ಗುರುವಾರ , ನವೆಂಬರ್ 21, 2019
20 °C

`ಗಣ್ಯ' ಮತದಾರರ ಹುಡುಕಾಟಕ್ಕೆ ವಿಶೇಷ ತಂಡ

Published:
Updated:

ಬೆಂಗಳೂರು: ಮತದಾರರ ಯಾದಿಯಿಂದ ಯಾವ `ಸೆಲೆಬ್ರಿಟಿ'ಗಳ ಹೆಸರೂ ಬಿಟ್ಟುಹೋಗದಂತೆ ಹೆಚ್ಚಿನ ಮುತುವರ್ಜಿ ವಹಿಸಿರುವ ಬಿಬಿಎಂಪಿ, ತನ್ನ ವ್ಯಾಪ್ತಿಯ ಎಲ್ಲ 28 ಕ್ಷೇತ್ರಗಳಲ್ಲಿ ವಾಸವಾಗಿರುವ `ಗಣ್ಯ' ಮತದಾರರ ಹೆಸರು ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಲು ಪ್ರತಿ ಕ್ಷೇತ್ರಕ್ಕೆ ಒಂದರಂತೆ ವಿಶೇಷ ತಂಡ ರಚಿಸಿದೆ.ಪ್ರತಿ ಕ್ಷೇತ್ರದಲ್ಲಿ ಇರುವ `ಗಣ್ಯರ ಯಾದಿಯನ್ನು ಸಿದ್ಧಪಡಿಸಿರುವ ಈ ತಂಡಗಳು, ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ, ಇಲ್ಲವೋ ಎನ್ನುವುದನ್ನು ಪರಿಶೀಲಿಸುತ್ತಿವೆ. ಪ್ರತಿಯೊಬ್ಬರ ಮನೆಗೂ ತೆರಳಿ ಮತದಾರರ ಗುರುತಿನ ಚೀಟಿ ನೀಡುವ ವ್ಯವಸ್ಥೆಯನ್ನೂ ಸಹ ಮಾಡುತ್ತಿವೆ.

ಪದ್ಮ ವಿಭೂಷಣ ಒಳಗೊಂಡು ಎಲ್ಲ ರಾಷ್ಟ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನೂ `ವಿಐಪಿ' ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ.`ಹಿಂದಿನ ಚುನಾವಣೆಗಳಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕಾಣೆಯಾಗಿ ಗಣ್ಯರೂ ಗೊಂದಲ ಅನುಭವಿಸಿದ ಪ್ರಸಂಗಗಳು ನಡೆದಿವೆ. ಅಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ನಾವು ಈ ಅಭಿಯಾನ ನಡೆಸಿದ್ದೇವೆ' ಎಂದು ಬಿಬಿಎಂಪಿ ಆಯುಕ್ತ ಸಿದ್ದಯ್ಯ `ಪ್ರಜಾವಾಣಿ'ಗೆ ತಿಳಿಸಿದರು.`ಸೆಲೆಬ್ರಿಟಿಗಳ ಪಟ್ಟಿಯನ್ನು ತಯಾರಿಸುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಆಯಾ ಕ್ಷೇತ್ರದಲ್ಲಿ ಇರುವ ಅಂತಹ ವ್ಯಕ್ತಿಗಳ ವಿವರ ಕಲೆ ಹಾಕುವುದು ಸಹ ತುಂಬಾ ಕಷ್ಟದ ಕೆಲಸವಾಗಿತ್ತು. ಬಿಬಿಎಂಪಿ ದಾಖಲೆಗಳು, ಸಂಘ-ಸಂಸ್ಥೆಗಳು ಮತ್ತು ಬಿಬಿಎಂಪಿ ಸದಸ್ಯರು ನೀಡಿರುವ ಮಾಹಿತಿ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆದಿದೆ. ಅಧಿಕಾರಿಗಳ ತಂಡ ಈ ಹೊಣೆಯನ್ನು ಸಮರ್ಪಕವಾಗಿ ನಿಭಾಯಿಸಿದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರತಿ ಕ್ಷೇತ್ರದಲ್ಲಿ ಸರಾಸರಿ 150 ಜನ ಗಣ್ಯರ ವಿವರವನ್ನು ಅಧಿಕಾರಿಗಳ ತಂಡ ಕಲೆ ಹಾಕಿದೆ. ಬಸವನಗುಡಿ, ವಿಜಯನಗರ, ಜಯನಗರದಂತಹ ಕ್ಷೇತ್ರಗಳಲ್ಲಿ ಅಂಥವರ ಸಂಖ್ಯೆ ತುಸು ಹೆಚ್ಚಾಗಿದೆ. ಕರ್ನಾಟಕದ ಬೇರೆ ಭಾಗದಿಂದ ಬಂದ ನೂರಾರು ಜನ ಗಣ್ಯರು ಬೆಂಗಳೂರಿನಲ್ಲಿಯೇ ನೆಲೆಯೂರಿದ್ದಾರೆ. ಅಂಥವರ ತವರು ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವುದನ್ನೂ ಖಚಿತಪಡಿಸಿಕೊಳ್ಳುವ ಪ್ರಕ್ರಿಯೆ ನಡೆದಿದೆ.ವಿವಿಧ ಅಕಾಡೆಮಿಗಳ ಅಧ್ಯಕ್ಷರು, ಸಾಮಾಜಿಕ ಕಾರ್ಯಕರ್ತರು ಮತ್ತು ಹಿರಿಯ ಪತ್ರಕರ್ತರನ್ನು ಸಹ ಸಂಪರ್ಕಿಸಲಾಗುತ್ತಿದೆ. ಆರು ತಿಂಗಳಿಗಿಂತ ಅಧಿಕ ಸಮಯದಿಂದ ನಗರದಲ್ಲಿ ವಾಸವಾಗಿರುವ ಗಣ್ಯರ ಮಾಹಿತಿ ಕಲೆ ಹಾಕಲಾಗಿದ್ದು, ಅಂದಾಜು 4,200 ಹೆಸರುಗಳು ಅದರಲ್ಲಿವೆ. ಆನೇಕಲ್‌ನಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ `ಗಣ್ಯ'ರಿದ್ದರೆ, ಜಯನಗರ, ಬಸವನಗುಡಿ, ಮಲ್ಲೇಶ್ವರ, ವಿಜಯನಗರ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ `ಸೆಲೆಬ್ರಿಟಿ'ಗಳು ಇದ್ದಾರೆ.ಕೇಂದ್ರ ಸರ್ಕಾರದ ಹಲವು ಸಂಶೋಧನಾ ಸಂಸ್ಥೆಗಳು ನಗರದಲ್ಲಿದ್ದು, ಅದರಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಹಿರಿಯ ಸಂಶೋಧಕರನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ. ಕೆಲವರು ತಮ್ಮ ಸ್ವಂತ ರಾಜ್ಯದಲ್ಲಿ ಮತದಾರರಾಗಿ ಹೆಸರು ನೋಂದಣಿ ಮಾಡಿದ್ದರಿಂದ ಅಂಥವರ ಹೆಸರನ್ನು ಕೈಬಿಡಲಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆ, ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳಿಂದ ಸಹ ಮಾಹಿತಿ ಸಂಗ್ರಹಿಸಲಾಗಿದೆ.`ಪಟ್ಟಿಯಲ್ಲಿ ಇರುವ ಎಲ್ಲ ಗಣ್ಯರಿಗೆ ನಾವೇ ಮತದಾನದ ಚೀಟಿಯನ್ನು ತಲುಪಿಸಲಿದ್ದೇವೆ. ಮತಗಟ್ಟೆ ಕೇಂದ್ರದ ಮಾಹಿತಿಯನ್ನೂ ಅವರಿಗೆ ನೀಡಲಿದ್ದೇವೆ' ಎಂದು ಅಧಿಕಾರಿಯೊಬ್ಬರು ತಿಳಿಸಿದರು.ಗಣ್ಯ ಮತದಾರರು ಇವರು

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು

ಹಿರಿಯ ಸಾಹಿತಿಗಳು, ವಿಜ್ಞಾನಿಗಳು

ನಿವೃತ್ತ ಹಾಗೂ ಹಾಲಿ ನ್ಯಾಯಾಧೀಶರು

ಸ್ವಾತಂತ್ರ್ಯ ಹೋರಾಟಗಾರರು

ಕಲಾವಿದರು, ಸಿನಿಮಾ ತಾರೆಯರು

ಕ್ರೀಡಾ ಸಾಧಕರು

ಹಿರಿಯ ರಾಜಕಾರಣಿಗಳು

ವಿಶ್ರಾಂತ ಕುಲಪತಿಗಳು, ಶಿಕ್ಷಣ ತಜ್ಞರು

ನಿವೃತ್ತ ಹಾಗೂ ಹಾಲಿ ಐಎಎಸ್-ಐಪಿಎಸ್ ಅಧಿಕಾರಿಗಳು

ಪ್ರತಿಕ್ರಿಯಿಸಿ (+)