ಗುರುವಾರ , ಡಿಸೆಂಬರ್ 12, 2019
17 °C

ಗಣ್ಯಾತಿಗಣ್ಯರ ಪ್ರಯಾಣ: 110 ಕೋಟಿ ಬಾಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಣ್ಯಾತಿಗಣ್ಯರ ಪ್ರಯಾಣ: 110 ಕೋಟಿ ಬಾಕಿ

ನವದೆಹಲಿ (ಪಿಟಿಐ): ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ವಿದೇಶಗಳಿಗೆ ಭೇಟಿ ನೀಡಿದ ಗಣ್ಯಾತಿಗಣ್ಯರ ವಿಮಾನ ಪ್ರಯಾಣದ ವೆಚ್ಚವನ್ನು ಸರ್ಕಾರ, ಏರ್‌ಇಂಡಿಯಾಕ್ಕೆ ಪಾವತಿಸಬೇಕಿದ್ದು, 110 ಕೋಟಿ ರೂಪಾಯಿ ಬಾಕಿಯನ್ನು ವಸೂಲು ಮಾಡಲು ಏರ್ ಇಂಡಿಯಾ ಪರದಾಡುತ್ತಿದೆ.ಗಣ್ಯರ ಪ್ರಯಾಣಕ್ಕಾಗಿ ಎರವಲು ಪಡೆದಿದ್ದ 12 ವಿಶೇಷ ವಿಮಾನಗಳ ಬಿಲ್ ಅನ್ನು ಸರ್ಕಾರ ಪಾವತಿಸಬೇಕಿದೆ ಎಂದು ಈ ಕುರಿತು ಕೇಳಲಾಗಿದ್ದ ಮಾಹಿತಿ ಹಕ್ಕು ಅರ್ಜಿಯ ಉತ್ತರದಲ್ಲಿ ಏರ್ ಇಂಡಿಯಾ ತಿಳಿಸಿದೆ.

ಕಳೆದ ವರ್ಷ ಜುಲೈನಲ್ಲಿ ಸರ್ಕಾರ 291 ಕೋಟಿ ರೂಪಾಯಿ ಬಾಕಿ ಸಲ್ಲಿಸಬೇಕಿತ್ತು.ಇತ್ತೀಚೆಗಷ್ಟೆ 181.30 ಕೋಟಿ ರೂಪಾಯಿ ಪಾವತಿಸಿದೆ. ಆದರೆ, 110 ಕೋಟಿ ರೂಪಾಯಿ ಬಾಕಿ ಉಳಿಸಿದೆ ಎಂದು ಈ ಉತ್ತರದಲ್ಲಿ ವಿವರಿಸಲಾಗಿದೆ.ರಾಷ್ಟ್ರಪತಿಯವರ ವಿದೇಶ ಪ್ರವಾಸ ಆಯೋಜಿಸುವ ರಕ್ಷಣಾ ಸಚಿವಾಲಯ, ಪ್ರಧಾನಿ ಪ್ರವಾಸ ಏರ್ಪಡಿಸುವ ಸಂಪುಟ ಸಚಿವಾಲಯ, ಉಪ ರಾಷ್ಟ್ರಪತಿಯವರ ಪ್ರವಾಸ ಏರ್ಪಡಿಸುವ ವಿದೇಶಾಂಗ ಸಚಿವಾಲಯದಿಂದ ಈ ಬಾಕಿ ಹಣ ಬರಬೇಕಿದೆ.ಈ ಸಂಬಂಧ ಏರ್‌ಇಂಡಿಯಾ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ನಡುವೆ ಆರು ತಿಂಗಳ ಹಿಂದೆ ನಡೆದ ಪತ್ರ ವ್ಯವಹಾರ ಸುದ್ದಿ ಸಂಸ್ಥೆಗೆ ಲಭ್ಯವಾಗಿದೆ.ದುಬಾರಿ ವಿಮಾನ ಇಂಧನಕ್ಕಾಗಿ ತೈಲ ಕಂಪೆನಿಗಳಿಗೆ ನಗದು ರೂಪದಲ್ಲಿ ನಿತ್ಯ ಹಣ ಪಾವತಿಸಬೇಕಿದ್ದು, ಕೂಡಲೇ ಈ ಹಣ ಬಿಡುಗಡೆ ಮಾಡುವಂತೆ ಏರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರು ಆಗ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದಿದ್ದರು.ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಏರ್ ಇಂಡಿಯಾ  ಬಾಕಿ ಹಣ ವಸೂಲು ಮಾಡಿಕೊಳ್ಳಲು ಶತಾಯಗತಾಯ ಯತ್ನಿಸುತ್ತಿದೆ ಎನ್ನಲಾಗಿದೆ.

ಪ್ರತಿಕ್ರಿಯಿಸಿ (+)