ಗತಕಾಲದ ವೈಭವ ತೋರುವ ರೈಲು ಗ್ಯಾಲರಿ

7

ಗತಕಾಲದ ವೈಭವ ತೋರುವ ರೈಲು ಗ್ಯಾಲರಿ

Published:
Updated:

ಬೆಂಗಳೂರು: ನಿಂತಲ್ಲೇ ಶತಮಾನದ ಹಿಂದಕ್ಕೆ ಸರಿಯುವ ಬಯಕೆಯೇ? ರೈಲು ಜನರ ಜೀವನಾಡಿಯಾದದ್ದು ಹೇಗೆ ಎಂಬುದನ್ನು ತಿಳಿಯಬೇಕೆ? ರಾಜ್ಯದ ಮೊದಲ ರೈಲುಗಾಡಿಯ ಕಥೆ ಕೇಳಬೇಕೆ? ಹಾಗಿದ್ದರೆ ನಗರದ ಸಿಟಿ ರೈಲು ನಿಲ್ದಾಣದಲ್ಲಿ ಶನಿವಾರ ಉದ್ಘಾಟನೆಯಾದ ರೈಲು ಗ್ಯಾಲರಿಗೆ ಭೇಟಿ ನೀಡಿ.ರೈಲು ಲೋಕಕ್ಕೆ ಸಂಬಂಧಿಸಿದ ಅಪರೂಪದ ಪ್ರಾಚೀನ ವಸ್ತುಗಳು, ಛಾಯಾಚಿತ್ರಗಳು, ಹಾಗೂ ರೈಲಿನ ಮಹತ್ವ ಸಾರುವ ಆಧುನಿಕ ಕಲಾಕೃತಿಗಳು ಇಲ್ಲಿವೆ. ಅಂಗವಿಕಲರನ್ನು ಜನರೇ ಹೊತ್ತೊಯ್ಯುತ್ತಿದ್ದ ಮರದ ಕುರ್ಚಿ ಗ್ಯಾಲರಿಯ ಮೊದಲಲ್ಲೇ ಸ್ವಾಗತಿಸುತ್ತದೆ. ಚಿಕ್ಕಬಳ್ಳಾಪುರ, ನಂದಿ, ದಂಡು, ಹಳೆಯ ಬೈಯ್ಯಪ್ಪನಹಳ್ಳಿಯ ನಿಲ್ದಾಣಗಳ ಹಳೆಯ ಹಾಗೂ ಹೊಸ ಚಿತ್ರಗಳು ನೈರುತ್ಯ ರೈಲ್ವೆಯ ಇತಿಹಾಸವನ್ನು ಬಿಂಬಿಸುತ್ತವೆ.ಗಾಂಧೀಜಿ ಅವರು ಪತ್ನಿ ಕಸ್ತೂರಬಾ ಅವರೊಂದಿಗೆ ಮದ್ರಾಸ್‌ನಿಂದ ಬೆಂಗಳೂರಿಗೆ ಪಯಣಿಸಿದ್ದು, ನೆಹರು ಮೈಸೂರಿನಲ್ಲಿ ರೈಲಿನ ಚುಕ್ಕಾಣಿ ಹಿಡಿದು ನಿಂತದ್ದು ಹೀಗೆ ಹತ್ತಾರು ಚಿತ್ರಗಳು ಗ್ಯಾಲರಿಯಲ್ಲಿವೆ.ಯಲಹಂಕ ರೈಲು ನಿಲ್ದಾಣದಲ್ಲಿ 1917ರಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಿದ ಬೆಂಚು, ರೈಲಿನ ಆಗಮನ ನಿರ್ಗಮನವನ್ನು ಸಾರುತ್ತಿದ್ದ ಗಂಟೆ, ಸಿಗ್ನಲ್ ದೀಪಗಳು, ಚಹಾಗೆ ಬಳಸುತ್ತಿದ್ದ ಹಿತ್ತಾಳೆಯ ಕೆಟಲ್, ಬಗೆಬಗೆಯ ಸ್ಥಿರ ದೂರವಾಣಿಗಳು, ಐಸಿಎಫ್ ಬೋಗಿಯ ಮಾದರಿ, ಕೋಲಾರ ನಿಲ್ದಾಣದಲ್ಲಿದ್ದ ಲೋಹದ ಸ್ಟಾಂಪ್ ಪ್ಯಾಡ್, ಉಕ್ಕಿನ ಟಿಕೆಟ್ ಯಂತ್ರಗಳು, ನಿಲ್ದಾಣದಲ್ಲಿ ಸಂಗ್ರಹವಾದ ಹಣವನ್ನು ಸಾಗಿಸಲು ಬಳಸುತ್ತಿದ್ದ ಬೃಹತ್ ಗಾತ್ರದ ಮರದ ಪೆಟ್ಟಿಗೆಗಳು ಕಾಲವನ್ನು ಹಿಂದೆ ಸರಿಸುತ್ತವೆ. ಜತೆಗೆ ನಿಮ್ಮ ತೂಕವನ್ನು ಅಳತೆ ಮಾಡಬಹುದಾದ ಹಳೆಯ ತೂಕದ ಯಂತ್ರ ಗಮನ ಸೆಳೆಯುತ್ತದೆ. ರೈಲ್ವೆಯ ರಾಜ ಲಾಂಛನದ ಪ್ರತಿಕೃತಿ ಕೂಡ ಇಲ್ಲಿದೆ.ಅಲ್ಲದೆ ರೈಲು ಜಗತ್ತನ್ನು ಬಣ್ಣಗಳಲ್ಲಿ ಹಿಡಿದಿಟ್ಟಿರುವ ಪ್ರಸಿದ್ಧ ಚಿತ್ರ ಕಲಾವಿದರಾದ ಅಂದಾನಿ, ಎಂ.ಎಸ್.ಮೂರ್ತಿ, ಕೆ.ಚಂದ್ರನಾಥ ಆಚಾರ್ಯ, ಎಸ್.ಜಿ.ವಾಸುದೇವ, ಎಂ.ಬಿ.ಪಾಟೀಲ್, ಜಸು ರಾವಲ್ ಅವರ ಕಲಾಕೃತಿಗಳನ್ನು ಕೂಡ ಇಲ್ಲಿ ಕಾಣಬಹುದು. ನಿಲ್ದಾಣದ ಮುಖ್ಯ ಕಟ್ಟಡದ ಹಳೆಯ ಟಿಕೆಟ್ ಕೌಂಟರ್ ಇದ್ದ ಸ್ಥಳದ ಸಮೀಪವೇ ಗ್ಯಾಲರಿ ಇದೆ. ಬೆಳಿಗ್ಗೆ 10ರಿಂದ ಸಂಜೆ ಆರರವರೆಗೆ ಗ್ಯಾಲರಿ ತೆರೆದಿರುತ್ತದೆ. ಪ್ರವೇಶ ಉಚಿತ.ಗ್ಯಾಲರಿಯನ್ನು ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘದ ವಲಯ ಅಧ್ಯಕ್ಷೆ ಕಲ್ಪನಾ ಚತುರ್ವೇದಿ ಉದ್ಘಾಟಿಸಿದರು. ಸಂಗ್ರಹ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಕುಲದೀಪ್ ಚತುರ್ವೇದಿ `ಇಲ್ಲಿ ಪ್ರದರ್ಶನಕ್ಕಿಡಲಾದ ವಸ್ತುಗಳು ಜನ ಸಾಮಾನ್ಯರಿಗೆ ರೈಲಿನ ಬಗ್ಗೆ ಕುತೂಹಲ ಮೂಡಿಸುತ್ತವೆ. ವಿವಿಧ ಕಾಲಘಟ್ಟಗಳಲ್ಲಿ ರೈಲ್ವೆ ನಡೆದು ಬಂದ ಹಾದಿಯನ್ನು ಪರಿಚಯಿಸಲಾಗಿದೆ. ಪ್ರಾಚೀನ ವಸ್ತುಗಳ ಸಂಗ್ರಹ ಕಾರ್ಯ ಮುಂದುವರಿದಿದ್ದು ಅವುಗಳನ್ನು ಕೂಡ ಪ್ರದರ್ಶಿಸುವ ಯೋಜನೆ ಇದೆ~ ಎಂದರು.`ದೆಹಲಿಯ ರೈಲ್ವೆ ವಸ್ತುಸಂಗ್ರಹಾಲಯದ ಮಾದರಿಯಲ್ಲಿಯೇ ಎಲ್ಲಾ ರೈಲ್ವೆ ವಿಭಾಗಗಳಲ್ಲಿ ಪ್ರಾಚೀನ ವಸ್ತುಗಳ ಸಂಗ್ರಹಾಗಾರವನ್ನು ತೆರೆಯಲಾಗಿದೆ. ಜನರ ಬಳಿಗೆ ರೈಲ್ವೆ ಇನ್ನಷ್ಟು ಹತ್ತಿರ ಹೋಗಲು ಇದರಿಂದ ಸಹಾಯಕವಾಗುತ್ತದೆ~ ಎಂದು ಹೇಳಿದರು.ಮತ್ತೊಂದು ಗ್ಯಾಲರಿ: ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎಸ್.ಮಣಿ, `ಬೇರೆ ವಿಭಾಗಗಳಿಗೆ ಹೋಲಿಸಿದರೆ ನೈರುತ್ಯ ರೈಲ್ವೆ ಹೊಸ ವಿಭಾಗ. ಪ್ರಾಚೀನ ವಸ್ತುಗಳನ್ನು ಸಂಗ್ರಹಿಸುವಾಗ ಅನೇಕ ಸಮಸ್ಯೆಗಳು ಎದುರಾದವು.ಅಂದಿನ ಛಾಯಾಚಿತ್ರಗಳೇ ಲಭ್ಯ ಇರಲಿಲ್ಲ. ಆಗ `ಪ್ರಜಾವಾಣಿ~ ಸೇರಿದಂತೆ ವಿವಿಧ ಪತ್ರಿಕೆಗಳನ್ನು ಸಂಪರ್ಕಿಸಿ ಹಳೆಯ ಕಾಲದ ಛಾಯಾಚಿತ್ರಗಳನ್ನು ಸಂಗ್ರಹಿಸಲಾಯಿತು. ಸಂಘ ಸಂಸ್ಥೆಗಳು ಖಾಸಗಿ ವ್ಯಕ್ತಿಗಳಿಂದಲೂ ಸಂಗ್ರಹ ಯೋಗ್ಯ ವಸ್ತುಗಳನ್ನು ಪಡೆಯಲಾಗಿದೆ. ಗ್ಯಾಲರಿಯ ನಿರ್ವಹಣೆಯನ್ನು ಮೆಕಾನಿಕಲ್ ವಿಭಾಗಕ್ಕೆ ವಹಿಸಲಾಗಿದೆ~ ಎಂದರು.`ನಿಲ್ದಾಣದ ಐದನೇ ಪ್ಲಾಟ್‌ಫಾರ್ಮ್ ಹಳೆಯ ಮಾದರಿಯಲ್ಲಿದ್ದು ಅದನ್ನು ಸಂರಕ್ಷಿಸುವುದರ ಜತೆಗೆ ಅಲ್ಲಿಯೇ ಮತ್ತೊಂದು ಗ್ಯಾಲರಿಯನ್ನು ಇನ್ನು ಆರು ತಿಂಗಳಲ್ಲಿ ಸ್ಥಾಪಿಸಲಾಗುವುದು. ಅಲ್ಲಿಯೂ ಕಲಾ ಗ್ಯಾಲರಿ ಹಾಗೂ ಅಪರೂಪದ ವಸ್ತುಗಳನ್ನು ಪ್ರದರ್ಶಿಸಲಾಗುವುದು~ ಎಂದು ತಿಳಿಸಿದರು.ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ ಲಿಲ್ಲಿ ಪಾಂಡೇಯ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry