ಭಾನುವಾರ, ಮೇ 9, 2021
27 °C

ಗದಗ-ಹರಪನಹಳ್ಳಿ ರೈಲು ಮಾರ್ಗ ಕನಸು ನನಸಾದೀತೆ?

ಪ್ರಜಾವಾಣಿ ವಾರ್ತೆ/ಕೆ.ಸೋಮಶೇಖರ್ Updated:

ಅಕ್ಷರ ಗಾತ್ರ : | |

ಹೂವಿನಹಡಗಲಿ: ಬಹುದಿನದ ಬೇಡಿಕೆಯಾಗಿರುವ ಗದಗ-ಹರಪನಹಳ್ಳಿ ನೂತನ ರೈಲು ಮಾರ್ಗದ ಕನಸು ಈ ಬಾರಿಯಾದರೂ ನನಸಾದೀತೆ ಎಂಬ ಕುತೂಹಲ ಈ ಭಾಗದ ಜನರಲ್ಲಿ ಮೂಡಿದೆ.ಹೈ.ಕ. ಭಾಗದ ಪ್ರಭಾವಿ ನಾಯಕ ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾಗುತ್ತಿದ್ದಂತೆಯೇ ಈ ಭಾಗದ ಜನರಲ್ಲಿ ಹೊಸ ರೈಲು ಮಾರ್ಗದ ಆಸೆ ಮತ್ತೆ ಚಿಗುರತೊಡಗಿದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕಳೆದ 2 ದಶಕಗಳ ಬೇಡಿಕೆಗೆ ಮನ್ನಣೆ ದೊರೆಯದೇ ಇದ್ದುದರಿಂದ ರೈಲ್ವೆ ಹೋರಾಟಗಾರರರಿಗೆ ತೀವ್ರ ನಿರಾಸೆಯಾಗಿತ್ತು. ಇದೀಗ ನಮ್ಮವರೆ ರೈಲ್ವೆ ಖಾತೆಯ ಹೊಣೆ ಹೊತ್ತಿರುವುದರಿಂದ ಗದಗ-ಹರಪನಹಳ್ಳಿ ನೂತನ ರೈಲು ಮಾರ್ಗಕ್ಕೆ ಚಾಲನೆ ಸಿಗುವ ನಿರೀಕ್ಷೆ ಇದೆ.ಈ ರೈಲು ಮಾರ್ಗ ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಿ ಹೂವಿನಹಡಗಲಿ, ಮುಂಡರಗಿ ತಾಲ್ಲೂಕುಗಳ ರೈಲ್ವೆ ಹೋರಾಟ ಸಮಿತಿಗಳು ಕೇಂದ್ರ, ರಾಜ್ಯ ಸರ್ಕಾರಗಳ ಗಮನ ಸೆಳೆಯುವಂತಹ ಅನೇಕ ಹೋರಾಟ, ಚಳುವಳಿ ನಡೆಸಿದ್ದರೂ ಕನಿಷ್ಟ ಮಾರ್ಗ ಸರ್ವೇ ಕಾರ್ಯಕ್ಕೂ ಮುಂಜೂರಾತಿ ಸಿಗದಿರುವುದು ಈ ಭಾಗದ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಗೆ ಹಿಡಿದ ಕೈಗನ್ನಡಿಯಾಗಿದೆ.1991ರಲ್ಲಿ ಅಂದಿನ ರೈಲ್ವೆ ಸಚಿವ ಸಿ.ಕೆ. ಜಾಫರ್ ಶರೀಫ್ ಅವರಿಗೆ ಮನವಿ ಸಲ್ಲಿಸಿ ಈ ಮಾರ್ಗ ನಿರ್ಮಾಣದಿಂದ ಹಿಂದುಳಿದ ಪ್ರದೇಶಗಳಲ್ಲಿ  ಆಗುವ ಅನುಕೂಲತೆಗಳ ಕುರಿತು ಮನವರಿಕೆ ಮಾಡಿಕೊಡಲಾಗಿತ್ತು.2009-10ರ ಮುಗಡ ಪತ್ರದಲ್ಲಿ ಅಂದಿನ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಈ ನೂತನ ರೈಲು ಮಾರ್ಗ ಸಮಿಕ್ಷೆಯನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳುವ ಘೋಷಣೆ ಮಾಡ್ದ್ದಿದರಷ್ಟೇ ಆದರೆ ನಂತರ ಯಾವುದೇ ಪ್ರಗತಿ ಕಂಡಿಲ್ಲ.81 ಕಿ.ಮೀ. ಉದ್ದದ ಗದಗ-ಹರಪನಹಳ್ಳಿ ನೂತನ ರೈಲ್ವೆ ಮಾರ್ಗವನ್ನು ಮುಂಡರಗಿ, ಹೂವಿನಹಡಗಲಿ ಮುಖಾಂತರ ಕೊಟ್ಟೂರು-ಹರಿಹರ ಮಾರ್ಗಕ್ಕೆ ಜೋಡಣೆ ಮಾಡುವುದರಿಂದ ಉತ್ತರ ಕರ್ನಾಟಕದಿಂದ ರಾಜಧಾನಿ ಬೆಂಗಳೂರಿಗೆ ನೇರ ಸಂಪರ್ಕ ಕಲ್ಪಿಸಬಹುದಾಗಿದೆ. ಈಗಿರುವ ರೈಲು ಮಾರ್ಗಗಳಿಗಿಂತ ಬೆಂಗಳೂರು 120 ಕಿ.ಮೀ. ಅಂತರ ಕಡಿಮೆಯಾಗಿ, ಇಂಧನ ಮತ್ತು ಸಮಯ ಉಳಿತಾಯವಾಗುವುದನ್ನು ರೈಲ್ವೆ ಸಚಿವಾಲಯ ಗಮನಿಸಬೇಕಾಗಿದೆ.ಈ ನೂತನ ರೈಲು ಮಾರ್ಗ ಕೈಗೆತ್ತಿಕೊಳ್ಳುವುದರಿಂದ ಗದಗ, ಬಳ್ಳಾರಿ ಮತ್ತು ದಾವಣಗೆರೆಯ ಮೂರು ಜಿಲ್ಲೆಗಳ ಹೊಸ ಪ್ರದೇಶಗಳಿಗೆ ರೈಲ್ವೆ ಸೌಲಭ್ಯ ಒದಗಿಸಿದಂತಾಗುತ್ತದೆ. ಇಲ್ಲಿನ ಕೃಷಿ, ಕೈಗಾರಿಕೆ, ಶೈಕ್ಷಣಿಕ, ವ್ಯಾಪಾರ ಅಭಿವೃದ್ಧಿಯಾಗಲಿದೆ. ಅಂತರ ರಾಷ್ಟ್ರೀಯ ಪ್ರೇಕ್ಷಣೀಯ ಸ್ಥಳಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲು,  ಮೈಲಾರಲಿಂಗೇಶ್ವರ ಸುಕ್ಷೇತ್ರಗಳಿಗೆ ಬರುವ ಪ್ರವಾಸಿಗರಿಗೆ ಹೆಚ್ಚು ಅನುಕೂಲವಾಗಲಿದೆ.ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಗಳೇ ಇರುವುದು, ಹೈದರಾಬಾದ್ ಕರ್ನಾಟಕದ ಪ್ರಭಾವಿ ನಾಯಕ ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾಗಿರುವುದು, ಗದಗನಿಂದ ಹರಪನಹಳ್ಳಿಯವರೆಗೆ ಬರುವ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಕಂಡಿರುವುದರಿಂದ ಈಗ ರಾಜಕೀಯ ಇಚ್ಛಾಶಕ್ತಿಗೆ ಕಾಲ ಕೂಡಿ ಬಂದಂತಾಗಿದೆ.

ದೆಹಲಿಗೆ ನಿಯೋಗ

ಕರ್ನಾಟಕ ಪ್ರತಿನಿಧಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆಯವರು ರೈಲ್ವೆ ಸಚಿವರಾಗಿರುವುದರಿಂದ ಗದಗ-ಹರಪನಹಳ್ಳಿ ನೂತನ ರೈಲು ಮಾರ್ಗಕ್ಕೆ ಈ ಬಾರಿ ಚಾಲನೆ ಸಿಗಲಿದೆ. ಗದಗ ಮತ್ತು ಬಳ್ಳಾರಿ ಜಿಲ್ಲಾ ಮಂತ್ರಿಗಳಾದ ಎಚ್.ಕೆ.ಪಾಟೀಲ್, ಪಿ.ಟಿ.ಪರಮೇಶ್ವರ ನಾಯ್ಕ ಹಾಗೂ ಶಾಸಕ ಎಂ.ಪಿ.ರವೀಂದ್ರ ಅವರೊಂದಿಗೆ ಸಮಾಲೋಚನೆ ನಡೆಸಿ ರಾಜ್ಯ ಸರ್ಕಾರದಿಂದ ಶಿಫಾರಸ್ಸು ಮಾಡುವಂತೆ ಕೋರಲಾಗುವುದು. ಸಧ್ಯದಲ್ಲಿ ಹೋರಾಟ ಸಮಿತಿಯ ಸಭೆ ಕರೆದು ಚರ್ಚಿಸಿ ದೆಹಲಿಗೆ ನಿಯೋಗ ಕೊಂಡೊಯ್ಯುತ್ತೇವೆ. ಈ ಮಾರ್ಗ ಸ್ಥಾಪನೆಯ ಅನುಕೂಲಗಳ ಕುರಿತು ಖರ್ಗೆಯವರಿಗೆ ಮನವರಿಗೆ ಮಾಡಿಕೊಡುತ್ತೇವೆ.

ಐಗೋಳ ಚಿದಾನಂದ, ಅಧ್ಯಕ್ಷರು, ರೈಲ್ವೆ ಹೋರಾಟ ಸಮಿತಿ, ಹಡಗಲಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.