ಶನಿವಾರ, ಡಿಸೆಂಬರ್ 7, 2019
24 °C

ಗದ್ದೆಹಳ್ಳಿ ನಾಲೆಗಳ ತುಂಬ ಹೂಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದ್ದೆಹಳ್ಳಿ  ನಾಲೆಗಳ ತುಂಬ ಹೂಳು

ಚನ್ನರಾಯಪಟ್ಟಣ: ಗದ್ದೆಹಳ್ಳಿ ಎಂದು ಹೆಸರು ಪಡೆದ  `ನಲ್ಲೂರು~ ಗ್ರಾಮದ ಮಧ್ಯಭಾಗದಲ್ಲಿ ಹಾದು ಹೋಗಿರುವ ಶ್ರೀರಾಮದೇವರ ನಾಲೆಯಲ್ಲಿ ತುಂಬಿರುವ ಹೂಳನ್ನು ತೆಗೆಯದಿರುವುದರಿಂದ ಅನೇಕ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ.300 ಮನೆಗಳಿರುವ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಡೇರಿ, ಅಂಗನವಾಡಿ ಕೇಂದ್ರ, ಗ್ರಾಮ ದೇವತೆ  ಲಕ್ಷ್ಮೀ ದೇವಿಯ ದೇಗುಲ ಇದೆ. ನಲ್ಲೂರು ಗೇಟ್ ಬಳಿ ಗ್ರಾ.ಪಂ. ಕಚೇರಿ, ಅದರ ಪಕ್ಕ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಇದೆ.ನಾಲೆ ಹಾದು ಹೋಗಿರುವುದರಿಂದ ಈ ಭಾಗದ ಹಳ್ಳಿಗಳನ್ನು ಗದ್ದೆಹಳ್ಳಿ ಎಂದು ಕರೆಯುವುದು ವಾಡಿಕೆ.  ಕಬ್ಬು, ತೆಂಗು, ಬತ್ತವನ್ನು ಪ್ರಮುಖವಾಗಿ ಬೆಳೆಯುತ್ತಾರೆ.ಗದ್ದೆ, ತೋಟಗಳಿಗೆ ನೀರುಣಿಸುವ ನಾಲೆಯಲ್ಲಿ ಹೂಳು ತುಂಬಿ ಸಮಸ್ಯೆಗೆ ಕಾರಣವಾಗಿದೆ. ನಲ್ಲೂರು ಮತ್ತು ಗನ್ನಿ ಗ್ರಾಮದ ಸುತ್ತ ಹಾದು ಹೋಗಿರುವ ನಾಲೆಯಲ್ಲಿ ಉದ್ದಕ್ಕೂ ಹೂಳು ತುಂಬಿದೆ. ಅಳೆತ್ತರಕ್ಕೆ ಗಿಡಗಳು ಬೆಳೆದಿವೆ. ನೀರಲ್ಲಿ ಪಾಚಿಕಟ್ಟಿದೆ. ಬಟ್ಬೆ, ಬರೆ ಇತ್ಯಾದಿ ವಸ್ತುಗಳನ್ನು ಎಸೆದಿರುವುದರಿಂದ ನೀರು ಸರಾಗವಾಗ ಹರಿಯುತ್ತಿಲ್ಲ. ಊರಿನ ರಸ್ತೆಯ ಎರಡು ಬದಿಯಲ್ಲಿರುವ ಚರಂಡಿಯ ನೀರು ನಾಲೆ ಸೇರಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಸೊಳ್ಳೆಗಳ ವಾಸ ಸ್ಥಾನವಾಗಿದೆ. ಒಂದೂವರೆ ವರ್ಷದ ಹಿಂದೆ  ಊರಿನ ಬಹುತೇಕ ಜನರಲ್ಲಿ ಜ್ವರ ಕಾಣಿಸಿಕೊಂಡಿತ್ತು. ಊರವರು ಪ್ರತಿಭಟನೆಗೆ ಮುಂದಾದಾಗ ಎಚ್ಚೆತ್ತ ಅಧಿಕಾರಿಗಳು ಒಂದಷ್ಟು ಹೂಳು ಎತ್ತಿದ್ದು ಬಿಟ್ಟರೆ ಇದುವರೆಗೆ  ಏನೂ ಮಾಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ಬೇಸಿಗೆ ಬಂತೆಂದರೆ ಮತ್ತೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಆದಷ್ಟು  ಬೇಗ ಹೂಳು ಎತ್ತಬೇಕಿದೆ. ನಾಲೆ  ಆಧುನೀಕರಣಕ್ಕೆ ಮುನ್ನ ಸೋಪಾನಕಟ್ಟೆ ಇತ್ತು. ಆಧುನೀಕರಣವಾದ ನಂತರ ಸೋಪಾನಕಟ್ಟೆ ನಿರ್ಮಿಸದಿರುವುದರಿಂದ ಬಟ್ಟೆ, ಪಾತ್ರೆ ತೊಳೆಯಲು ಕಷ್ಟವಾಗಿದೆ. ರ‌್ಯಾಂಪ್ ನಿರ್ಮಾಣ ಮಾಡದಿರುವುದರಿಂದ ರಾಸುಗಳಿಗೆ ನೀರು ಕುಡಿಸಲು, ಅವುಗಳ ಮೈತೊಳೆಯಲು ತೊಂದರೆಯಾಗಿದೆ ಎನ್ನುತ್ತಾರೆ ಗ್ರಾಮಸ್ಥರು.ಊರಿನ ಮುಖ್ಯ ರಸ್ತೆ ಡಾಂಬರೀಕರಣಗೊಂಡಿದೆ. ಅದು ಬಿಟ್ಟರೆ ಉಳಿದ ರಸ್ತೆಗಳ ಸ್ಥಿತಿ ಹೇಳುವಂತಿಲ್ಲ. ಸಾಂಸ್ಕೃತಿಕ ಚಟುವಟಿಕೆ ನಡೆಸಲು ಊರಿಗೆ ರಂಗಮಂದಿರ, ಸಮುದಾಯ ಭವನದ ಅವಶ್ಯಕತೆ ಇದೆ. ಇರುವ ಒಂದು ಟ್ಯಾಂಕಿನಿಂದ ಇಡೀ ಊರಿನಲ್ಲಿರುವ 150 ನಲ್ಲಿಗೆ ಸಮರ್ಪಕ ನೀರು ಸರಬರಾಜು ಮಾಡಲಾಗುತ್ತಿಲ್ಲ. ಹಾಗಾಗಿ ಇನ್ನೊಂದು ಟ್ಯಾಂಕ್ ಅಥವಾ ಕಿರು ನೀರು ಸರಬರಾಜು ಯೋಜನೆ ಕೈಗೆತ್ತಿಕೊಳ್ಳಬೇಕಿದೆ. ಅಂಗನವಾಡಿ ಕಟ್ಟಡ ಶಿಥಿಲಗೊಂಡ ಪರಿಣಾಮ ಹಲವಾರು ವರ್ಷಗಳಿಂದ ಪಕ್ಕದಲ್ಲಿರುವ ಸಮೂಹ ಸಂಪನ್ಮೂಲ ಕೇಂದ್ರದ ಕಟ್ಟಡದಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ. ಶಿಥಿಲಗೊಂಡ  ಅಂಗನವಾಡಿ ಕಟ್ಟಡ ಕೆಡವಿ ಹೊಸದಾಗಿ ಕಟ್ಟಡ ನಿರ್ಮಿಸಬೇಕು ಎಂಬ ಆಶಯ ಜನರದು. ಪ್ರತಿವರ್ಷ ಗ್ರಾಮ ದೇವತೆ ಲಕ್ಷ್ಮೀ ದೇವಿಯ  ಜಾತ್ರಾ ಮಹೋತ್ಸವ ಹಾಗೂ ಮೂರು ವರ್ಷಕ್ಕೊಮ್ಮೆ ಅದ್ದೂರಿಯಾಗಿ ಜಾತ್ರೆ ಜರುಗುತ್ತದೆ.ಚಿನ್ನದ ಪದಕ ಪಡೆದ ಶಾಲೆ: ಸ್ವಾತಂತ್ರ್ಯಪೂರ್ವ ಅಂದರೆ 1909ರಲ್ಲಿ ಗ್ರಾಮದಲ್ಲಿ  ಹಿರಿಯ ಪ್ರಾಥಮಿಕ ಶಾಲೆ ಆರಂಭಿಸಲಾಯಿತು. ಉತ್ತಮ ಶೈಕ್ಷಣಿಕ ವಾತಾವರಣ ಹೊಂದಿರುವುದರಿಂದ 1918ರಲ್ಲಿ ಅಂದಿನ ಬ್ರಿಟೀಷ್ ಸರ್ಕಾರ ಚಿನ್ನದ ಪದಕ ನೀಡಿ ಗೌರವಿಸಿತು. 

ಪ್ರತಿಕ್ರಿಯಿಸಿ (+)