ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ 11ರಿಂದ

5

ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ 11ರಿಂದ

Published:
Updated:

ಗಜೇಂದ್ರಗಡ:  ಪಟ್ಟಣದಲ್ಲಿ ಫೆ.11,12 ಮತ್ತು 13ರಂದು ನಡೆಯಲಿರುವ ಗದಗ ಜಿಲ್ಲಾ 4ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆರು ಗೋಷ್ಠಿಗಳು ಮತ್ತು ಆರು ವಿಶೇಷ ಉಪನ್ಯಾಸಗಳು ನಡೆಯಲಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎ.ಬಿ.ಹಿರೇಮಠ ತಿಳಿಸಿದರು.ಸಮ್ಮೇಳನ ಸಿದ್ಧತೆ ಕುರಿತು ಸೋಮವಾರ ಇಲ್ಲಿನ ಕಸಾಪ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.“ರೋಣ ತಾಲ್ಲೂಕು ದರ್ಶನದ ಒಂದು ಗೋಷ್ಠಿ, ಗದಗ ಜಿಲ್ಲಾ ದರ್ಶನದ ಎರಡು ಗೋಷ್ಠಿಗಳು ಹಾಗೂ ತಲಾ ಒಂದು ಸಂಕಿರ್ಣ, ಕೃಷಿ ಮತ್ತು ಕವಿಗೋಷ್ಠಿ ನಡೆಯಲಿವೆ. ಸಮಕಾಲೀನ ಸಾಂಸ್ಕೃತಿಕ ಬಿಕ್ಕಟ್ಟು, ಕರ್ನಾಟಕ ಸಂಶೋಧನೆಯಲ್ಲಿ ಹೊಸ ಅವಿಷ್ಕಾರಗಳು, ಸ್ವಾತಂತ್ರ್ಯಯೋಧ ಅಬ್ಬಿಗೇರಿ ವಿರೂಪಾಕ್ಷಪ್ಪ, ಸಂಶಿ ಹಿರೇಮಠ, ಕಲಾವಿದೆ ಗಚ್ಚಾ ಸಾಲಿ, ಹಾಗೂ ಗ್ರಾಹಕರ ಹಕ್ಕುಗಳು ಕುರಿತು ತಜ್ಞರಿಂದ ಆರು ವಿಶೇಷ ಉಪನ್ಯಾಸಗಳು ನಡೆಯಲಿವೆ” ಎಂದು ತಿಳಿಸಿದರು. ಫೆ.11ರಂದು ಮಧ್ಯಾಹ್ನ 2 ಗಂಟೆಯಿಂದ 4ಗಂಟೆಯ ವರೆಗೆ ಸರ್ವಾಧ್ಯಕ್ಷ ಜ್ಞಾನದೇವ ದೊಡ್ಡಮೇಟಿ ಹಾಗೂ ಭುವನೇಶ್ವರಿ ದೇವಿಯ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ. ಸಂಜೆ 4ರಿಂದ6 ಗಂಟೆಯವರೆಗೆ ಉದ್ಘಾಟನಾ ಕಾರ್ಯಕ್ರಮ ಜರುಗುವುದು.12 ಮತ್ತು 13ರಂದು ಎರಡು ದಿನ ಬೆಳಿಗ್ಗೆ 10 ಗಂಟೆ ಯಿಂದ ಸಂಜೆ 6ರವರೆಗೆ ತಲಾ ಮೂರು ಗೋಷ್ಠಿಗಳು ಹಾಗೂ ಮೂರು ವಿಶೇಷ ಉಪನ್ಯಾಸಗಳು ನಡೆಯಲಿವೆ. ಸಮ್ಮೇಳನದ ಮೂರು ದಿವಸ ಸಂಜೆ 6ರಿಂದ12ಗಂಟೆಯ ವರೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು  ವಿವರಿಸಿದರು.ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಕಳಕಪ್ಪ ಬಂಡಿ ಮಾತನಾಡಿ, “ಸಮ್ಮೇಳನದಲ್ಲಿ ಮೂರು ದಿನಗಳ ಕಾಲ ಜಾನಪದ ರಸದೌತಣ ನಡೆಯಲಿದೆ. ಅದಕ್ಕಾಗಿ ನಾಡಿನ ಶ್ರೇಷ್ಠ ಜಾನಪದ ಕಲಾತಂಡಗಳಿಗೆ ಈಗಾಗಲೇ ಆಹ್ವಾನ ಕೊಡಲಾಗಿದೆ. ರಾಜ್ಯದ 12 ವಿಶೇಷ ಕಲಾ ತಂಡಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 15 ತಂಡಗಳು ಮತ್ತು ಸ್ಥಳೀಯ 50 ಜಾನಪದ ಕಲಾ ತಂಡಗಳು ಸಮ್ಮೇಳನದಲ್ಲಿ ಕಲಾ ಪ್ರದರ್ಶನ ಮಾಡಲಿವೆ” ಎಂದರು.‘ಸಮ್ಮೇಳನ ನಡೆಯುವ ಇಲ್ಲಿನ ಎಪಿಎಂಸಿ ಎದುರಿನ ಪುರಸಭೆಯ ಬಯಲು ಜಾಗೆಯಲ್ಲಿ ಸುಂದರ ವೇದಿಕೆ ಹಾಕಲಾಗುವುದು. ಐದು ಸಾವಿರ ಜನರಿಗೆ ಆಸನದ ಮತ್ತು ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು” ಎಂದು  ಹೇಳಿದರು.

"

ಸಮ್ಮೇಳನದಲ್ಲಿ ಭಾಗವಹಿಸುವಂತೆ ಈಗಾಗಲೇ ಜಿಲ್ಲೆಯ ಹಾಗೂ ರಾಜ್ಯದ ಹಿರಿಯ ಸಾಹಿತಿಗಳಿಗೆ ಆಹ್ವಾನವನ್ನು ಕೊಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಅನೇಕ ಸಚಿವರು, ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಒಟ್ಟಾರೆ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸುವ ಮೂಲಕ ಸಾಹಿತ್ಯ ಸಮ್ಮೇಳನವನ್ನು ಸಂಪೂರ್ಣ ಯಶಸ್ವಿಗೊಳಿಸಲು ಅಗತ್ಯ ಇರುವ ಎಲ್ಲ ಸಿದ್ಧತೆಗಳು ಭರದಿಂದ ನಡೆದಿವೆ” ಎಂದು ತಿಳಿಸಿದರು.ರೋಣ ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಎ.ಕೆಂಚರಡ್ಡಿ, ವಕೀಲ ಬಿ.ಎಂ.ಸಜ್ಜನರ, ಶಿಕ್ಷಕ ಎನ್.ಎಫ್.ಬುಟ್ಟಾನವರ, ಪೂಜಾರ, ಕೆ.ಎ.ಹಾದಿಮನಿ ಮತ್ತಿತರರು ಉಪಸ್ಥಿತರಿದ್ದರು.   

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry