ಗದಗ: ರಾಜ್ಯ ಪೈಕಾ ಕ್ರೀಡಾಕೂಟ ಇಂದಿನಿಂದ

7

ಗದಗ: ರಾಜ್ಯ ಪೈಕಾ ಕ್ರೀಡಾಕೂಟ ಇಂದಿನಿಂದ

Published:
Updated:

ಗದಗ: ರಾಜ್ಯಮಟ್ಟದ ಮಹಿಳಾ ಪೈಕಾ (ಪಂಚಾಯತ್ ಯುವ ಕ್ರೀಡಾ ಔರ್ ಖೇಲ್ ಅಭಿಯಾನ್) ಕ್ರೀಡಾಕೂಟದ ಅಥ್ಲೆಟಿಕ್ಸ್  ವಿಭಾಗದ ಕ್ರೀಡೆಗಳು ಇದೇ 17 ಹಾಗೂ 18ರಂದು ಇಲ್ಲಿನ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ  ನಡೆಯಲಿವೆ.

ಕ್ರೀಡಾಂಗಣದಲ್ಲಿ ಹೊಸದಾಗಿ ಅಳವಡಿಸಿರುವ ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ಇದೇ ಮೊದಲ ಬಾರಿ ಕ್ರೀಡೆಗಳು ನಡೆಯಲಿವೆ. ಇದೇ ಸಂದರ್ಭದಲ್ಲಿ ಇಲ್ಲಿನ ಮುಳಗುಂದ ನಾಕಾ ಬಳಿಯ ಪೊಲೀಸ್ ಮೈದಾನದಲ್ಲಿ ಷಟಲ್ ಬ್ಯಾಡ್ಮಿಂಟನ್ ಹಾಗೂ ಜಗದ್ಗುರು ತೋಂಟದಾರ್ಯ (ಜೆ.ಟಿ) ಕಾಲೇಜ್ ಅಂಗಳದಲ್ಲಿ ಟೇಬಲ್ ಟೆನಿಸ್ ಪಂದ್ಯಗಳು ನಡೆಯಲಿವೆ.

ಪೈಕಾ ಮಹಿಳಾ ಕ್ರೀಡಾಕೂಟದಲ್ಲಿ 900 ಕ್ರೀಡಾಪಟುಗಳು, 100 ಮಂದಿ ತರಬೇತುದಾರರು, 30 ಮಂದಿ ತಂಡ ವ್ಯವಸ್ಥಾಪಕರು ಪಾಲ್ಗೊಳ್ಳಲಿದ್ದಾರೆ. ಕ್ರೀಡಾಪಟುಗಳಿಗೆ ಸಿಡಿಓ ಜೈನ್ ಸ್ಕೂಲ್, ಮೈಲಾರಪ್ಪ ಮೆಣಸಗಿ ಸ್ಕೂಲ್, ಬೆಟಗೇರಿಯ ಲೊಯಲಾ ಕಾನ್ವೆಂಟ್, ಕೆ.ಎಚ್. ಪಾಟೀಲ ಸಭಾಭವನ, ಪಂಚಾಚಾರ್ಯ ಮಾಂಗಲ್ಯ ಮಂದಿರ ಹಾಗೂ ವಿವಿಧ ಹಾಸ್ಟೆಲ್‌ಗಳಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗಿದೆ.

ಅ.17ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಉದ್ಘಾಟಿಸುವರು. ಶಾಸಕ ಶ್ರೀಶೈಲಪ್ಪ ಬಿದರೂರ ಅಧ್ಯಕ್ಷತೆ ವಹಿಸುವರು ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರಗೌಡ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರವಾಸಿ ತಾಣಗಳ ಭೇಟಿ: ಗದುಗಿನ ಐತಿಹಾಸಿಕ ಮಹತ್ವವನ್ನು ಕ್ರೀಡಾಪಟುಗಳಿಗೆ ಪರಿಚಯಿಸುವ ದೃಷ್ಟಿಯಿಂದ ಸಮೀಪದ ಲಕ್ಕುಂಡಿಗೆ ಪ್ರವಾಸವನ್ನು ಏರ್ಪಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry