ಮಂಗಳವಾರ, ಜೂನ್ 15, 2021
27 °C

ಗದ್ದಲದಲ್ಲೇ ನಿರ್ಣಯಗಳ ಅಂಗೀಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರತಿಪಕ್ಷಗಳ ತೀವ್ರ ವಿರೋಧ, ಗದ್ದಲ ಹಾಗೂ ಗೊಂದಲದ ನಡುವೆಯೂ ಬಿಬಿಎಂಪಿ ಸಭೆಯಲ್ಲಿ ಶನಿವಾರ ಕೆಲವು ಪ್ರಮುಖ ನಿರ್ಣಯಗಳಿಗೆ ಅಂಗೀಕಾರ ನೀಡಲಾಯಿತು.ಮಧುಮೇಹ, ರಕ್ತದೊತ್ತಡ ಹಾಗೂ ಥೈರಾಯ್ಡ ಕಾಯಿಲೆಗಳ ಪರೀಕ್ಷೆ, ನಿಯಂತ್ರಣಕ್ಕೆ ಚಿಕಿತ್ಸೆ ನೀಡುವ ಸಂಬಂಧ ಪಾಲಿಕೆ ಹಾಗೂ ಮೆ. ಅಬೋಟ್ ಇಂಡಿಯಾ ಕಂಪೆನಿಯ ಸಹಭಾಗಿತ್ವದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸಾಲಯ ಪ್ರಾರಂಭಿಸುವ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ನೀಡುವಂತೆ ಕಾಂಗ್ರೆಸ್‌ನ ಹಿರಿಯ ಸದಸ್ಯ ಕೆ. ಚಂದ್ರಶೇಖರ್ ಒತ್ತಾಯಿಸಿದರು.ವಿರೋಧ ಪಕ್ಷದ ನಾಯಕ ಎಂ. ಉದಯಶಂಕರ್ ಕೂಡ ಕಸ ಸಂಗ್ರಹಣೆ ಹಾಗೂ ವಿಲೇವಾರಿ ಗುತ್ತಿಗೆಯನ್ನು ಕೆಲವು ಸಂಸ್ಥೆಗಳಿಗೆ ವಹಿಸುವ ನಿರ್ಣಯಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಆದರೂ, ಆಡಳಿತ ಪಕ್ಷದ ನಾಯಕ ಬಿ.ಆರ್. ನಂಜುಂಡಪ್ಪ ಮಂಡಿಸಿದ ನಿರ್ಣಯಗಳಿಗೆ ಮೇಯರ್ ಅನುಮೋದನೆ ನೀಡುತ್ತಾ ಹೋದರು.ಇದರಿಂದ ಸಿಟ್ಟಿಗೆದ್ದ ಕೆ. ಚಂದ್ರಶೇಖರ್, ಕೆಎಂಸಿ ಕಾಯ್ದೆಯ ಸೆಕ್ಷನ್ 70 ರಡಿ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದರು. `ನೀವು ಆನಂತರ ನಿರ್ಣಯಗಳಿಗೆ ಅನುಮೋದನೆ ನೀಡಿ. ಆದರೆ, ಅದಕ್ಕೂ ಮುನ್ನ ಚರ್ಚೆಗೆ ಅವಕಾಶ ನೀಡಿ~ ಎಂದು ಅವರು ಆಗ್ರಹಿಸಿದರು.ಆದರೆ, ಮೇಯರ್ ಪಿ. ಶಾರದಮ್ಮ ಚರ್ಚೆಗೆ ಅವಕಾಶ ನೀಡಲಿಲ್ಲ. ಪ್ರತಿಪಕ್ಷಗಳ ವಿರೋಧದ ನಡುವೆಯೂ ಆಡಳಿತ ಪಕ್ಷವು ನಿರ್ಣಯಗಳಿಗೆ ಅನುಮೋದನೆ ನೀಡಿದ್ದರಿಂದ ಕೆರಳಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಮೇಯರ್ ಪೀಠದ ಮುಂದೆ ತೆರಳಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸಭೆಯಲ್ಲಿ ಗದ್ದಲ-ಗೊಂದಲ ಉಂಟಾಯಿತು. ಇದರ ನಡುವೆಯೇ ಆಡಳಿತ ಪಕ್ಷವು ಪ್ರಮುಖ ನಿರ್ಣಯಗಳಿಗೆ ಅಂಗೀಕಾರ ಪಡೆಯಿತು.`ಆಡಳಿತ ಪಕ್ಷವು ಕೋಟ್ಯಂತರ ರೂಪಾಯಿ ಲೂಟಿ ಮಾಡುವ ಉದ್ದೇಶದಿಂದ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಹಗರಣ ಬಯಲಾಗುತ್ತದೆ ಎಂಬ ಭಯದಿಂದ ಚರ್ಚೆಗೆ ಅವಕಾಶ ನೀಡಲಿಲ್ಲ~ ಎಂದು ಜೆಡಿಎಸ್ ಗುಂಪಿನ ನಾಯಕ ಪದ್ಮನಾಭರೆಡ್ಡಿ ಆರೋಪಿಸಿದರೆ, ಕಾಂಗ್ರೆಸ್ ಸದಸ್ಯರು `ಶೇಮ್ ಶೇಮ್~ ಎಂದು ಘೋಷಣೆಗಳನ್ನು ಕೂಗಿದರು. ಗದ್ದಲದ ನಡುವೆಯೇ 60ಕ್ಕೂ ಅಧಿಕ ನಿರ್ಣಯಗಳಿಗೆ ಸಭೆ ಅನುಮೋದನೆ ನೀಡಿತು.ಕೈಬಿಡಲು ಒಪ್ಪಿಗೆ:1964-65ರಿಂದ 2006-07ನೇ ಸಾಲಿನವರೆಗೆ ಪಾಲಿಕೆಯ ವಿವಿಧ ಕಚೇರಿಗಳು ಲೆಕ್ಕ ಪರಿಶೋಧನಾ ವರದಿಗೆ ಅನುಪಾಲನಾ ವರದಿಗಳನ್ನು ಸಕಾಲದಲ್ಲಿ ನೀಡದೆ ಇರುವುದರಿಂದ ಅದುವರೆಗೆ ಆಗಿರುವ ಆಕ್ಷೇಪಣೆ ಮೊತ್ತ ರೂ. 366 ಕೋಟಿ ಹಾಗೂ ವಸೂಲಾತಿ ಮೊತ್ತ 117 ಕೋಟಿ ರೂಪಾಯಿಗಳನ್ನು ವಸೂಲಿ ಮಾಡುವುದನ್ನು ಕೈಬಿಡಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.ಕೆಲವು ಕಾರ್ಯಕರ್ತರು ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದರ ಬಗ್ಗೆಯೂ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಈ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ವಯ ಯಾವ ರೀತಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂಬುದರ ಬಗ್ಗೆ ಮಾಹಿತಿ ಹಕ್ಕು ಆಯೋಗದ ಮೂಲಕ ಪಾಲಿಕೆ ಅಧಿಕಾರಿಗಳಿಗೆ ಸದ್ಯದಲ್ಲಿಯೇ ಕಾರ್ಯಾಗಾರ ಏರ್ಪಡಿಸಲಾಗುತ್ತಿದೆ ಎಂದು ಆಯುಕ್ತ  ಶಂಕರಲಿಂಗೇಗೌಡ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.