ಗನ್ ಗುರಿ ಕಥೆ

7

ಗನ್ ಗುರಿ ಕಥೆ

Published:
Updated:
ಗನ್ ಗುರಿ ಕಥೆ

ಅಪ್ಪನ ಗುಂಡಿಗೆಗೆ ಆಟಿಕೆ ಪಿಸ್ತೂಲ್ ಆನಿಸುವ ಮಗ ‘ಢಂ’ ಶಬ್ದ ಹೊರಡಿಸುತ್ತಾನೆ; ಎದೆ ನೋವಿನಿಂದ ಬಳಲುತ್ತಿದ್ದ ಅಪ್ಪ ಸಾಯುತ್ತಾನೆ. ಪೊಲೀಸ್ ಹಾಗೂ ರೌಡಿಯ ಕಣ್ಣಾಮುಚ್ಚಾಲೆಯಲ್ಲಿ ಗುಂಡು ನಾಯಕಿಗೆ ತಗುಲುತ್ತದೆ; ಆಕೆ ಸಾಯುತ್ತಾಳೆ. ಮತ್ತೊಂದು ದೃಶ್ಯದಲ್ಲಿ ಗನ್ ಹಿಡಿದ ಅದೇ ರೌಡಿ, ಮತ್ತೊಬ್ಬಳು ನಾಯಕಿ. ಈ ಸಲ ರೌಡಿಯ ಕೈಯಿಂದ ನಾಯಕ ಗನ್ ಕಸಿದುಕೊಳ್ಳುತ್ತಾನೆ; ರೌಡಿ ಸಾಯುತ್ತಾನೆ. ಕೊನೆಯ ದೃಶ್ಯದಲ್ಲಿ ಎಂಜಿನಿಯರಿಂಗ್ ಓದಿದ ನಾಯಕ ಪೊಲೀಸ್ ಅಧಿಕಾರಿ ಸಮವಸ್ತ್ರ ತೊಟ್ಟಿದ್ದಾನೆ. ಕೈಯಲ್ಲಿ ಗನ್! ಈ ಬಾರಿ ಯಾರೂ ಸಾಯುವುದಿಲ್ಲ.ಮೊದಲ ಸನ್ನಿವೇಶ ಬಾಲಿಶವಾಗಿಯೂ, ಎರಡನೇ ದೃಶ್ಯ ಬೆಚ್ಚಿಬೀಳಿಸುವಂತೆಯೂ, ಮೂರನೇ ದೃಶ್ಯ ಅನುಕೂಲಸಿಂಧುವಿನಂತೆಯೂ, ಕೊನೆಯ ದೃಶ್ಯ ತಮಾಷೆಯಾಗಿಯೂ ಇದೆ. ಹರೀಶ್‌ರಾಜ್ ನಿರ್ದೇಶನದ ‘ಗನ್’ ಸಿನಿಮಾ ಕೂಡ ಹೀಗೆಯೇ ಇದೆ- ತಮಾಷೆಯಾಗಿ, ಬಾಲಿಶವಾಗಿ, ಬೆರಗಿನ ತುಣುಕುಗಳಾಗಿ, ಅನುಕೂಲಸಿಂಧು ಕಥನವಾಗಿ.ಹರೀಶ್‌ರಾಜ್, ‘ಕಲಾಕಾರ್’ ಚಿತ್ರದ ಮೂಲಕ ನಾಯಕನಾಗಿಯೂ ನಿರ್ದೇಶಕನಾಗಿಯೂ ಭರವಸೆ ಮೂಡಿಸಿದ್ದವರು. ಆದರೆ, ‘ಕಲಾಕಾರ್’ನ ಮಹತ್ವಾಕಾಂಕ್ಷೆ ‘ಗನ್’ನಲ್ಲಿ ಕಾಣಿಸುವುದಿಲ್ಲ. ರಸವತ್ತಾದ ಹಾಡು, ಮಸ್ತು ಫೈಟಿಂಗ್‌ಗಳ ಮೂಲಕ ಪ್ರೇಕ್ಷಕರನ್ನು ಮೋಡಿಮಾಡಲು ಪ್ರಯತ್ನಿಸಿರುವ ಅವರು, ಹಾಡು-ಹೊಡೆದಾಟಕ್ಕೆ ನೀಡಿರುವ ಗಮನವನ್ನು ಕಥೆಗೆ ನೀಡಿಲ್ಲ. ‘ಗನ್’ ಶೀರ್ಷಿಕೆಗೆ ತಕ್ಕಂತೆ ದೃಶ್ಯಗಳನ್ನು ಪೋಣಿಸಲು ಹೊರಟಿರುವ ಅವರು ತಮ್ಮ ಚಿತ್ರವನ್ನೂ ಬಂದೂಕಿನ ಗುರಿಗೊಡ್ಡಿದ್ದಾರೆ.ಕಥೆ ಸೊರಗಿದ್ದರೂ ತಾಂತ್ರಿಕ ಪ್ರಭೆಯಿಂದಾಗಿ ಹಾಗೂ ಕಲಾವಿದರ ಪರಿಣಾಮಕಾರಿ ನಟನೆಯಿಂದಾಗಿ ‘ಗನ್’ ಗಮನಸೆಳೆಯುತ್ತದೆ. ರೋನಿ ರಾಫೆಲ್‌ರ ಸಂಗೀತ, ರಾಮಚಂದ್ರ-ವಿಷ್ಣುವರ್ಧನರ ಛಾಯಾಗ್ರಹಣ ಸಿನಿಮಾದ ಕಳೆ ಹೆಚ್ಚಿಸಿದೆ. ಮಾತುಗಳ ಮೂಲಕ ಸಿನಿಮಾ ನಿಲ್ಲಿಸಲು ಪ್ರಯತ್ನಿಸಿರುವ ಮಂಜು ಮಾಂಡವ್ಯರ ಪ್ರಯತ್ನವೂ ಮೆಚ್ಚುವಂತಿದೆ. ನಟನೆಯ ಪೈಕಿ ಮೊದಲ ಸ್ಥಾನದಲ್ಲಿ ನಿಲ್ಲುವುದು ಹರೀಶ್‌ರಾಜ್. ಎಂಥ ಸನ್ನಿವೇಶವನ್ನಾದರೂ ನಟನಾಗಿ ನಿಭಾಯಿಸಬಲ್ಲೆ ಎನ್ನುವುದನ್ನವರು ಮತ್ತೆ ಸಾಬೀತುಪಡಿಸಿದ್ದಾರೆ. ಕಾರ್ಪೊರೇಟರ್ ಪಾತ್ರದಲ್ಲಿ ನಟಿಸಿರುವ ರಂಗಾಯಣ ರಘು, ಈ ಪಾತ್ರ ತಮಗೆ ಸವಾಲಿನದ್ದೇ ಅಲ್ಲ ಎನ್ನುವಷ್ಟು ಸಹಜವಾಗಿ ನಟಿಸಿದ್ದಾರೆ. ನಾಯಕಿಯರಾದ ನಿಖಿತಾ ಹಾಗೂ ಮಲ್ಲಿಕಾ ಕಪೂರ್ ಚಿತ್ರದ ಗ್ಲಾಮರ್ ಹೆಚ್ಚಿಸಿದ್ದಾರೆ. ‘ಬಿಸಿಬಿಸಿ ಎದೆಯ..’ ಎನ್ನುವ ಗೀತೆಯಲ್ಲಿ ಮಲ್ಲಿಕಾ ಬಿಡುಬೀಸಾಗಿ ಕಾಣಿಸಿಕೊಂಡಿದ್ದಾರೆ.ನಾಯಕನ ಪಾತ್ರ ವಿಜೃಂಭಣೆಗೆ ಕೊಟ್ಟಷ್ಟೇ ಗಮನವನ್ನು ಕಥೆಗೂ ನೀಡಿದ್ದಲ್ಲಿ, ‘ಗನ್’ ಮತ್ತಷ್ಟು ಉತ್ತಮಗೊಳ್ಳುತ್ತಿತ್ತು.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry