ಭಾನುವಾರ, ಮೇ 16, 2021
21 °C

ಗತವೈಭವದ ಕುರುಹು

- ಮಾಣಿಕ ಭುರೆ,ಬಸವಕಲ್ಯಾಣ: Updated:

ಅಕ್ಷರ ಗಾತ್ರ : | |

ಹೋಬಳಿ ಕೇಂದ್ರ ಹುಲಸೂರದ ವಿವಿಧೆಡೆ ದೊರಕುವ ಹಳೆಯ ಕಟ್ಟಡಗಳ ಅವಶೇಷಗಳು, ಸುಂದರ ಶಿಲ್ಪಗಳು ಇಲ್ಲಿನ ಗತವೈಭವ ಸಾರುತ್ತವೆ. ಇಂಥ ಸ್ಮಾರಕಗಳ ಜಾಡು ಹಿಡಿದು ಹೊರಟರೆ ಈ ಸ್ಥಳದ ಇತಿಹಾಸ ತೆರೆದುಕೊಳ್ಳತ್ತದೆ.ಈಗ ಈ ಗ್ರಾಮ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಗಡಿ ಭಾಗದಲ್ಲಿದೆ. 9-12ನೇ ಶತಮಾನದ ಕಾಲದಲ್ಲಿ ಇದು ರಾಷ್ಟ್ರಕೂಟರು ಮತ್ತು ಕಲ್ಯಾಣಿ ಚಾಲುಕ್ಯ ಅರಸರು ಆಳ್ವಿಕೆ ನಡೆಸುತಿದ್ದ ಪ್ರದೇಶದ ಮಧ್ಯಭಾಗದಲ್ಲಿತ್ತು. ಚಾಲುಕ್ಯರ ಸಾಮಂತ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಇದು ಪ್ರತ್ಯೇಕ ಆಡಳಿತ ಘಟಕವಾಗಿತ್ತು. 6ನೇ ವಿಕ್ರಮಾದಿತ್ಯನು ಇದನ್ನು `ಅಟ್ಟಳೆ ನಾಡಿನ   ಭಲ್ಲುಂಕೆ- 84'ರ ಉಪ ವಿಭಾಗವನ್ನಾಗಿ ಮಾಡಿಕೊಂಡಿದ್ದ. `ಅಟ್ಟಳೆಯ ಕಂಪನಂ ಭಲ್ಲುಂಕೆ ಎಂಭತ್ತು ನಾಲ್ಕರ ಬಳಿಯ ಬಾಡಂ ಪುಲಿಚರ' ಎಂಬ ಶಾಸನದ ಉಕ್ತಿಗಳಿಂದ ಇದು ಸ್ಪಷ್ಟವಾಗುತ್ತದೆ.ಇನ್ನೊಂದು ಮಹತ್ವದ ಸಂಗತಿಯೆಂದರೆ ಇದನ್ನು ಮೊದಲು `ಪುಲಿಚರ' ಎಂದು ಕರೆಯುತಿದ್ದ ಬಗ್ಗೆ ಶಾಸನದಲ್ಲಿ ಉಲ್ಲೇಖವಾಗಿದೆ. ಹಳೆಗನ್ನಡದ `ಪುಲಿ' ಮುಂದೆ `ಹುಲಿ'ಯಾಗಿ ಊರಿನ ಹೆಸರು `ಹುಲಸೂರ' ಆಗಿದೆ ಎನ್ನಬಹುದು. ಅಂದು ಕಟ್ಟಿಸಿದ್ದ ಸೋಮನಾಥ ದೇವಾಲಯ, ಮಹಾದೇವ ದೇವಾಲಯ ಮತ್ತು ಚೌಕಿಮಠ ಎಂದು ಕರೆಯುವ ಮೂರು ಶಿಲಾ ದೇಗುಲಗಳು ಇವೆ. ವೀರಗಲ್ಲು, ಮಾಸ್ತಿಗಲ್ಲು, ಕೆತ್ತನೆಯ ಕಲ್ಲಿನ ಕಂಬಗಳು, ಮಹಾವೀರ, ಉಮಾ ಮಹೇಶ್ವರ, ವಿಷ್ಣು, ಗಣೇಶನ ವಿಗ್ರಹಗಳು ಇಲ್ಲಿ ಹೇರಳವಾಗಿವೆ. ಸಣ್ಣ ಕೋಟೆಯೂ ಇದೆ.ಮಹಾದೇವನ ಗುಡಿ ವೀರಭದ್ರೇಶ್ವರ ದೇವಸ್ಥಾನದ ದಾರಿಯಲ್ಲಿದೆ. ಇದು ಸಂಪೂರ್ಣವಾಗಿ ಕುಸಿದಿದ್ದರೂ ಗರ್ಭಗುಡಿಯ ಕೆಲಭಾಗ ಹಾಗೆಯೇ ಉಳಿದಿದೆ. ಒಳಗೆ ಶಿವಲಿಂಗವಿದ್ದು ದ್ವಾರದ ಎದುರಿಗೆ ಮಹಾವೀರ ಮತ್ತು ವಿಷ್ಣುವಿನ ವಿಗ್ರಹಗಳಿವೆ. ಗ್ರಾಮದ ಮಧ್ಯದಲ್ಲಿ ಸೋಮನಾಥ ದೇವಾಲಯವಿದೆ. ಇದನ್ನು ಈಗ ಶರಣ ಲದ್ದಿಯ ಸೋಮಣ್ಣನ ದೇವಾಲಯ ಎನ್ನುತ್ತಾರೆ. ಇಲ್ಲಿಯ ಲಿಂಗಕ್ಕೆ ಪ್ರತಿನಿತ್ಯ ಪೂಜೆ ನಡೆಯುತ್ತದೆ. ವರ್ಷಕ್ಕೊಮ್ಮೆ ಜಾತ್ರೆ ಸಹ ಹಮ್ಮಿಕೊಳ್ಳಲಾಗುತ್ತದೆ.ಇನ್ನೊಂದು ಗುಡಿ ಗ್ರಾಮದ ಪೂರ್ವ ಭಾಗದಲ್ಲಿದೆ. ಇದನ್ನು ಚೌಕಿಮಠ ಎನ್ನಲಾಗುತ್ತದೆ. ಇಲ್ಲಿಯೂ ಗರ್ಭಗುಡಿಯ ಅವಶೇಷಗಳು ಮಾತ್ರ ಉಳಿದಿವೆ. ಒಳಗೆ ಲಿಂಗವಿದೆ. ಈ ಗುಡಿ ಗಿಡಗಂಟೆಗಳಲ್ಲಿ ಮುಚ್ಚಿದ್ದರಿಂದ ತಕ್ಷಣ ಗಮನಕ್ಕೆ ಬರುವುದಿಲ್ಲ. ಮುಖ್ಯವೆಂದರೆ, ಈ ದೇವಾಲಯಗಳು 13 ನೇ ಶತಮಾನದ ನಂತರದಲ್ಲಿ ಹಾನಿಗೀಡಾಗಿವೆ. 16ನೇ ಶತಮಾನದಲ್ಲಿ ಔರಂಗಜೇಬನು ಈ ಭಾಗದ ಮೇಲೆ ದಾಳಿ ನಡೆಸಿದ್ದ. ಆಗ ಇವುಗಳನ್ನು ಧ್ವಂಸಗೊಳಿಸಿರುವ ಸಾಧ್ಯತೆ ಇದೆ ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.ಶಿಥಿಲಗೊಂಡಿರುವ ಗುಡಿಗಳ ಸುತ್ತಲಿನಲ್ಲಿ ಕೆತ್ತನೆ ಕಂಬಗಳು ಮತ್ತು ವಿಗ್ರಹಗಳು ಕುಸಿದಿವೆ. ಇಂತಹ ಪುರಾತನ ಕುರುಹುಗಳನ್ನು ರಕ್ಷಿಸಬೇಕಾದ ಕಾರ್ಯ ನಡೆಯಬೇಕಾಗಿದೆ ಎಂಬುದು ಇತಿಹಾಸ ಪ್ರೇಮಿಗಳ ಬೇಡಿಕೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.