ಭಾನುವಾರ, ನವೆಂಬರ್ 17, 2019
28 °C

ಗತ ವೈಭವದ ದಿನಗಳು ...

Published:
Updated:

ಈಗ ನಡೆಯುತ್ತಿರುವ ಚುನಾವಣೆಗಳನ್ನು ವಿಷಾದದ ಕಣ್ಣಿನಿಂದ ನೋಡಿ `ಎಲ್ಲ ಹಾಳಾಗಿ ಹೋಯಿತು, ನಮ್ಮ ಕಾಲದಲ್ಲಿ ಹೀಗೆ ಇರಲಿಲ್ಲ' ಎಂದು ಎಂದು ನಮ್ಮ ಹಿರಿಯರು ಆಗಾಗ ನಿಟ್ಟುಸಿರು ಬಿಡುತ್ತಾರೆ. ನಿಜಕ್ಕೂ ಆ ಕಾಲ ಹೇಗಿತ್ತು? ನಮ್ಮ ಹಿರಿಯರು ಹೇಳುತ್ತಿರುವ ಹಾಗೆ ನಿಜವಾಗಿಯೂ ಆದರ್ಶಮಯವಾಗಿತ್ತೇ? ಹಳೆಯ ಅನುಭವದಿಂದ ರಾಜಕಾರಣಿಗಳು ಮತ್ತು ಮತದಾರರು ಕಲಿಯಬೇಕಾಗಿರುವ ಪಾಠಗಳೇನಾದರೂ ಇದೆಯೇ?ಚುನಾವಣಾ ವರದಿಗಾರಿಕೆಯಲ್ಲಿ `ಪ್ರಜಾವಾಣಿ'ಗೆ ದೀರ್ಘ ಪರಂಪರೆ ಇದೆ. ಹಿರಿಯ ವರದಿಗಾರರನ್ನು ಚುನಾವಣಾ ಕ್ಷೇತ್ರಗಳಿಗೆ ಕಳುಹಿಸಿ ಪ್ರತ್ಯಕ್ಷದರ್ಶಿ ವರದಿಗಳನ್ನು ಪ್ರಕಟಿಸುವ ಪರಂಪರೆಯನ್ನು ರಾಜ್ಯದ ಮೊದಲ ಚುನಾವಣೆಯ ಕಾಲದಿಂದಲೇ `ಪ್ರಜಾವಾಣಿ ಪ್ರಾರಂಭಿಸಿತ್ತು. ನಮ್ಮ ಸಂಗ್ರಹದಲ್ಲಿರುವ `ಪ್ರಜಾವಾಣಿ'ಯ ಹಳೆಯ ಸಂಚಿಕೆಗಳಲ್ಲಿ ಪ್ರಕಟವಾಗಿರುವ ಆಯ್ದ ವರದಿಗಳ ತುಣುಕುಗಳ ಮೂಲಕ ಇತಿಹಾಸದ ಕಡೆ ಓದುಗರು ಹೊರಳಿ ನೋಡುವಂತೆ ಮಾಡುವ ಪ್ರಯತ್ನ ಇದು.

ವಿವಿಧ ರಾಜಕೀಯ ಪಕ್ಷಗಳ ಚುನಾವಣೆ ಪ್ರಣಾಳಿಕೆ

1957ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ  ಅಭ್ಯರ್ಥಿಗಳು ಒಂದೇ ವೇದಿಕೆಯಡಿ ಮಾತನಾಡಿದ ಅಪರೂಪದ ವಿದ್ಯಮಾನ ಇಲ್ಲಿದೆ...ಸ್ವಾರಸ್ಯಮಯ ಉಪನ್ಯಾಸ ಮಾಲೆ

ಬೆಂಗಳೂರು ಏ. 14: ನ್ಯಾಷನಲ್ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘ ಇಂದು ಸಂಜೆ ಒದಗಿಸಿಕೊಟ್ಟ ವಿಶಾಲ ವೇದಿಕೆಯಿಂದ ವಿವಿಧ ರಾಜಕೀಯ ಪಕ್ಷಗಳ ಚುನಾವಣೆ ಘೋಷಣೆಗಳ ಉನ್ನತಮಟ್ಟದ ಪರಿಚಯ ನಡೆಯಿತು.ಪ್ರಚಾರೋಪನ್ಯಾಸದಲ್ಲಿ ಭಾಗವಹಿಸಿದವರಲ್ಲಿ ಕೆಲವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳೇ ಅಲ್ಲದೆ, ನಗರ ಕ್ಷೇತ್ರಗಳಿಂದ ಚುನಾವಣೆಗಳಲ್ಲಿ ಸ್ಪರ್ಧಿಸಿದವರೂ ಆಗಿರುವುದು ಪ್ರಚಾರಕ್ಕೆ ಹೆಚ್ಚಿನ ಮಹತ್ವ ನೀಡಿತ್ತು.ಬೆಂಗಳೂರು ನಗರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಪಕ್ಷದ ಉಮೇದುವಾರರಾದ ಶ್ರೀ ಎನ್. ಕೇಶವಯ್ಯಂಗಾರ್, ಜನಸಂಘದ ಶ್ರೀ ಎಂ.ವಿ. ವೆಂಕಟರಾವ್, ಸ್ವತಂತ್ರವಾಗಿ ಸ್ಪರ್ಧಿಸಿರುವ ಕವಿ ರವೀಂದ್ರನಾಥ್ ಚಟ್ಟೋಪಾಧ್ಯಾಯ ಅವರುಗಳು ಮಾತನಾಡಿ, ತಮ್ಮ ಪಕ್ಷಗಳಿಗೆ ಅಥವಾ ತಮಗೆ ಮತದಾರರು ಏಕೆ ಬೆಂಬಲ ನೀಡಬೇಕೆಂಬುದನ್ನೂ ವಿವರಿಸಿದರು.ಅಲಸೂರು ಕ್ಷೇತ್ರದಿಂದ ವಿಧಾನ ಸಭೆಗೆ ನಿಂತಿರುವ ಸೋಷಲಿಸ್ಟ್ ಪಕ್ಷದ ಶ್ರೀ ಕೆ. ಕಣ್ಣನ್, ಕರ್ನಾಟಕ ಪ್ರಾಂತೀಯ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಶ್ರೀ ಎಸ್. ಎಲ್. ಉಪಾಧ್ಯಾಯ ಮತ್ತು ಕರ್ನಾಟಕ ಪಿ.ಎಸ್.ಪಿ.ಯ ಅಧ್ಯಕ್ಷ ಶ್ರೀ ಕೆ. ಆರ್. ಕಾಮತ್ ಅವರುಗಳು ಪ್ರಚಾರದಲ್ಲಿ ಭಾಗವಹಿಸಿ ಇತರ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಕಾಂಗ್ರೆಸ್‌ನ ಆಡಳಿತದ ಮೇಲೆ ಲೋಕಸಭೆಯಲ್ಲಿ ಆಗಿಂದಾಗ್ಗೆ ಸ್ವಾರಸ್ಯವಾಗಿ ಹಾಗೂ ವ್ಯಂಗ್ಯವಾಗಿ `ಕಾವ್ಯ ಚಕಮಕಿ'ಗಳನ್ನು ಹಾರಿಸಿರುವ ಕವಿ ಹರೀಶ್ ಅವರ ಭಾಷಣ ಅತ್ಯಂತ ಸ್ವಾರಸ್ಯವಾಗಿದ್ದುದೇ ಅಲ್ಲದೆ, ನೆರೆದಿದ್ದ ವಿದ್ಯಾರ್ಥಿ ಪ್ರಾಧಾನ್ಯವಾದ ಸಭೆ `ತಿವಿದು ನಗಿಸುತ್ತಿದ್ದ' ಭಾಷಣದ ಆನಂದ  ಅನುಭವಿಸಿತು.ಕಾಲೇಜಿನ ಪ್ರಿನ್ಸಿಪಲ್ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶ್ರೀ ಕೆ. ಸಂಪದ್ದೀರಿರಾವ್ ಅವರು ಅಧ್ಯಕ್ಷತೆ ವಹಿಸಿದ್ದರು. ಶ್ರೀಯುತರು ಸ್ವಾಗತ ಭಾಷಣ ಮಾಡಿ ಭಾಷಣಕಾರರನ್ನು ಪರಿಚಯ ಮಾಡಿಕೊಟ್ಟರು.ತಲಾ 20 ನಿಮಿಷಗಳ ಕಾಲದ ಭಾಷಣಗಳು ನಡೆದವು. ಕನ್ನಡದಲ್ಲಿ ಮಾತನಾಡಿದ ಶ್ರೀ ಕೆ. ಆರ್.  ಕಾಮತ್ ಅವರ ಹೊರತು ಉಳಿದವರು ಇಂಗ್ಲೀಷಿನಲ್ಲಿ ಭಾಷಣ ಮಾಡಿದರು.

ಪ್ರತಿಕ್ರಿಯಿಸಿ (+)