ಗಣೇಶ ಮೂರ್ತಿ ತಯಾರಿ ಜೋರು

7
ನಗರ ಸಂಚಾರ

ಗಣೇಶ ಮೂರ್ತಿ ತಯಾರಿ ಜೋರು

Published:
Updated:
ಗಣೇಶ ಮೂರ್ತಿ ತಯಾರಿ ಜೋರು

ಗದಗ: ಶ್ರಾವಣ ಮಾಸ ಮುಗಿಯುತ್ತಿದ್ದಂತೆ ಗಣೇಶ ಹಬ್ಬದ ಸಡಗರದ ತಯಾರಿ ನಡೆಯುತ್ತಿದ್ದರೆ ಮತ್ತೊಂದೆಡೆ  ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಗೌರಿ ಮತ್ತು ಗಣೇಶ ಮೂರ್ತಿಗಳು ಲಗ್ಗೆ ಇಡಲು ಆರಂಭಿಸಿವೆ.ಗದಗ ಬೆಟಗೇರಿಯ ಅವಳಿ ನಗರದಲ್ಲಿ ಗಣಪ ಮೂರ್ತಿಗಳನ್ನು ಸಿದ್ಧಪಡಿಸುವ ಕೆಲಸ ಕಳೆದ ಕೆಲ ದಿನಗಳಿಂದ ಜೋರಾಗಿ ನಡೆಯುತ್ತಿದೆ. ಬೆಟಗೇರಿಯ ಟೆಂಗಿನಕಾಯಿ ಬಜಾರ್ ನಿವಾಸಿ ಕಲಾವಿದ ಬಾಬಣ್ಣ ಕುಟುಂಬ ದಶಕಗಳಿಂದ ಪರಿಸರ ಸ್ನೇಹಿ ಮೂರ್ತಿ ತಯಾರಿಕೆಯಲ್ಲಿ ಹಗಲಿರುಳು ತೊಡಗಿಸಿಕೊಂಡಿದೆ.ಬಾಬಣ್ಣ ಮತ್ತು ಕುಟುಂಬದ ಸದಸ್ಯರು, 2-3 ತಿಂಗಳಿನಿಂದಲೇ ಗಣಪನ ಮೂರ್ತಿ ಸಿದ್ಧಪಡಿಸಲು ಆರಂಭಿಸಿದ್ದಾರೆ. ಹತ್ತು ಇಂಚಿನಿಂದ ನಾಲ್ಕು ಅಡಿವರೆಗಿನ ಪರಿಸರ ಸ್ನೇಹಿ ಮೂರ್ತಿಗಳು ಇಲ್ಲಿ ತಯಾರಾಗುತ್ತವೆ. ಮೂರ್ತಿ ತಯಾರಿಸಲು ಬೇಕಾದ ಮಣ್ಣನ್ನು ಬದಾಮಿಯಿಂದ ತರಿಸಲಾಗುತ್ತದೆ.ಅಚ್ಚಿನಲ್ಲಿ ಮೂರ್ತಿ ಸಿದ್ಧಪಡಿಸಿ ನಂತರ ಅವುಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತದೆ. ಈಗಾಗಲೇ 60 ಮೂರ್ತಿಗಳು ಮಾರಾಟಕ್ಕೆ ಸಜ್ಜುಗೊಂಡಿವೆ. ಮೂರ್ತಿಯ ಗಾತ್ರಕ್ಕೆ ಅನುಗುಣವಾಗಿ  200ರಿಂದ  4 ಸಾವಿರ ರೂಪಾಯಿವರೆಗೂ ದರ ನಿಗದಿಪಡಿಸುತ್ತಾರೆ. ಗದಗ ನಗರ ಅಲ್ಲದೆ ಸುತ್ತಮುತ್ತಲ ಹಳ್ಳಿಗಳ ಜನರು ಹಾಗೂ ವಿವಿಧ ತಾಲ್ಲೂಕುಗಳಿಂದಲ್ಲೂ ಗ್ರಾಹಕರು ಬಂದು ಇಲ್ಲಿ ಪರಿಸರ ಸ್ನೇಹಿ ಗಣಪ ಕೊಳ್ಳುತ್ತಾರೆ.`ನಮ್ಮ ಸಮಸ್ಯೆ ಯಾರ್ ಕೇಳ್ತಾರೆ.  ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳ ಹಾವಳಿಯಿಂದ ಮಣ್ಣಿನ ಮೂರ್ತಿ ಕೇಳುವವರೆ ಕಡಿಮೆ. ಇದರಿಂದಾಗಿ ಕುಲಕಸುಬು ನಿರತ ಮೂರ್ತಿ ತಯಾರಕರ ವ್ಯವಹಾರಕ್ಕೆ ಹೊಡೆತ ಬಿದ್ದಿದೆ.  ಬದಾಮಿಯಿಂದ ಮಣ್ಣು ತರಲಾಗುತ್ತದೆ. ಒಂದು ಲೋಡ್ ಮಣ್ಣಿಗೆ ಆರು ಸಾವಿರ ರೂಪಾಯಿ. ಮಣ್ಣು ತುಳಿಯುವವರಿಗೆ ದುಡ್ಡು ಕೊಡಬೇಕು' ಎನ್ನುತ್ತಾರೆ ಕಲಾವಿದ ಬಾಬಣ್ಣ.`ಮಣ್ಣಿನ ಮೂರ್ತಿ ಪೂಜೆಗೆ ಯೋಗ್ಯ ಎಂಬ ಕಾರಣಕ್ಕೆ ಪೂರ್ವಜರ ಕಾಲದಿಂದಲೂ ಮಣ್ಣಿನ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಹಿರಿಯ ಮಾರ್ಗದರ್ಶನದಂತೆ ಸ್ನಾನ, ಪೂಜೆ ಬಳಿಕವೇ ಮೂರ್ತಿ ಸಿದ್ಧಪಡಿಸಲು ಆರಂಭಿಸುವುದು. ಎಷ್ಟು ಅಡಿ ಎತ್ತರದ ಮೂರ್ತಿ ಬೇಕು ಎಂಬುದನ್ನು ಮೊದಲೇ ಹೇಳಿದರೆ ಒಳ್ಳೆಯದು. ಹಬ್ಬ ಸಮೀಪಿಸುತ್ತಿದ್ದಂತೆ ಮೂರ್ತಿ ಕೊಳ್ಳುವವರ ಸಂಖ್ಯೆ ಹೆಚ್ಚಲಿದೆ' ಎಂದು ಅವರು ವಿವರಿಸಿದರು. (ಪರಿಸರ ಸ್ನೇಹಿ ಮೂರ್ತಿಗೆ  ದೂ. 9945145335 ಸಂಪರ್ಕಿಸಬಹುದು.)`ಬಣ್ಣಗಳಲ್ಲಿರುವ ಸೀಸ, ಕ್ರೋಮಿಯಂ, ನಿಕ್ಕಲ್, ಕ್ಯಾಡ್ಮಿಯಂ ಆರೋಗ್ಯಕ್ಕೆ ಹಾನಿಕಾರಕ. ಇದೇ ಅಂಶಗಳು ನೀರಿನಲ್ಲಿ ಬರೆಯುವುದರಿಂದ ಸಸ್ಯ ಸಂಕುಲ ಮತ್ತು ಮನುಷ್ಯರ ಮೇಲೆ ಹಾನಿ ಉಂಟು ಮಾಡುತ್ತೆ. ಆದ್ದರಿಂದ ಪರಿಸರ ಸ್ನೇಹಿ ಮೂರ್ತಿಗಳನ್ನು ಬಳಸಬೇಕು' ಎಂದು ಕಪೋತಗಿರಿ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry