ಗುರುವಾರ , ಫೆಬ್ರವರಿ 25, 2021
19 °C
ಬೀದರ್‌: ವಿದ್ಯಾರ್ಥಿಗಳು ತಯಾರಿಸಿದ ಮಾದರಿ ಪ್ರದರ್ಶನ

ಗಮನ ಸೆಳೆದ ಜ್ಞಾನ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಮನ ಸೆಳೆದ ಜ್ಞಾನ ಉತ್ಸವ

ಪ್ರಜಾವಾಣಿ ವಾರ್ತೆ

ಬೀದರ್: ನಗರದ ಶಾಹಿನ್ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ  ಆಯೋಜಿಸಿದ್ದ ಮೂರು ದಿನಗಳ ಜ್ಞಾನ ಉತ್ಸವ ವಿದ್ಯಾರ್ಥಿಗಳ ಜ್ಞಾನಮಟ್ಟ ಹಾಗೂ ಆತ್ಮವಿಶ್ವಾಸ ವೃದ್ಧಿಸುವಲ್ಲಿ ಯಶಸ್ವಿಯಾಯಿತು.ನಗರ ಹಾಗೂ ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉತ್ಸವಕ್ಕೆ ಭೇಟಿ ನೀಡಿ ಹೊಸ ಹೊಸ ವಿಷಯಗಳ ಕುರಿತು ಮಾಹಿತಿ ಪಡೆದುಕೊಂಡರು.

ಮೂರು ದಿನಗಳಲ್ಲಿ 30 ಸಾವಿರ ವಿದ್ಯಾರ್ಥಿಗಳು ಉತ್ಸವಕ್ಕೆ ಭೇಟಿ ನೀಡಿದ್ದಾರೆ ಎಂದು ಶಾಹಿನ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಅಬ್ದುಲ್ ಖದೀರ್ ತಿಳಿಸಿದರು.ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸಲು ಹಾಗೂ ವಾಕ್ ಚಾತುರ್ಯ ಬೆಳೆಸಲು ಐದು ವರ್ಷಗಳಿಂದ ಪ್ರತಿ ವರ್ಷವೂ ಜ್ಞಾನ ಉತ್ಸವ ಆಯೋಜಿಸುತ್ತ ಬರಲಾಗಿದೆ ಎಂದು ಹೇಳಿದರು.ಉತ್ಸವಕ್ಕೆ ಭೇಟಿ ನೀಡಿದವರಿಗೆ ಒಂದರಿಂದ 10ನೇ ತರಗತಿಯ ವಿದ್ಯಾರ್ಥಿಗಳು ತಾವೇ ಸಿದ್ಧಪಡಿಸಿದ ಮಾದರಿಗಳ ಬಗೆಗೆ ಮಾಹಿತಿ ನೀಡಿದರು. ಒಂದೇ ಸೂರಿನಡಿ ಎಲ್ಲ ಮಾಹಿತಿಗಳನ್ನು ಒದಗಿಸಬೇಕು ಎನ್ನುವ ಉತ್ಸವದ ಪ್ರಯತ್ನ ಯಶಸ್ವಿಯಾಗಿದೆ ಎಂದು ತಿಳಿಸಿದರು.300 ಮಾದರಿಗಳು: ಉತ್ಸವದಲ್ಲಿ ಹೈಕೋರ್ಟ್, ಸುಪ್ರೀಂಕೋರ್ಟ್, ಲೋಕ್ ಅದಾಲತ್, ಪಂಚಾಯತ್‌ರಾಜ್ ವ್ಯವಸ್ಥೆ, ಪರಿಸರ ಸಂರಕ್ಷಣೆ, ಮಕ್ಕಳ ಹಕ್ಕುಗಳು, ಮಹಿಳೆಯರ ಹಕ್ಕುಗಳು, ಆರೋಗ್ಯ ಕೇಂದ್ರ, ಯೋಗ ಕೇಂದ್ರ, ಕೈಗಾರಿಕೆಗಳು, ಭೂಮಿ, ಖಗೋಳಶಾಸ್ತ್ರ, ಕುರಾನ್ ಮತ್ತು ವಿಜ್ಞಾನ, ಜೀವನ ಮೌಲ್ಯಗಳ ಚಿತ್ರ ಪ್ರದರ್ಶನ, ಬ್ಯಾಟರಿ ಚಾಲಿತ ಕಾರು, ಹೆಲಿಕಾಪ್ಟರ್, ಮೆಹಂದಿ ಮೇಳ, ವಿಜ್ಞಾನ ಮತ್ತು ತಂತ್ರಜ್ಞಾನ, ಮೂಢ ನಂಬಿಕೆ ಜಾಗೃತಿ ಮತ್ತಿತರ  300 ಮಾದರಿಗಳು ಪ್ರದರ್ಶನದಲ್ಲಿದ್ದವು.

ನಗರದ ಐತಿಹಾಸಿಕ ಕೋಟೆ, ಮಹಮೂದ್ ಗಾವಾನ್ ಮದರಸಾ, ಚೌಬಾರಾ, ಚೌಖಂಡಿ, ಅಷ್ಟೂರಿನ ಗುಂಬಜ್‌ಗಳು, ಧಾರ್ಮಿಕ ಸ್ಥಳಗಳ ಮಾದರಿಗಳು ಗಮನ ಸೆಳೆದವು.ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತಯಾರಿಸಿರುವ ಕ್ಷಿಪಣಿಗಳ ಮಾದರಿ ವಿಶಿಷ್ಟವಾಗಿತ್ತು. ವಿದ್ಯಾರ್ಥಿಗಳು ಕಲಾಂ ಅವರ ತ್ರಿಶೂಲ್, ನಾಗ್, ಆಕಾಶ್, ಪ್ರಥ್ವಿ, ಅಗ್ನಿ ಕ್ಷಿಪಣಿಗಳ ಕುರಿತು ಮಾಹಿತಿ ನೀಡಿದರು.ಮಿಲಿಟರಿ, ಪೊಲೀಸ್, ಜೋಕರ್‌ ಪಾತ್ರಧಾರಿಗಳು ಮನೋರಂಜನೆ ಒದಗಿಸಿದರು. ಮಕ್ಕಳು ಸಿದ್ಧಪಡಿಸಿದ ಮಾದರಿ ಹಾಗೂ ಅವುಗಳ ಕುರಿತು ನೀಡುತ್ತಿದ್ದ ಮಾಹಿತಿಯನ್ನು ಕಂಡು ಪಾಲಕರು, ಸಂಬಂಧಿಕರು ಸಂತಸ ವ್ಯಕ್ತಪಡಿಸಿದರು.800 ವಿದ್ಯಾರ್ಥಿಗಳು ಹಾಗೂ 125 ಶಿಕ್ಷಕರು ಉತ್ಸವದಲ್ಲಿ ನಿರಂತರ ತೊಡಗಿಸಿಕೊಂಡಿದ್ದರು. ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಪ್ರದರ್ಶನ ನೀಡಿದರು.ಜ್ಞಾನ ಉತ್ಸವವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಮೊದಲ ದಿನ ಮಕ್ಕಳು ಸಿದ್ಧಪಡಿಸಿದ್ದ ಮಾದರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.ಮಕ್ಕಳ ಜ್ಞಾನ ವೃದ್ಧಿಸಲು ಸಂಸ್ಥೆ ಪ್ರತಿ ವರ್ಷ ಜ್ಞಾನ ಉತ್ಸವ ಆಯೋಜಿಸುತ್ತಿರುವುದನ್ನು ಪ್ರಶಂಶಿಸಿದ್ದರು. ಮುಖಂಡರಾದ ಶಾಂತಲಿಂಗ

ಸಾವಳಗಿ, ಅಬ್ದುಲ್ ಮನ್ನಾನ್ ಸೇಠ್ ಇದ್ದರು. ಉತ್ಸವ ಗುರುವಾರ ಸಂಜೆ ತೆರೆ ಕಂಡಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.