ಬುಧವಾರ, ಅಕ್ಟೋಬರ್ 16, 2019
22 °C

ಗದ್ದೆಗೆ ನುಗ್ಗಿದ ಉಪ್ಪುನೀರು: ದೊಡ್ಡಬೆಸ್ಕೂರು ಕೃಷಿ ಭೂಮಿ ಹಾನಿ

Published:
Updated:
ಗದ್ದೆಗೆ ನುಗ್ಗಿದ ಉಪ್ಪುನೀರು: ದೊಡ್ಡಬೆಸ್ಕೂರು ಕೃಷಿ ಭೂಮಿ ಹಾನಿ

ಪಡುವರಿ  (ಬೈಂದೂರು): ಪಡುವರಿ ಗ್ರಾಮದ ದೊಡ್ಡ ಬೆಸ್ಕೂರು ಎಂಬಲ್ಲಿ ಕಿಂಡಿ ಅಣೆಕಟ್ಟುಗಳು ಒಡೆದ ಪರಿಣಾಮ ವ್ಯವಸಾಯದ ಭೂಮಿಗೆ ಉಪ್ಪುನೀರು ನುಗ್ಗಿದ್ದರಿಂದ ಸುಮಾರು 200 ಎಕರೆ ಕೃಷಿಭೂಮಿ ಹಾನಿಗೀಡಾಗಿದೆ.ಉಪ್ಪುಂದದ ಮೂಲಕ ಹರಿದು ಬೈಂದೂರಿನ ಸೋಮೇಶ್ವರದ ಬಳಿ ಸಮುದ್ರ ಸೇರುವ ನದಿಯ ಒಂದು ಕವಲು ಪಡುವರಿ ಮತ್ತು ಉಪ್ಪುಂದ ಗ್ರಾಮಗಳವರೆಗೆ ಸಮುದ್ರಕ್ಕೆ ಸಮನಾಂತರವಾಗಿ ಚಾಚಿಕೊಳ್ಳುತ್ತದೆ. ಸುಮಾರು ಎರಡು ಕಿ.ಮೀ.ಉದ್ದದ ಈ ನದಿ ಕವಲು ಪಡುವರಿಯ ಕೃಷಿಭೂಮಿ ಮತ್ತು ಜನನಿವಾಸ ಪ್ರದೇಶವನ್ನು ಬಳಸಿ ಸಾಗುತ್ತದೆ. ಈ ಪ್ರದೇಶದ ನೀರು ಮಳೆಗಾಲದಲ್ಲಿ ತೋಡುಗಳ ಮೂಲಕ ನದಿಗೆ ಹರಿಯಬೇಕು.ಆದರೆ ಬೇಸಿಗೆಯಲ್ಲಿ ನದಿಯಲ್ಲಿ ತುಂಬಿಕೊಳ್ಳುವ ಉಪ್ಪುನೀರು ಗದ್ದೆಗಳಿಗೆ ಪ್ರವೇಶಿಸದಂತೆ ತಡೆಕಟ್ಟುಗಳನ್ನು ನಿರ್ಮಿಸಿಕೊಳ್ಳಬೇಕು. ಹಿಂದೆ ಈ ಕೆಲಸವನ್ನು ರೈತರೇ ಮಾಡಿಕೊಳ್ಳುತ್ತಿದ್ದರು. ಇಲ್ಲಿ ಬದಲಿ ಶಾಶ್ವತ ವ್ಯವಸ್ಥೆಗೆ ಜನ ಆಗ್ರಹಿಸಿದ್ದರಿಂದ ಐದು ಕಡೆ ಸಣ್ಣ ನೀರಾವರಿ ಇಲಾಖೆ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿತ್ತು. ಅದರೆ ಈ ಕಾಮಗಾರಿಯಲ್ಲಿ ಆದ ಲೋಪದ ಕಾರಣದಿಂದ ಅವು ಶಿಥಿಲವಾಗಿ ನಿರುಪಯುಕ್ತವಾದುವು.ಉಪ್ಪುನೀರು ಒಳನುಗ್ಗಲು ಇದು ಒಂದು ಕಾರಣ. ದೊಡ್ಡ ಬೆಸ್ಕೂರು ಎಂಬಲ್ಲಿ ಅಂತಹ ಕಿಂಡಿ ಅಣೆಕಟ್ಟು ನಿರ್ಮಿಸಲು ಕಳೆದ ವರ್ಷ ಇಲಾಖೆ ಮುಂದಾಯಿತು. ಅದಕ್ಕಾಗಿ ನದಿ ದಂಡೆಯನ್ನು ಒಡೆಯಿತಾದರೂ ಕಾಮಗಾರಿ ನಡೆಸಲು ಸಾಧ್ಯವಾಗಲಿಲ್ಲ. ಅದನ್ನು ಅದೇ ಸ್ಥಿತಿಯಲ್ಲಿ ಇರಿಸಿರುವುದರಿಂದ ಈ ಬಾರಿ ಗದ್ದೆಗಳಲ್ಲಿ ಬೆಳೆದ ಭತ್ತದ ಕಟಾವು ಕಾಲದಲ್ಲೇ ಗದ್ದೆಗೆ ಉಪ್ಪುನೀರು ನುಗ್ಗಿ ಅವಾಂತರ ಸೃಷ್ಟಿಸಿತು ಎಂದು ಸ್ಥಳೀಯ ನಿವಾಸಿ ಮಂಜುನಾಥ ಪೂಜಾರಿ ದೂರಿದರು.ಈ ಪರಿಸ್ಥಿತಿಯಿಂದಾಗಿ ನೆಲಗಡಲೆ, ಉದ್ದು, ಅನ್ಯ ಧಾನ್ಯ ಬೆಳೆಯಲಾಗುತ್ತಿದ್ದ ಈ ಗದ್ದೆಗಳು ಈಗ ನಿರುಪಯುಕ್ತವಾಗಿವೆ. ಇದರಿಂದ ರೈತರಿಗೆ ಗಣನೀಯ ಪ್ರಮಾಣದ ಆರ್ಥಿಕ ನಷ್ಟ ಸಂಭವಿಸಿದೆ.ಈ ಪ್ರದೇಶದಲ್ಲಿ 60 ಮನೆಗಳಿವೆ. ಭರತದ ನೀರು ಗದ್ದೆ ಪ್ರವೇಶಿಸಿದಾಗ ಅವರ ಮನೆಗಳಿರುವ ಪ್ರದೇಶ ನೀರನಿಂದ ಆವೃತವಾಗುತ್ತವೆ. ಉದ್ಯೋಗ ನಿಮಿತ್ತ ಸಂಚರಿಸಬೇಕಾದ ಜನರು, ಶಾಲೆ, ಕಾಲೇಜುಗಳಿಗೆ ಹೋಗುವ ಮಕ್ಕಳು ಬವಣೆ ಅನುಭವಿಸುತ್ತಾರೆ. ಕೆಲವು ಅಪಾಯಗಳೂ ಸಂಭವಿಸಿವೆ ಎಂದು ಸ್ಥಳೀಯರು ಹೇಳುತ್ತಾರೆ.ಈ ಕಿಂಡಿ ಅಣೆಕಟ್ಟುಗಳನ್ನು ಶೀಘ್ರ ಹೊಸದಾಗಿ, ದೃಢವಾಗಿ ನಿರ್ಮಿಸಬೇಕು. ಕನಿಷ್ಠ ಒಂದು ಕಡೆಯಲ್ಲಾದರೂ ಕಿರು ಸೇತುವೆ ನಿರ್ಮಿಸಿ ಜನ ಸಂಚಾರ ಸುಗಮಗೊಳಿಸಬೇಕು. ಈಗ ಕೃಷಿ ಮಾಡಲಾಗದೆ ರೈತರು ಅನುಭವಿಸಿದ ನಷ್ಟಕ್ಕೆ ಪರಿಹಾರ ನೀಡಬೇಕು ಎಂಬುದು  ಸ್ಥಳೀಯರ ಆಗ್ರಹ.

Post Comments (+)