ಮಂಗಳವಾರ, ಮೇ 11, 2021
19 °C

ಗಣೇಶನಿಗೆ ಹೀಗೊಂದು ಕಾಯಕ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ಪಟ್ಟಣದ ಕಮ್ಮಾರರೊಬ್ಬರು ತಮ್ಮ ಕುಲುಮೆ ಗೋಡೆಯ ಮೇಲೆ ಕಾಯಕ ಗಣಪತಿಯನ್ನು ನಿರ್ಮಿಸುವ ಮೂಲಕ ಗಮನ ಸೆಳೆದಿದ್ದಾರೆ.ಸಂತೆಗೇಟ್ ಪಕ್ಕದಲ್ಲಿ ಸುಮಾರು ಎರಡು ದಶಕಗಳಿಂದ ಕುಲುಮೆ ಕೆಲಸ ಮಾಡುತ್ತಿರುವ ಚಂದ್ರಾಚಾರಿ, ಈವರೆಗೆ ಗಣೇಶ ವಿಗ್ರಹವನ್ನು ಖರೀದಿಸಿಲ್ಲ. ಅವರು ತಮ್ಮ ಕುಲುಮೆ ಗೋಡೆ ಮೇಲೆ ಜೇಡಿಮಣ್ಣನ್ನು ಬಳಸಿ ಗಣೇಶ ವಿಗ್ರಹ ಮಾಡುತ್ತಾರೆ. ಅದಕ್ಕೆ ಹಬ್ಬದ ದಿನ ಪೂಜೆ ಸಂದರ್ಭದಲ್ಲಿ ಇಡುವ ಅರಶಿನ ಕುಂಕುಮ ಬಿಟ್ಟರೆ ಯಾವುದೇ ಬಣ್ಣವನ್ನು ಬಳಸುವುದಿಲ್ಲ.ವಿಶೇಷವೆಂದರೆ ಆ ಗಣಪತಿಯನ್ನು ವಿಸರ್ಜಿಸುವುದಿಲ್ಲ. ಇದ್ದಷ್ಟು ದಿನ ಇರುತ್ತದೆ. ಅನಂತರ ಮಳೆ ಬಿಸಿಲಿಗೆ ಸಿಕ್ಕಿ ತಾನೇ ತಾನಾಗಿ ವಿಸರ್ಜನೆಗೊಳ್ಳುತ್ತದೆ. ಮತ್ತೆ ಬರುವ ಹಬ್ಬಕ್ಕೆ ಹೊಸ ಗಣೇಶ ವಿಗ್ರಹದ ರಚನೆ ಇದ್ದದ್ದೆ.ಈ ಗಣಪತಿಗೆ ವಿಶೇಷ ಪೂಜೆ ಅಥವಾ ಅಲಂಕಾರ ಇರುವುದಿಲ್ಲ. ತಿದಿಯನ್ನು ಒತ್ತಿದಾಗ ಏಳುವ ಬೂದಿ ಮೂರ್ತಿಯ ಮುಖಕ್ಕೆ ಬಡಿಯುತ್ತದೆ. ಬೆಂಕಿಯ ಶಾಖ ತಟ್ಟುತ್ತದೆ. ಅದಕ್ಕೆ ಚಂದ್ರಾಚಾರಿ ಹೀಗೆ ಹೇಳುತ್ತಾರೆ.`ಬಸವಣ್ಣ ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ. ದೇವರು ಗುಡಿಯಲ್ಲಿ ಇರುವುದಿಲ್ಲ. ದುಡಿಯುವ ಜನರ ಬಳಿ ಇರುತ್ತಾನೆ. ಅವನು ಕಾರ್ಮಿಕರಂತೆ ಧೂಳು ತುಂಬಿದ ಬಟ್ಟೆಯನ್ನೇ ಧರಿಸುತ್ತಾನೆ ಎಂದು ಹಿರಿಯರು ಹೇಳುತ್ತಾರೆ. ಆದ್ದರಿಂದಲೇ ಈ ಗಣಪನಿಗೆ ಕಾಯಕ ಗಣಪ ಎಂದು ಹೆಸರಿಟ್ಟಿದ್ದೇನೆ. ದುಡಿಯುವ ಜನರಿಂದ ಸಮಾಜಕ್ಕೆ ಯಾವುದೇ ಹಾನಿ ಇರದು. ಹಾಗೆಯೇ ಈ ಗಣಪತಿ ವಿಗ್ರಹದಿಂದ ಜಲ ಮಾಲಿನ್ಯ ವಾಗುವುದಿಲ್ಲ. ಕೆರೆಕುಂಟೆಯಲಿ ಹೂಳು ತುಂಬುವುದಿಲ್ಲ. ಇದು ಪೂರ್ಣ ಪರಿಸರ ಸ್ನೇಹಿ.~ಬಣ್ಣಬಣ್ಣದ ಬೃಹತ್ ಗಾತ್ರದ ವಿಗ್ರಹಗಳನ್ನು ಪೂಜಿಸಿ ಕೆರೆ ಕುಂಟೆಗಳಲ್ಲಿ ವಿಸರ್ಜನೆ ಮಾಡಿ ಆರೋಗ್ಯ ಕೆಡಿಸುವ ಸಂಪ್ರದಾಯಕ್ಕೆ ಚಂದ್ರಾಚಾರಿ ಆಚರಣೆ ಮಾದರಿಯಾಗಲಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.