ಭಾನುವಾರ, ಅಕ್ಟೋಬರ್ 20, 2019
22 °C

ಗಮನ ಬೇರೆಡೆ ಸೆಳೆದು 2.50 ಲಕ್ಷ ದರೋಡೆ

Published:
Updated:

ಬೆಂಗಳೂರು: ದುಷ್ಕರ್ಮಿಯೊಬ್ಬ ವ್ಯಾಪಾರಿಯ ಗಮನ ಬೇರೆಡೆ ಸೆಳೆದು 2.50 ಲಕ್ಷ ರೂಪಾಯಿ ಹಣ ದೋಚಿರುವ ಘಟನೆ ಸುಬ್ರಹ್ಮಣ್ಯಪುರ ಸಮೀಪದ ದೊಡ್ಡಕಲ್ಲಸಂದ್ರದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.ದೊಡ್ಡಕಲ್ಲಸಂದ್ರ ನಿವಾಸಿ ರಾಜಗೋಪಾಲ್ ಹಣ ಕಳೆದುಕೊಂಡವರು. ಷೇರು ವ್ಯವಹಾರ ಮಾಡುವ ಅವರು ಸಿಂಡಿಕೇಟ್ ಬ್ಯಾಂಕ್‌ನ ದೊಡ್ಡಕಲ್ಲಸಂದ್ರ ಶಾಖೆಗೆ ಹಣ ಕಟ್ಟಲು ಚಾಲಕ ಶಿವಕುಮಾರ್ ಜತೆ ಕಾರಿನಲ್ಲಿ ಬ್ಯಾಂಕ್‌ನ ಬಳಿ ಬಂದಿದ್ದಾಗ ದುಷ್ಕರ್ಮಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಬ್ಯಾಂಕ್‌ನ ಮುಂದೆ ವಾಹನ ನಿಲುಗಡೆ ಮಾಡಿದ ಶಿವಕುಮಾರ್, ರಾಜಗೋಪಾಲ್ ಅವರಿಗೆ ಎಳನೀರು ತರಲು ಸಮೀಪದ ಅಂಗಡಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ರಾಜಗೋಪಾಲ್ ಕಾರಿನ ಬಳಿ ನಿಂತಿದ್ದರು.ಅದೇ ವೇಳೆಗೆ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬ `ನಿಮ್ಮ ಹಣ ಬಿದ್ದಿದೆ~ ಎಂದು ಅವರಿಗೆ ಹೇಳಿದ. ಆ ವ್ಯಕ್ತಿ ಹೇಳಿದಂತೆಯೇ ಕಾರಿನಿಂದ ಸ್ವಲ್ಪ ದೂರದಲ್ಲಿ ಹತ್ತು ರೂಪಾಯಿ ಮುಖಬೆಲೆಯ ನೋಟುಗಳು ಬಿದ್ದಿದ್ದವು.ರಾಜಗೋಪಾಲ್ ಆ ನೋಟುಗಳನ್ನು ತೆಗೆದುಕೊಳ್ಳಲು ಹೋದಾಗ, ಅಪರಿಚಿತ ವ್ಯಕ್ತಿ ಕಾರಿನ ಹಿಂದಿನ ಸೀಟಿನ ಮೇಲಿದ್ದ ಹಣದ ಬ್ಯಾಗ್ ತೆಗೆದುಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post Comments (+)