ಶನಿವಾರ, ನವೆಂಬರ್ 23, 2019
17 °C

ಗತವೈಭವ ನೆನಪಿಸುವ ಮೈದಾನ

Published:
Updated:

ಭದ್ರಾವತಿ: ಮಾಜಿ ಪ್ರಧಾನಿ ಇಂದಿರಾಗಾಂಧಿ, ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ... ಹೀಗೆ ಹತ್ತು ಹಲವು ಮಹಾನ್ ರಾಷ್ಟ್ರೀಯ ನಾಯಕರು ಬಂದು ಚುನಾವಣಾ ಭಾಷಣ ಮಾಡಿದ ಸ್ಥಳಗಳು ಈಗ ಗತವೈಭವ ನೆನಪಿಸುತ್ತಿವೆ.ನ್ಯೂಟೌನ್ ವಿಐಎಸ್‌ಎಲ್ ಹಾಕಿ ಮೈದಾನ ಹಲವು ಮಹಾನ್ ನಾಯಕರ ಚುನಾವಣಾ ಪ್ರಚಾರ ಸಭೆಯ ವೇದಿಕೆಯಾಗಿತ್ತು. ಆದರೆ, ಒಂದೂವರೆ ದಶಕದಿಂದ ಮಾತ್ರ ಈ ವೇದಿಕೆಯಲ್ಲಿ ಯಾವುದೇ ಚುನಾವಣಾ ಪ್ರಚಾರ ಸಭೆ ನಡೆದಿಲ್ಲ ಎಂಬುದು ವಿಶೇಷ.

ಈ ಮೈದಾನದಲ್ಲಿ 1982ರ ಕಾಂಗ್ರೆಸ್ ಅಭ್ಯರ್ಥಿ ಡಿ. ಮಂಜಪ್ಪ ಅವರ ಪರ ಇಂದಿರಾಗಾಂಧಿ, ವಿಶ್ವನಾಥ ಕೋಠಿ ಪರವಾಗಿ ಅಟಲ್ ಬಿಹಾರಿ ವಾಜಪೇಯಿ, ಜಗನ್ನಾಥರಾವ್ ಜೋಷಿ, ಜನತಾ ಪಕ್ಷದ ಅಭ್ಯರ್ಥಿ ಸಾಲೇರ ಎಸ್. ಸಿದ್ದಪ್ಪ ಪರವಾಗಿ ಜಾರ್ಜ್ ಫರ್ನಾಂಡಿಸ್, ರಾಮಕೃಷ್ಣ ಹೆಗಡೆ ಪ್ರಚಾರ ಸಭೆ ನಡೆಸಿದ್ದರು.ಈಚಿನ ವರ್ಷದಲ್ಲಿ 1998ರ ಲೋಕಸಭಾ ಚುನಾವಣೆ ಸಂದರ್ಭ ಎಸ್. ಬಂಗಾರಪ್ಪ ಬಿಜೆಪಿ ಅಭ್ಯರ್ಥಿಯಾಗಿದ್ದ ವೇಳೆ ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಈ ಮೈದಾನದಲ್ಲಿ ಪ್ರಚಾರ ಸಭೆ ನಡೆಸಿದ್ದರು.ಇದೇ ಮೈದಾನದಲ್ಲಿ 1982ರಲ್ಲಿ ನಡೆದ ಜನತಾ ಪಕ್ಷದ ಸಭೆಗೆ ಬಂದಿದ್ದ ಜಾರ್ಜ್ ಫರ್ನಾಂಡಿಸ್ ಶಾಲೆಗೆ ಹೋಗುತ್ತಿದ್ದ ಹುಡುಗರ ಮೇಲೆ ಕೈಹಾಕಿಕೊಂಡು ನಡೆದು ಬಂದು ವೇದಿಕೆ ಏರಿದ್ದು, ನಂತರ ತೆರಳುವಾಗ ಅಲ್ಲಿದ್ದ ಯುವಕರಿಗೆ ಹಸ್ತಲಾಘವ ನೀಡಿದ್ದು, ಈಗಲೂ ನಮ್ಮ ಕಣ್ಣಿಗೆ ಕಟ್ಟುವಂತಿದೆ ಎನ್ನುತ್ತಾರೆ ಅಂದು ವಿದ್ಯಾರ್ಥಿಯಾಗಿ ಜಾರ್ಜ್ ಕೈಕುಲುಕಿದ್ದ ಹುತ್ತಾ ಕಾಲೊನಿಯ ನಿವಾಸಿ ಅಶೋಕಕುಮಾರ್.1985ರ ವಿಧಾನಸಭಾ ಚುನಾವಣೆಗೆ ಆಗಮಿಸಿದ್ದ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ನೆರೆದಿದ್ದ ಜನಸ್ತೋಮದ ನಡುವೆ ಹೇಳಿದ `ನಾನಿದ್ದೇನೆ, ಸಿದ್ದಪ್ಪನನ್ನು ಗೆಲ್ಲಿಸಿ' ಎಂಬ ಒಂದು ಮಾತು ಅಂದು ಅವರ ಗೆಲುವಿಗೆ ಕಾರಣವಾಯಿತು ಎಂದು ನೆನೆಯುತ್ತಾರೆ ಕಾಗದನಗರ ಗಂಗಾಧರಪ್ಪ.ಹಳೇನಗರ ಭಾಗದ ಕನಕಮಂಟಪ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ, ಎಸ್. ನಿಜಲಿಂಗಪ್ಪ, ಎಸ್.ಆರ್. ಬೊಮ್ಮಾಯಿ, ಅಡ್ವಾಣಿ, ಈಚಿನ ದಿನದಲ್ಲಿ ನರೇಂದ್ರ ಮೋದಿ ಅವರಿಗೆ ವೇದಿಕೆ ಕಲ್ಪಿಸಿಕೊಟ್ಟ ಸ್ಥಳವಾಗಿದೆ. ಸದ್ಯಕ್ಕೆ ಇದೇ ಎಲ್ಲಾ ಚುನಾವಣೆಯ ಪ್ರಚಾರ ತಾಣವಾಗಿದೆ.                                            

 

ಪ್ರತಿಕ್ರಿಯಿಸಿ (+)