲೆ ಹಿಟ್ಟು 1 ಕಪ್ ಹುರಿದ ಕಡಲೆಕಾಯಿ ಬೀಜ ಸ್ವಲ್ಪ ಹುರಿಗಡಲೆ ಸ್ವಲ್ಪ, ಒಣಕೊಬ್ಬರಿ ತುಂಡುಗಳು ಸ್ವಲ್ಪ, ಹುರಿದಿರುವ ಗೋಡಂಬಿ ಸ್ವಲ್ಪ, ಕಾರದಪುಡಿ ಸ್ವಲ್ಪ, ಉಪ್ಪು, ಎಣ್ಣೆ.   ಮಾಡುವ ವಿಧಾನ: ಕಡ್ಲೆಹಿಟ್ಟಿಗೆ ಸ್ವಲ್ಪ ಎಣ್ಣೆ, ಉಪ್ಪು, ಕಾರದ ಪುಡಿ ಹಾಗೂ ನೀರು ಹಾಕಿ ಗಟ್ಟಿಯಾಗಿ ಕಲಸಿಕೊಳ್ಳಬೇಕು. ಈ ಹಿಟ್ಟಿನ್ನು ಚಕ್ಕುಲಿ ಒರಳಿಗೆ ಹಾಕಿ ಕಾದ ಎಣ್ಣೆಯಲ್ಲಿ  ಕರಿಯಬೇಕು. ನಂತರ ಅದಕ್ಕೆ ಹುರಿದ ಕಡಲೆಕಾಯಿ ಬೀಜ, ಒಣಕೊಬ್ಬರಿ, ಹುರಿದಿರುವ ಗೋಡಂಬಿ, ಹುರಿಗಡಲೆ   ಮಿಶ್ರಣ ಮಾಡಿದರೆ ಮಿಕ್ಸ್ಚರ್ ರೆಡಿ.ಪಂಚ ಕಜ್ಜಾಯ

ಬೇಕಾಗುವ ಸಾಮಗ್ರಿ
: ಬಿಳಿ ಎಳ್ಳು ಅರ್ಧ ಕಪ್ ಕಡಲೆಕಾಯಿ ಬೀಜ ಒಂದು ಕಪ್ ಹುರಿಗಡಲೆ ಒಂದು ಕಪ್ ಕೊಬ್ಬರಿ ತುಂಡುಗಳು ಸ್ವಲ್ಪ

ಬೆಲ್ಲ ಚಿಕ್ಕ ಚಿಕ್ಕ ತುಂಡು ಸ್ವಲ್ಪ ಮಾಡುವ ವಿಧಾನ: ಎಳ್ಳು, ಕಡಲೆಕಾಯಿ ಬೀಜ, ಹುರಿಗಡಲೆ ಎಲ್ಲವನ್ನು ಹುರಿದುಕೊಳ್ಳಬೇಕು. ಕಡಲೆಕಾಯಿ ಬೀಜದ ಸಿಪ್ಪೆ ತೆಗೆದಿರಬೇಕು. ನಂತರ ಎಲ್ಲಾ ಪದಾರ್ಥಗಳನ್ನು ಮಿಕ್ಸ್ ಮಾಡಿದರೆ ರುಚಿಕರವಾದ ಪಂಚ ಕಜ್ಜಾಯ ರೆಡಿ.ಪಾಯಸ

ಬೇಕಾಗುವ ಸಾಮಗ್ರಿ:


ಶ್ಯಾವಿಗೆ 1 ಕಪ್, ಸಕ್ಕರೆ 1 ಕಪ್ ತುಪ್ಪ ಸ್ವಲ್ಪ, ಗೋಡಂಬಿ, ದ್ರಾಕ್ಷಿ, ಏಲಕ್ಕಿ, ಕೇಸರಿ ಸ್ವಲ್ಪ ಮಾಡುವ ವಿಧಾನ: ಶ್ಯಾವಿಗೆಯನ್ನು ಸ್ವಲ್ಪ ತುಪ್ಪ ಹಾಕಿ ಹುರಿದು ಹಾಲಿನಲ್ಲಿ ಬೇಯಿಸಿಕೊಳ್ಳಬೇಕು. ನಂತರ ಅದಕ್ಕೆ ಮತ್ತೆ ಸ್ವಲ್ಪ ಹಾಲು ಸಕ್ಕರೆ, ಏಲಕ್ಕಿ ಪುಡಿ, ಕೇಸರಿ ಹಾಕಬೇಕು. ಕೊನೆಯಲ್ಲಿ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಹಾಕಬೇಕು.ಶಂಕರ ಪೋಳಿ

ಬೇಕಾಗುವ ಸಾಮಗ್ರಿ
:

ಮೈದಾ ಹಿಟ್ಟು 1 ಪಾವು ಬೆಣ್ಣೆ 100 ಗ್ರಾಂ, ಉಪ್ಪು ಸ್ವಲ್ಪ, ಎಣ್ಣೆ ಮಾಡುವ ವಿಧಾನ: ಮೈದಾಹಿಟ್ಟಿಗೆ  ಬೆಣ್ಣೆ, ಸ್ವಲ್ಪ ಉಪ್ಪು ಹಾಕಿ ಮೃದುವಾಗಿ ಕಲಸಿಡಬೇಕು. ನಂತರ ಅದನ್ನು ಚಪಾತಿ ತರಹ ಲಟ್ಟಿಸಿ ಬೇಕಾದ ಆಕಾರದಲ್ಲಿ ಕತ್ತರಿಸಿ ಎಣ್ಣೆಯಲ್ಲಿ ಕರಿಯಬೇಕು.ಲಾಡು

ಬೇಕಾಗುವ ಸಾಮಗ್ರಿ:


ಕಡಲೆ ಹಿಟ್ಟು 2 ಕಪ್ ಸಕ್ಕರೆ 2 ಕಪ್ ಗೋಡಂಬಿ, ದ್ರಾಕ್ಷಿ, ಬಾದಾಮಿ - ಸ್ವಲ್ಪ ಏಲಕ್ಕಿ ಪುಡಿ - ಸ್ವಲ್ಪ ಮಾಡುವ ವಿಧಾನ: ಕಡ್ಲೆ ಹಿಟ್ಟನ್ನು ದೋಸೆ ಹಿಟ್ಟಿನ ಹದಕ್ಕೆ ಕಲಸಿ ಅದನ್ನು ಜಾರಾದಲ್ಲಿ ಹಾಕಿ ಬೂಂದಿ ಮಾಡಿಕೊಂಡು ಎಣ್ಣೆಯಲ್ಲಿ ಕರಿಯಬೇಕು. ಸಕ್ಕರೆ ಪಾಕವನ್ನು ಮಾಡಿಟ್ಟುಕೊಂಡು ಅದರಲ್ಲಿ ಕರಿದ ಬೂಂದಿ ಕಾಳುಗಳನ್ನು ಹಾಕಿ ತೆಗೆದು ಅದಕ್ಕೆ ಗೋಡಂಬಿ, ದ್ರಾಕ್ಷಿ, ಬಾದಾಮಿ, ಏಲಕ್ಕಿ ಪುಡಿ  ಎಲ್ಲವನ್ನೂ ಹಾಕಿ  ಉಂಡೆ ಕಟ್ಟಿದರೆ ಲಾಡು ರೆಡಿ.ಬೇಸನ್ ಲಾಡು

ಬೇಕಾಗುವ ಸಾಮಗ್ರಿ:


ಹೆಸರುಬೇಳೆ ಹಿಟ್ಟು 1 ಕಪ್, ತುಪ್ಪ 1 ಕಪ್, ಸಕ್ಕರೆ ಪುಡಿ 1 ಕಪ್, ಗೋಡಂಬಿ, ದ್ರಾಕ್ಷಿ, ಏಲಕ್ಕಿ ಪುಡಿ - ಸ್ವಲ್ಪ ಮಾಡುವ ವಿಧಾನ: ಹೆಸರುಬೇಳೆ ಹಿಟ್ಟಿಗೆ ತುಪ್ಪವನ್ನು ಹಾಕಿ ಹುರಿದುಕೊಳ್ಳಬೇಕು. ನಂತರ ಸಕ್ಕರೆ ಪುಡಿಯನ್ನು ಸ್ವಲ್ಪ ತುಪ್ಪ ಹಾಕಿ  ಗೋಡಂಬಿ, ದ್ರಾಕ್ಷಿ, ಏಲಕ್ಕಿ ಪುಡಿ ಎಲ್ಲವನ್ನೂ ಕಲಸಿ ಉಂಡೆ ಕಟ್ಟಿದರೆ ಬೇಸನ್ ಲಾಡು ರೆಡಿ.  ರವೆ ಉಂಡೆ

ಬೇಕಾಗುವ ಸಾಮಗ್ರಿ:
ಚಿರೋಟಿ ರವೆ  1/4 ಕೆಜಿ ಸಕ್ಕರೆ 1/4 ಕೆಜಿ, ಒಣ ಕೊಬ್ಬರಿ ಪುಡಿ 1 ಕಪ್, ಗೋಡಂಬಿ, ದ್ರಾಕ್ಷಿ, ಏಲಕ್ಕಿ ಪುಡಿ ಸ್ವಲ್ಪ, ತುಪ್ಪ  100ಗ್ರಾಂ ಮಾಡುವ ವಿಧಾನ: ರವೆಯನ್ನು ತುಪ್ಪದಲ್ಲಿ ಹುರಿದು, ಆರಿದಮೇಲೆ ಸಕ್ಕರೆ ಪುಡಿ, ಒಣ ಕೊಬ್ಬರಿ ಪುಡಿ,  ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಹಾಕಿ ಕೊನೆಯಲ್ಲಿ ಏಲಕ್ಕಿ ಪುಡಿ ಹಾಗೂ ಹಾಲನ್ನು ಹಾಕಿ ಕಲಸಿ ಉಂಡೆ ಕಟ್ಟಬೇಕು.

ಗೋಡಂಬಿ ಬರ್ಫಿ

ಬೇಕಾಗುವ ಸಾಮಗ್ರಿ:
ಗೋಡಂಬಿ 1 ಕಪ್ ಸಕ್ಕರೆ 1 ಕಪ್ ಖೋವಾ 1 ಕಪ್ ಮಾಡುವ ವಿಧಾನ:   ಗೋಡಂಬಿಯನ್ನು 1 ಗಂಟೆಯ ಕಾಲ ನೆನೆಸಿಟ್ಟು ನಂತರ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಒಲೆಯ ಮೇಲೆ ನಾನ್ ಸ್ಟಿಕ್‌ಪಾತ್ರೆಯಲ್ಲಿ ರುಬ್ಬಿರುವ ಗೋಡಂಬಿ ಮತ್ತು ಸಕ್ಕರೆ ಹಾಕಿ ಕೈಆಡಿಸುತ್ತಾ ಇರಬೇಕು.

ಅದು ತಳ ಬಿಡುವ ಹೊತ್ತಿಗೆ  ತುಪ್ಪ ಮತ್ತು ಖೋವಾ ಹಾಕಿ ಕೈ ಆಡಿಸಿ ತುಪ್ಪ ಸವರಿದ ತಟ್ಟೆಗೆ ಹಾಕಿ  ಸ್ವಲ್ಪ ಆರಿದ ನಂತರ ಬೇಕಾದ ಆಕಾರದಲ್ಲಿ ಪೀಸ್ ಮಾಡಿದರೆ ಗೋಡಂಬಿ ಬಫಿರ್ ಸವಿಯಲು ಸಿದ್ಧ.

ಹೋಳಿಗೆ

ಬೇಕಾಗುವ ಸಾಮಗ್ರಿ:


ತೆಂಗಿನಕಾಯಿ 1, ಬೆಲ್ಲ ಅರ್ಧ ಕೇಜಿ ಚಿರೋಟಿ ರವೆ 300 ಗ್ರಾಂ, ಏಲಕ್ಕಿ ಪುಡಿ -ಸ್ವಲ್ಪ, ಗಸಗಸೆ -ಸ್ವಲ್ಪ ಮಾಡುವ ವಿಧಾನ: ತೆಂಗಿನಕಾಯಿ  ತುರಿಗೆ ಬೆಲ್ಲ, ಏಲಕ್ಕಿ, ಗಸಗಸೆ ಹಾಕಿ ಹೂರಣವನ್ನು ಮಾಡಿಕೊಳ್ಳಬೇಕು. ರವೆಗೆ ಸ್ವಲ್ಪ ಎಣ್ಣೆ ಮತ್ತು ನೀರು ಹಾಕಿ ಕಲಸಿಡಬೇಕು.ಅರ್ಧ ಗಂಟೆಯ ನಂತರ ರವೆಯಿಂದ ಸಣ್ಣ ಸಣ್ಣ ಉಂಡೆ ಮಾಡಿ ಅದರಲ್ಲಿ ಹೂರಣವನ್ನು ಇಟ್ಟು ಬಾಳೆ ಎಲೆಯ ಮೇಲೆ ತಟ್ಟಿ ಹೆಂಚಿನ ಮೇಲೆ ಬೇಯಿಸಬೇಕು.

ಚಕ್ಕುಲಿ

ಬೇಕಾಗುವ ಸಾಮಾನು:
ಅಕ್ಕಿ ಹಿಟ್ಟು ಒಂದು ಕಪ್ ಹುರಿಗಡಲೆ ಹಿಟ್ಟು  ಮೂರು ಟೀ ಚಮಚ, ಎಳ್ಳು ಸ್ವಲ್ಪ, ಇಂಗು ಸ್ವಲ್ಪ, ಉಪ್ಪು, ಎಣ್ಣೆ.

ಮಾಡುವ ವಿಧಾನ: ಅಕ್ಕಿ ಹಿಟ್ಟನ್ನು ಸ್ವಲ್ಪ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಹುರಿಗಡಲೆ ಹಿಟ್ಟು, ಎಳ್ಳು, ಇಂಗು, ಉಪ್ಪು ಮತ್ತು ಸ್ವಲ್ಪ ಎಣ್ಣೆ ಹಾಗೂ ನೀರು ಹಾಕಿ ಕಲಸಿಟ್ಟು ನಂತರ ಚಕ್ಕುಲಿಯ ಒರಳಿನಲ್ಲಿ ಒತ್ತಿ ಎಣ್ಣೆಯಲ್ಲಿ ಕರಿಯಬೇಕು.

ಕರ್ಜಿಕಾಯಿ

ಬೇಕಾಗುವ ಸಾಮಗ್ರಿ:
ಚಿರೋಟಿ ರವೆ- ಒಂದು ಕಪ್  ಹೂರಣಕ್ಕೆ ಸಕ್ಕರೆ ಪುಡಿ  ಒಂದು ಕಪ್ ಒಣ ಕೊಬ್ಬರಿ ತುರಿ- ಒಂದು ಕಪ್ ಏಲಕ್ಕಿ ಪುಡಿ ಸ್ವಲ್ಪ, ಕರಿಯಲು ಎಣ್ಣೆ.ಮಾಡುವ ವಿಧಾನ:  ರವೆಗೆ ಸ್ವಲ್ಪ ತುಪ್ಪ ಬೆರೆಸಿ ಬೇಕಾಗುವಷ್ಟು ನೀರು ಹಾಕಿ ಕಲಸಿಡಬೇಕು. ಅರ್ಧ ಗಂಟೆಯ ನಂತರ  ಕಲೆಸಿಟ್ಟ ರವೆಯಿಂದ ಚಿಕ್ಕ ಚಿಕ್ಕ ಉಂಡೆ ಮಾಡಿ ಲಟ್ಟಿಸಿ ಅದರೊಳಗೆ ಹೂರಣ ತುಂಬಿ ಎಣ್ಣೆ ಒಳಹೋಗದಂತೆ ಸುತ್ತಲೂ ಅಂಟಿಸಿ ಎಣ್ಣೆಯಲ್ಲಿ ಕರಿಯಬೇಕು.

ಆವಿ ಕಡುಬು

ಬೇಕಾಗುವ ಸಾಮಗ್ರಿ:
ಅಕ್ಕಿ 1 ಪಾವು, ತೆಂಗಿನಕಾಯಿ 1,ಬೆಲ್ಲ  300 ಗ್ರಾಂ, ಗಸಗಸೆ ಸ್ವಲ್ಪ,ಏಲಕ್ಕಿಪುಡಿ ಸ್ವಲ್ಪ ಮಾಡುವ ವಿಧಾನ: ನೀರಲ್ಲಿ ನೆನೆಸಿರುವ ಅಕ್ಕಿಯನ್ನು ನೀರು ತೆಗೆದು ನೆರಳಲ್ಲಿ ಆರಿಸಿ ಹಿಟ್ಟು ಮಾಡಿಕೊಳ್ಳಬೇಕು. ಬೆಲ್ಲ ಮತ್ತು ಸಕ್ಕರೆ ಮಿಕ್ಸ್ ಮಾಡಿ ಆರು ನಿಮಿಷ ಒಲೆಯ ಮೇಲೆ ಬಿಸಿ ಮಾಡಿ ಹೂರಣವನ್ನು ರೆಡಿ ಮಾಡಿಟ್ಟಿರಬೇಕು.

ನಂತರ ಒಲೆಯ ಮೇಲೆ ನೀರಿಟ್ಟು ಕುದಿ ಬಂದ ಮೇಲೆ ಅಕ್ಕಿ ಹಿಟ್ಟನ್ನು ಹಾಕಿ ಹದವಾಗಿ ಮುದ್ದೆ ಮಾಡಿಕೊಳ್ಳಬೇಕು. ನಂತರ ಚಿಕ್ಕ ಚಿಕ್ಕ ಉಂಡೆ ಮಾಡಿ ಅದರಲ್ಲಿ ತೆಂಗಿನಕಾಯಿ ಹೂರಣವನ್ನು ಇಟ್ಟು ಕಡುಬಿನ ಆಕಾರಕ್ಕೆ ತಂದು ಆವಿಯಲ್ಲಿ ಬೇಯಿಸಿದರೆ ಆವಿ ಕಡುಬು ಸಿದ್ಧ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry