ಗುರುವಾರ , ಅಕ್ಟೋಬರ್ 17, 2019
24 °C

ಗರಂ ಮಸಾಲ!

Published:
Updated:

ಯಾರು ಯಾರನ್ನು ಸಹಿಸಿಕೊಳ್ಳುವುದು ಎಂಬ ಪ್ರಶ್ನೆ ಎದ್ದಿತ್ತು ಅಲ್ಲಿ. `ನಿರ್ದೇಶಕ ಎಂ.ಎಸ್.ರಮೇಶ್ ಅವರು ಸಂಗೀತ ನಿರ್ದೇಶಕ ಗುರುಕಿರಣ್ ಅವರನ್ನು ಸಹಿಸಿಕೊಂಡರೋ ಅಥವಾ ಇವರೇ ಅವರನ್ನು ಸಹಿಸಿಕೊಂಡರೋ~ ಎಂಬ ಜಿಜ್ಞಾಸೆ ಕಾಡಿದ್ದು ಗೀತರಚನೆಕಾರ ಕವಿರಾಜ್ ಅವರಿಗೆ.ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಿದ್ದು ನಿರ್ಮಾಪಕ ಯೋಗೀಶ್ ಹುಣಸೂರು. `ಯಾರು ಯಾರನ್ನು ಸಹಿಸಿಕೊಂಡರೋ ಗೊತ್ತಿಲ್ಲ, ಇಬ್ಬರನ್ನೂ ನಾನು ಸಹಿಸಿಕೊಂಡಿದ್ದೇನೆ~ ಎಂದರು.ನಿರ್ಮಾಪಕರಾಗಿ ಅದು ಅವರ ಕರ್ತವ್ಯ ಕೂಡ! ಹೀಗೆ ಸಹಿಸಿಕೊಳ್ಳುವಿಕೆ ಸಾಧ್ಯವಾಗದೇ ಇದ್ದರೆ ಯೋಗೀಶ್ `ವಿಲನ್~ ಚಿತ್ರ ಧ್ವನಿ ಸುರಳಿ ಬಿಡುಗಡೆ ಸಮಾರಂಭದವರೆಗೂ ತಲುಪುತ್ತಿರಲಿಲ್ಲವೇನೊ. ಗುರುಕಿರಣ್ ಅವರಿಗೆ ಒಂದೇ ವಾರದಲ್ಲಿ ತಮ್ಮ ನಿರ್ದೇಶನದ ಎರಡು ಚಿತ್ರಗಳ ಧ್ವನಿ ಸುರುಳಿ ಬಿಡುಗಡೆಯಾದ ಸಂಭ್ರಮ. ಎಂ.ಎಸ್.ರಮೇಶ್ ನಿರ್ದೇಶನ ಆರಂಭಿಸಿದ ದಿನದಿಂದಲೂ ಈ ಜೋಡಿ ಅಗಲಿಲ್ಲವಂತೆ. ನಿರಂತರ ಹತ್ತು ಚಿತ್ರಗಳವರೆಗೆ ಇವರಿಬ್ಬರ ಜುಗಲ್‌ಬಂದಿ ಸಾಗಿ ಬಂದಿದೆ.`ಚಿತ್ರದಲ್ಲಿ ನಾನು ಅಂಡರ್‌ವರ್ಲ್ಡ್ ಡಾನ್. ಆದರೂ ಗನ್ನು ಲಾಂಗು ಹಿಡಿದಿಲ್ಲ~ ಎಂದು ನಟ ಆದಿತ್ಯ ತಮ್ಮ ಪಾತ್ರವನ್ನು ಬಣ್ಣಿಸಿದರು. ರಮೇಶ್, ಹುಣಸೂರು, ಗುರುಕಿರಣ್ ಅವರನ್ನು ಚಿತ್ರದ ಆಧಾರ ಸ್ತಂಭಗಳೆಂದು ಹೇಳಿದ ಆದಿತ್ಯ, ನಟಿ ರಾಗಿಣಿ ಸಿನಿಮಾದಲ್ಲಿ ಮಂಡ್ಯ ಬೆಣ್ಣೆಯಂತೆ ಮುದ್ದಾಗಿ ಕಾಣಿಸುತ್ತಾರೆ ಎಂದು ಹೊಗಳಿದರು.ರಾಗಿಣಿ ಚಿತ್ರದಲ್ಲಿ ರೇಡಿಯೊ ಜಾಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. `ಹಿರಿಯ, ಯುವ, ಅನುಭವಿ ನಿರ್ಮಾಪಕರ ಜತೆ ಕೆಲಸ ಮಾಡಿದ್ದೇನೆ. ಯೋಗೀಶ್ ಅವರಷ್ಟು ಸಹಕರಿಸಿದ, ಚಿತ್ರದಲ್ಲಿ ತನ್ಮಯರಾಗಿ ಇರುತ್ತಿದ್ದ ನಿರ್ಮಾಪಕರನ್ನು ಕಂಡಿಲ್ಲ~ ಎನ್ನುವುದು ಅವರ ಅನುಭವ. ಅವರ ಪ್ರಕಾರ `ವಿಲನ್~ನ ಎರಡು ಹಾಡುಗಳು ಹಿಟ್ ಆಗುತ್ತವಂತೆ, ಅದರಲ್ಲೂ `ಗರಂ ಮಸಾಲ~ ಗೀತೆ ಸೂಪರ್ ಹಿಟ್ ಆಗುತ್ತದಂತೆ.ಹೈಹೀಲ್ಡ್ ತೊಟ್ಟರೆ ಹತ್ತಿರ ಹತ್ತಿರ ಆರಡಿ ಮುಟ್ಟುವ ರಾಗಿಣಿ, `ಸುದೀಪ್, ಉಪೇಂದ್ರ ನಂತರ `ಎತ್ತರದ~ ನಟ ಆದಿತ್ಯ ಅವರೊಂದಿಗೆ ನಟಿಸುತ್ತಿದ್ದೇನೆ~ ಎಂದು ಪಟ್ಟಿ ನೀಡಿದರು. `ಚಿತ್ರದಲ್ಲಿ ಇಬ್ಬರ ಕೆಮಿಸ್ಟ್ರಿಯೂ ಫಲಿಸಿದೆ. ಪ್ರೇಕ್ಷಕರಿಗೆ  ಈ ಜೋಡಿ ಇಷ್ಟವಾಗಲಿದೆ~ ಎಂದರು.ಎಂದಿನಂತೆ ಮುಗುಮ್ಮಾಗಿ ಮಾತನಾಡಿದವರು ನಿರ್ದೇಶಕ ಎಂ.ಎಸ್.ರಮೇಶ್. `ವಿಲನ್~ ಜನವರಿಯಲ್ಲಿ ಬೆಳ್ಳಿತೆರೆಗೆ ಬರಲಿದ್ದಾನೆ ಎಂದು ಮಾಹಿತಿ ನೀಡಿದರು. ಎಲ್ಲರೂ ಸಂಭ್ರಮದಲ್ಲಿದ್ದರೆ ಅವರು ಮಾತ್ರ `ಕಂಠೀರವ ಸ್ಟುಡಿಯೋದಲ್ಲಿ ಚಿತ್ರಗಳು ತಯಾರಾಗಬೇಕು~ ಎಂದು ಗಂಭೀರ ಚಿಂತನೆ ಹರಿಯಬಿಟ್ಟರು.ಇದಕ್ಕೆ ಸನಿಹದಲ್ಲಿ ಕಂಠೀರವ ಸ್ಟುಡಿಯೋದ ಅಧ್ಯಕ್ಷ ರುದ್ರೇಶ್ ಕುಳಿತದ್ದು ಮಾತ್ರವೇ ಕಾರಣವಾಗಿರಲಿಲ್ಲ; ಸ್ಟುಡಿಯೋವನ್ನು ಉಳಿಸಿ ಬೆಳೆಸಬೇಕು ಎಂಬ ಕಾಳಜಿಯೂ ಸೇರಿಕೊಂಡಿತ್ತು. `ಈಗಾಗಲೇ ರುದ್ರೇಶ್ ಅವರು ಸರ್ಕಾರದಿಂದ ಅಗತ್ಯ ಸೌಲಭ್ಯಗಳನ್ನು ಕೇಳಿದ್ದಾರೆ. ಅನೇಕ ಸುಧಾರಣೆಗಳು ಕಂಡು ಬಂದಿವೆ~ ಎಂದೂ ಸೇರಿಸಿದರು.ಚಿತ್ರಕ್ಕೆ ಹಣ ಒದಗಿಸಿದ ಕೆ.ವಿ.ನಾಗೇಶ್‌ಕುಮಾರ್ ಅವರನ್ನು ಎಡಬಿಡದೆ ಸ್ಮರಿಸಿದರು ನಿರ್ಮಾಪಕ ಯೋಗಿಶ್. ಹಣ ಪಡೆಯುವ ಪ್ರಕ್ರಿಯೆ ಕುರಿತು ಸಾಕಷ್ಟು ಜೋಕುಗಳನ್ನೂ ಕತ್ತರಿಸಿದರು.ಈ ಮಾತುಗಳ ಮಧ್ಯೆ ನಾಗೇಶ್ ಅವರಿಗೆ ನಗುವ ಕೆಲಸ. ಆನಂದ್ ಆಡಿಯೊದ ಶ್ಯಾಂ ಚಿತ್ರದ ಕುರಿತು ಎರಡು ಮಾತುಗಳನ್ನಾಡಿದರು. ಹೆಚ್ಚು ಮಾತನಾಡಿದ್ದಕ್ಕೆ ಕವಿರಾಜ್ ಅವರಿಂದ ಶ್ಯಾಂಗೆ ಧನ್ಯವಾದಗಳ ಮಹಾಪೂರವೇ ಹರಿಯಿತು. 

 

 

Post Comments (+)