ಗಮನ ಸೆಳೆದ ಬೆಳ್ಳುಬ್ಬಿ ರುಮಾಲು;ಡಿ.ವಿ.ಎಸ್ ಎರಡನೇ ಸಾಲಿಗೆ ಹಿಂಬಡ್ತಿ

ಶನಿವಾರ, ಜೂಲೈ 20, 2019
22 °C

ಗಮನ ಸೆಳೆದ ಬೆಳ್ಳುಬ್ಬಿ ರುಮಾಲು;ಡಿ.ವಿ.ಎಸ್ ಎರಡನೇ ಸಾಲಿಗೆ ಹಿಂಬಡ್ತಿ

Published:
Updated:

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಎರಡನೇ ಸಾಲಿನಲ್ಲಿ ಕುಳಿತು ವಿಧಾನ ಪರಿಷತ್ತಿನ ಕಲಾಪದ ಮೊದಲ ದಿನ ಎಲ್ಲರ ಗಮನ ಸೆಳೆದರು. ಸದನ ಆರಂಭಗೊಂಡ ನಂತರ ಸ್ವಲ್ಪ ತಡವಾಗಿ ಆಗಮಿಸಿದ ಸದಾನಂದ ಗೌಡ ಅವರು, ಕೆಲವು ಸಚಿವರು ಹಾಗೂ ಸದಸ್ಯರ ಕೈಕುಲುಕಿ ಎರಡನೇ ಸಾಲಿನಲ್ಲಿ ಕುಳಿತರು.ಪಕ್ಕದ ಆಸನದಲ್ಲಿದ್ದ ವಿಮಲಾ ಗೌಡ ಅವರೊಂದಿಗೆ ಕೆಲಕಾಲ ಚರ್ಚೆಯಲ್ಲಿ ತೊಡಗಿದ್ದಾಗ ಒಂದಿಬ್ಬರು ಸದಸ್ಯರು ಅವರ ಬಳಿಗೇ ಹೋಗಿ ಕೈಕುಲುಕಿದರು. ಗೌಡರು ಎಂದಿನ ಮುಗುಳ್ನಗೆಯಲ್ಲಿ ಸದಸ್ಯರ ಕೈಕುಲುಕಿ ಕಲಾಪದಲ್ಲಿ ತೊಡಗಿಕೊಂಡರು.ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದ ನಂತರ ಹೊರ ಹೋದ ಸದಾನಂದಗೌಡರು, ಮತ್ತೆ ಸದನದಲ್ಲಿ ಕಾಣಿಸಿಕೊಳ್ಳಲಿಲ್ಲ.ರುಮಾಲು ಧರಿಸಿದ ಬೆಳ್ಳುಬ್ಬಿ: ಕೃಷಿ ಮಾರುಕಟ್ಟೆ ಸಚಿವ ಎಸ್.ಕೆ. ಬೆಳ್ಳುಬ್ಬಿ ಹಳದಿ ರುಮಾಲು ತೊಟ್ಟು ಕಲಾಪದಲ್ಲಿ ಭಾಗವಹಿಸುವ ಮೂಲಕ ಗಮನಸೆಳೆದರು.ಭಂಡಾರಿ ಪ್ರಮಾಣ ವಚನ: ಸಚಿವ ಡಾ.ವಿ.ಎಸ್. ಆಚಾರ್ಯ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಆಯ್ಕೆಯಾಗಿರುವ ಕೆ. ಮೋನಪ್ಪ ಭಂಡಾರಿ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸದನ ಪ್ರಾರಂಭವಾಗುತ್ತಿದ್ದಂತೆಯೇ ಭಂಡಾರಿ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.ಸಮಿತಿ ಪುನರ‌್ರಚನೆ: ವಿಧಾನಸೌಧ ಹಾಗೂ ವಿಕಾಸಸೌಧಗಳ ನಡುವೆ ಧ್ಯಾನಾಸಕ್ತ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯನ್ನು ಸ್ಥಾಪಿಸುವ ಸಂಬಂಧ ಈ ಹಿಂದೆ ರಚಿಸಲಾಗಿದ್ದ ಸಮಿತಿಯನ್ನು ಈಗ ಪುನರ್‌ರಚಿಸಲಾಗಿದೆ.ವಿಧಾನಸಭಾ ಅಧ್ಯಕ್ಷ ಕೆ.ಜಿ. ಬೋಪಯ್ಯ, ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಒಳಗೊಂಡ ಈ ಸಮಿತಿಯಲ್ಲಿ ಸಭಾನಾಯಕ ವಿ. ಸೋಮಣ್ಣ, ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ಸಚಿವರಾದ  ಎಸ್.ಸುರೇಶ್‌ಕುಮಾರ್, ಸಿ.ಎಂ. ಉದಾಸಿ, ವಿರೋಧ ಪಕ್ಷದ ಸದಸ್ಯರಾದ ವೀರಣ್ಣ ಮತ್ತಿಕಟ್ಟಿ ಹಾಗೂ ಎಂ.ಸಿ. ನಾಣಯ್ಯ ಇರುತ್ತಾರೆ ಎಂದು ಸಭಾಪತಿ ಡಿ.ಎಚ್. ಶಂಕರಮೂರ್ತಿ ಪ್ರಕಟಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry