ಗಣೇಶ ವಿಸರ್ಜನೆಗೆ ಜನ ಸಾಗರ...

ಸೋಮವಾರ, ಮೇ 27, 2019
33 °C

ಗಣೇಶ ವಿಸರ್ಜನೆಗೆ ಜನ ಸಾಗರ...

Published:
Updated:

ಶಿವಮೊಗ್ಗ: ನಗರದ ಪ್ರತಿಷ್ಠಿತ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಭಾನುವಾರ ಪೊಲೀಸ್ ಸರ್ಪಗಾವಲಿನಲ್ಲಿ ಶಾಂತಿಯುತವಾಗಿ ನೆರವೇರಿತು. ಕೋಟೆ ಭೀಮೇಶ್ವರ ದೇವಸ್ಥಾನದಿಂದ ಮಧ್ಯಾಹ್ನ 11.30ರ ಸುಮಾರಿಗೆ ಪೊಲೀಸ್ ಬಿಗಿ ಬಂದೋಬಸ್ತ್‌ನೊಂದಿಗೆ ಹೊರಟ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವದ ವಿಸರ್ಜನಾ ಪೂರ್ವ ಮೆರವಣಿಗೆ ಕೋಟೆ ರಸ್ತೆ, ಗಾಂಧಿಬಜಾರ್ ಮೂಲಕ ಅಮೀರ್ ಅಹಮದ್ ವೃತ್ತ ತಲುಪಿತು.

ಅಲ್ಲಿಂದ ಗೋಪಿ ವೃತ್ತ, ಜೈಲ್ ವೃತ್ತ, ಶಿವಮೂರ್ತಿ ವೃತ್ತ, ಮಹಾವೀರ ವೃತ್ತದ ಮೂಲಕ ಸಂಚರಿಸಿ, ಪುನಃ ಬಿಎಚ್ ರಸ್ತೆಯನ್ನು ತಲುಪಿತು.ನಂತರ ತುಂಗಾ ನದಿಯಲ್ಲಿ ರಾತ್ರಿ 11.30ರ ಸುಮಾರಿಗೆ ಗಣಪತಿಯನ್ನು ವಿಸರ್ಜಿಸಲಾಯಿತು.

ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಿದ ಹಿಂದೂ ಸಂಘಟನಾ ಮಹಾಮಂಡಳಿ ಕಾರ್ಯಕರ್ತರು ಸೇರಿದಂತೆ ಪ್ರತಿಯೊಬ್ಬರೂ ಸಿಳ್ಳೆ, ಕೇಕೆ ಹಾಕಿ, ಕುಣಿತಗಳು, ವೈಭವದ ಮೆರವಣಿಗೆ ವೀಕ್ಷಣೆಗೆ ನೆರೆದ ಜನಸ್ತೋಮವನ್ನು ಮಂತ್ರಮುಗ್ದರನ್ನಾಗಿ ಮಾಡಿದವು.ಪ್ರವೇಶ ನಿರ್ಬಂಧ

ಭಾರಿ ಮೆರವಣಿಗೆ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳ ಸಂಚಾರ ಮಾರ್ಗ ಬದಲಿಸಿದ್ದು, ನೆಹರು ರಸ್ತೆಗೆ ಸೇರುವ ಎಲ್ಲ ಮಾರ್ಗಗಳನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಅಮೀರ್ ಅಹಮದ್ ವೃತ್ತದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ, ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಿ, ಯಾವುದೇ ಗೊಂದಲ ಉಂಟಾಗದಂತೆ ಕಟ್ಟೆಚ್ಚರ ವಹಿಸಲಾಗಿತ್ತು.ಅಮೀರ್ ಅಹಮದ್ ವೃತ್ತದಿಂದ ಎಂಕೆಕೆ ರಸ್ತೆ, ಕೆಆರ್ ಪುರಂ ರಸ್ತೆ ಹಾಗೂ ಓಟಿ ರಸ್ತೆಗಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಇದಲ್ಲದೇ ಗಾಂಧಿಬಜಾರ್‌ಗೆ ಕೂಡುವ ರಸ್ತೆಗಳಿಗೂ ಪ್ರವೇಶ ನಿಷೇಧಿಸಲಾಗಿತ್ತು.

ಬೆಳಿಗ್ಗೆ 11.30ಕ್ಕೆ ಆರಂಭಗೊಂಡ ಗಣಪತಿಯ ವೈಭವದ ಮೆರವಣಿಗೆ ರಾಮಣ್ಣ ಶ್ರೇಷ್ಠಿಪಾರ್ಕ್ ಮೂಲಕ ಸಂಜೆ 4ಕ್ಕೆ ಅಮೀರ್ ಅಹಮದ್ ವೃತ್ತ ತಲುಪಿತು. ಗಣಪತಿ ಮೆರವಣಿಗೆ ಅಮೀರ್ ಅಹಮದ್ ವೃತ್ತ ತಲುಪುತ್ತಿದ್ದಂತೆ ಭಕ್ತರ ಸಂಖ್ಯೆ ಅಧಿಕಗೊಂಡಿತು.ಭಕ್ತವೃಂದ, ಗಣಪತಿಯತ್ತ ಪುಷ್ಪ ತೂರಿ ಹರ್ಷೋದ್ಗಾರಗಳನ್ನು ಕೂಗಿ ಸಂಭ್ರಮಿಸಿದರು. ಇದಕ್ಕೂ ಮೊದಲು ಆದಿನಾಥ ರಸ್ತೆಯ ಜೈನ್ ಭವನದಲ್ಲಿ ಬೆಳಿಗ್ಗೆ 11ಕ್ಕೆ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವಕ್ಕೆ ಆಗಮಿಸುವ ಎಲ್ಲಾ ಭಕ್ತರಿಗೆ ಜೈನ ಸಮಾಜ ಆದಿನಾಥ ಜೈನ ಶ್ವೇತಾಂಬರ ಮೂರ್ತಿ ಪೂಜಕ್ ಸಂಘದಿಂದ ಅನ್ನಸಂತರ್ಪಣೆ ನಡೆಯಿತು.ಪ್ರತಿಷ್ಠಿತ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಸಂದರ್ಭ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ನಗರಸಭೆ ಅಧ್ಯಕ್ಷ ಕೆ.ಎಸ್. ಗಂಗಾಧರಪ್ಪ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಶ್ರೀಕಾಂತ್ ಪ್ರಮುಖ ಗಣ್ಯರು ಪಾಲ್ಗೊಂಡಿದ್ದರು.ವಿಡಿಯೋ ಕ್ಯಾಮೆರಾ ಅಳವಡಿಕೆ: ಸುಮಾರು ಎಂಟು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದ ಮೆರವಣಿಗೆ ಉದ್ದಕ್ಕೂ ನೂರಾರು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಅನಗತ್ಯ ಗೊಂದಲ ಸೃಷ್ಟಿಸುವ ಕಿಡಿಗೇಡಿಗಳನ್ನು ಗುರುತಿಸಲು ಅಲ್ಲಲ್ಲಿ ವೀಡಿಯೊ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.ಅಲ್ಲದೇ, ಮಫ್ತಿಯಲ್ಲಿ ಪೊಲೀಸರು ಮೆರವಣಿಗೆಯಲ್ಲಿ ಪಾಲ್ಗೊಂಡು ಭಕ್ತರನ್ನು ಮುಂದೆ ಕಳುಹಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಅಪರ ಜಿಲ್ಲಾಧಿಕಾರಿ ಕೆ. ಶ್ರೀರಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ್ ಗುಪ್ತ್ ಮೆರವಣಿಗೆ ಉದ್ದಕ್ಕೂ ಹಾಜರಿದ್ದು, ಭದ್ರತಾ ಕ್ರಮಗಳ ಉಸ್ತುವಾರಿ ವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry