ಗಮನ ಸೆಳೆದ ಮಹಿಳಾ ಕಲಾ ಶಿಬಿರ

7

ಗಮನ ಸೆಳೆದ ಮಹಿಳಾ ಕಲಾ ಶಿಬಿರ

Published:
Updated:
ಗಮನ ಸೆಳೆದ ಮಹಿಳಾ ಕಲಾ ಶಿಬಿರ

ಕಲಬುರ್ಗಿ: ನೆರೆದಿದ್ದ ಮಹಿಳಾ ಕಲಾವಿದೆಯರೆಲ್ಲ ಬಣ್ಣದ ಲೋಕದಲ್ಲಿ ಧ್ಯಾನಸ್ಥರಾಗಿದ್ದರು. ಕೆಲವರು ಮರಗಳ ಮಧ್ಯೆ ಕ್ಯಾನ್ವಾಸ್‌ ಬಿಡಿಸಿಕೊಂಡು ನಿಂತಿದ್ದರು, ಇನ್ನು ಕೆಲವರು ನೆಲದ ಮೇಲೆ ಕ್ಯಾನ್ವಾಸ್‌ ಬಿಡಿಸಿಕೊಂಡು ಬಣ್ಣ ಬಳಿಯುತ್ತಿದ್ದರು. ಹೌದು, ಗಮನ ಸೆಳೆಯುವ ಈ ಸುಂದರ ದೃಶ್ಯವು ಗುಲ್ಬರ್ಗ ವಿಶ್ವವಿದ್ಯಾಲಯದ ‘ಕೈಲಾಸ’ ಅತಿಥಿಗೃಹ ಹಸಿರು ವನಸಿರಿಯ ನಡುವೆ ಬುಧವಾರ ಕಂಡುಬಂತು.ಗುಲ್ಬರ್ಗ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯು ಫೆ.21ರಿಂದ ಐದು ದಿನಗಳವರೆಗೂ ಆಯೋಜಿಸಿದ್ದ ಅಖಿಲ ಭಾರತ ಮಹಿಳಾ ಕಲಾವಿದರ ಶಿಬಿರ­ದಲ್ಲಿ ಪಾಲ್ಗೊಂಡಿದ್ದ ವಿವಿಧ ರಾಜ್ಯಗಳ ಕಲಾವಿದೆಯರು ತಮ್ಮ ಕಲಾಕೃತಿಗೆ ಅಂತಿಮಸ್ಪರ್ಶ ನೀಡುವುದರಲ್ಲಿ ಮಗ್ನರಾಗಿದ್ದ ದೃಶ್ಯ ಹೀಗೆ ಕಂಡುಬಂತು.ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಕಾಂದಲೆ ಗಡೆಮನೆ ಗ್ರಾಮದ ಲಕ್ಷ್ಮೀ ರಾಮಪ್ಪ ಅವರು ಬಿಡಿಸುತ್ತಿದ್ದ ಜಾನಪದ ಕಲೆ ಚಿತ್ತಾರವು ವಿಶಿಷ್ಟವಾ­ಗಿತ್ತು. ಯಾವ ಕಾಲೇಜು, ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆದಿರದ ಹಾಗೂ ಗ್ರಾಮದಲ್ಲೆ ಗೋಡೆ ಚಿತ್ತಾರ ಬಿಡಿಸುವುದಕ್ಕೆ ಸಿಮೀತವಾಗಿದ್ದ ಲಕ್ಷ್ಮೀ ಅವರು ತಮ್ಮದೇ ಶೈಲಿಯಲ್ಲಿ ಕ್ಯಾನ್ವಾಸ್‌ ಮೇಲೆ ‘ಚಿನ್ನಾನಿ ಚಿತ್ತಾರ’ ಬಿಡಿಸುತ್ತಿದ್ದರು. ‘ಹಳ್ಳಿಗಳಲ್ಲಿ ಗೋಡೆ ಮೇಲೆ ಬಗೆಬಗೆ ಚಿತ್ತಾರ ಬಿಡಿಸುತ್ತಿದ್ದೆ. ಅಕಾಡೆಮಿ ಅಧ್ಯಕ್ಷರು ನನ್ನ ಕಲೆಯನ್ನು ಗುರುತಿಸಿ, ಕ್ಯಾನ್ವಾಸ್‌ ಮೇಲೆ ಚಿತ್ತಾರ ಬಿಡುಸುವುದು ಹೇಗೆ ಎಂದು ತರಬೇತಿ ಕೊಟ್ಟರು. ಇದೀಗ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದ್ದಾರೆ. ನಮ್ಮೂರಲ್ಲಿ ನಡೆಯುವ ಮದುವೆ ಸಮಾರಂಭದಲ್ಲಿ ಚಿತ್ತಾರ ಬಿಡಿಸುವ ಕೆಲಸವನ್ನು ನಾವೇ ಮಾಡುತ್ತೇವೆ’ ಎಂದು ಹೇಳುತ್ತಾ ಲಕ್ಷ್ಮೀ ಅವರು ಚಿತ್ತಾರ ಕುರಿತಾಗಿ ಹಲವು ಜನಪದ ಹಾಡುಗಳನ್ನು ಹಾಡಿದರು.ಇನ್ನೊಂದು ಕಡೆ, ಯಾದಗಿರಿಯ ಚಿತ್ರಕಲಾವಿದೆ ಗಾಯತ್ರಿ ಮಂಥ ಅವರು ಎರಡು ಚಿತ್ರಕಲಾಕೃತಿ ಗಳನ್ನು ಪೂರ್ಣಗೊಳಿಸಿ ಪ್ರದರ್ಶನಕ್ಕೆ ಇಟ್ಟಿದ್ದರು. ಹಸಿದ ಕಾಗೆಗಳು ಆಗಸದಲ್ಲಿ ಜೋತು ಬಿದ್ದ ಸೇಬು ತಿನ್ನಲು ಸ್ಪರ್ಧಿಸು ತ್ತಿರುವುದು ಒಂದು ಕಲಾಕೃತಿಯ ಲ್ಲಿದ್ದ ದೃಶ್ಯ. ಪಾರದರ್ಶಕ ಪಾತ್ರೆಯ ಮಧ್ಯೆದ ಸೇಬು ತಿನ್ನುವುದಕ್ಕೆ ಹೊಂಚುಹಾಕಿ ಕಾಯುತ್ತಿದ್ದ ಕಾಗೆಗಳ ಗುಂಪುಗಳಿದ್ದ ಇನ್ನೊಂದು ಕಲಾಕೃತಿಯ ದೃಶ್ಯ. ಸೇಬು ಎಂಬುದು ಮಹಿಳೆಯಾದರೆ, ಕಾಗೆಗಳು ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರದ ಸಂಕೇತ ಎಂದು ಗಾಯತ್ರಿ ಅವರು ವಿವರ ನೀಡಿದರು.ಕಲಬುರ್ಗಿಯ ಜ್ಯೋತಿ ಹತ್ತರಕಿ ಅವರು ಪಾರ್ವತಿ–ಪರಮೇಶ್ವರ ಒಳ ಗೊಂಡ ಅರ್ಧ ನಾರೀಶ್ವರ ಪರಿಕಲ್ಪನೆ ಯಲ್ಲಿ ಒಂದು ಕಲಾಕೃತಿ ಯನ್ನು ಪೂರ್ಣಗೊಳಿಸಿ, ಇನ್ನೊಂದು ಕಲಾಕೃತಿಗೆ ಅಂತಿಮಸ್ಪರ್ಶ ನೀಡುತ್ತಿದ್ದರು. ಗೋವಾದ ಪೆಂಜಿಮ್‌ ಕಲಾವಿದೆ ಹರ್ಷದಾ ಕೆರ್ಕರ್‌ ಅವರು ದೊಡ್ಡ ಕ್ಯಾನ್ವಾಸ್‌ನಲ್ಲಿ ಧಾರ್ಮಿ ಕತೆಯನ್ನು ಬಿಂಬಿಸುವ ಮರ ಹಾಗೂ ಅದರ ಕೆಳಗೆ ಮೊಲಗಳನ್ನು ತುಂಬಾ ಆಕರ್ಷಕವಾಗಿ ಚಿತ್ರಿಸಿದ್ದರು.ಬೆಂಗಳೂರಿನ ಆರತಿ ಕುಲಕರ್ಣಿ ಅವರು, ಹೆಣ್ಣಿನ ಮೇಲಿನ ಸಮಾಜದ ಕೆಂಗಣ್ಣು ಹೇಗಿದೆ ಎಂಬುದರ ಕುರಿತು ಕೇವಲ ಪೆನ್ಸಿಲ್‌ ಬಳಸಿ ಎರಡು ಚಿತ್ರಕಲಾಕೃತಿ ಸಿದ್ಧಪಡಿಸಿದ್ದರು. ಕೂದಲುಗಳ ಮಧ್ಯೆ ಮಹಿಳೆಯ ಮುಖ ಮುಚ್ಚಿಕೊಂಡಿದ್ದ ಚಿತ್ರ ರಚಿಸಿದ್ದರು. ಗಾಳಿಗೆ ಕೂದಲು ಹಾರುತ್ತವೆ ಎನ್ನುವ ಸಹಜತೆ ಆ ಕಲಾಕೃತಿಗಳಲ್ಲಿತ್ತು.ಗದಗ ಜಿಲ್ಲೆಯ ಪ್ರೇಮಾ ಹಿರೇಮಠ, ಬೆಂಗಳೂರಿನ ಮೃದಲ ಚಂದ್ರಾ, ತುಮಕೂರಿನ ರೇಣುಕಾ ಕೆಸರಮಡು, ಉಡುಪಿಯ ಸುಲೋಚನಾ ವೇಣುಗೋಪಾಲ ಸೇರಿದಂತೆ ವಿವಿಧ ರಾಜ್ಯಗಳ ಕಲಾವಿದರು ಬಗೆಬಗೆಯ ಚಿತ್ರಗಳನ್ನು ಬಿಡಿಸಿದ್ದರು. ಒಂದಕ್ಕಿಂತ ಒಂದು ವಿಭಿನ್ನವಾಗಿದ್ದ ಚಿತ್ರಕಲಾಕೃತಿ ಗಳು ಮನಸೆಳೆದವು. ಕಲಾ ಶಿಬಿರದ ಸಮಾರೋಪ ಸಮಾರಂಭವು ಬುಧವಾರ ಸಂಜೆ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry