ಗರಂ ಮಿತ್ರ, ನರಂ ಪ್ರಾಣೇಶ, ಗರ್ಮಾಗರಂ ಹಾಸ್ಯ!

7

ಗರಂ ಮಿತ್ರ, ನರಂ ಪ್ರಾಣೇಶ, ಗರ್ಮಾಗರಂ ಹಾಸ್ಯ!

Published:
Updated:

ಬೆಂಗಳೂರು: ‘ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಬೆಳಿಗ್ಗೆ ಸೂರ್ಯ ಹುಟ್ಟುವುದೇ ಲೇಟು’ ಎನ್ನುವ ಮಾತು ಸುಳ್ಳಾಯಿತು. ಬೆಳಿಗ್ಗೆ ಒಂಬತ್ತೂವರೆಗೆಲ್ಲ ಸಾಹಿತ್ಯ ಸಮ್ಮೇಳನದ ಸಭಾಂಗಣ ಭರ್ತಿಯಾಗಿತ್ತು. ಸಾವಿರಾರು ಕನ್ನಡಾಭಿಮಾನಿಗಳು ಅಲ್ಲಿ ಕಿಕ್ಕಿರಿದು ಸೇರಿದ್ದರು. ಅದಕ್ಕೆ ಕಾರಣ- ಸಮ್ಮೇಳನದ ಪ್ರಧಾನ ಸಭಾಂಗಣದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ‘ಹಾಸ್ಯ ಸಂವೇದನೆ’ ಗೋಷ್ಠಿ.ನಕ್ಕು ಹಗುರಾಗಬೇಕೆಂದು ಬೆಳ್ಳಂಬೆಳಿಗ್ಗೆಯೇ ಮನೆಯಿಂದ ಹೊರಟಿದ್ದ ಜನರ ನಿರೀಕ್ಷೆ ಸುಳ್ಳಾಗಲಿಲ್ಲ. ವೇದಿಕೆಯಲ್ಲಿ ಆಸೀನರಾಗಿದ್ದ ಹಾಸ್ಯ ಸಾಹಿತಿಗಳಾದ ಅ.ರಾ.ಮಿತ್ರ, ಡಾ.ಎಂ.ಕೃಷ್ಣೇಗೌಡ, ಗಂಗಾವತಿ ಪ್ರಾಣೇಶ್, ಭುವನೇಶ್ವರಿ ಹೆಗಡೆ ಮತ್ತು ಡಾ.ಕಬ್ಬಿನಾಲೆ ವಸನ್ತ ಭಾರದ್ವಾಜ್ ಮಾತುಗಳನ್ನು ಕೇಳಿ ಜನ ಮನದಣಿಯೆ ನಕ್ಕರು. ಕೆಲವು ಹಾಸ್ಯಪ್ರಸಂಗಗಳು ಜನರನ್ನು ಚಿಂತನೆಗೂ ಹಚ್ಚಿದವು. ಅದರಲ್ಲೂ ಕನ್ನಡದ ಸದ್ಯದ ಅತ್ಯಂತ ಜನಪ್ರಿಯ ಹಾಸ್ಯಸಾಹಿತಿ ‘ಬೀಚಿ ಶಿಷ್ಯ’ ಗಂಗಾವತಿ ಪ್ರಾಣೇಶರ ಮಾತುಗಳಿಗೆ ಜನ ಬಿದ್ದು ಬಿದ್ದು ನಕ್ಕರು.ಪ್ರಾಣೇಶ ಅವರಿಗೆ ಸಂಘಟಕರು ಕೊಟ್ಟ ವಿಷಯ- ಜೀವನದಲ್ಲಿ ಹಾಸ್ಯ. ಆ ವಿಷಯ ಕೊಟ್ಟ ಸಂಘಟಕರನ್ನೇ ಪ್ರಾಣೇಶ ಲಘುವಾಗಿ ಛೇಡಿಸಿದರು. ‘ಯಾರಿಗೆ ಯಾವ ವಿಷಯ ಮಾತನಾಡಲು ಕೊಡಬೇಕೆಂದು ಬೆಂಗಳೂರಿನವರಿಗೆ ಚೆನ್ನಾಗಿ ಗೊತ್ತಿದೆ. ಭುವನೇಶ್ವರಿಯವರಿಗೆ ವೃತ್ತಿಯಲ್ಲಿ ಹಾಸ್ಯ, ಭಾರದ್ವಾಜ್‌ರಿಗೆ ಸಾಹಿತ್ಯದಲ್ಲಿ ಹಾಸ್ಯದ ಬಗ್ಗೆ ಮಾತನಾಡಲು ಸೂಚಿಸಿದ್ದಾರೆ. ಅದೇ ಉತ್ತರ ಕರ್ನಾಟಕದ ನನಗೆ ಜೀವನದಲ್ಲಿ ಹಾಸ್ಯ ಎಂಬ ವಿಷಯ ಕೊಟ್ಟಿದ್ದಾರೆ. ನಮ ಉತ್ತರ ಕರ್ನಾಟಕದವರ ಜೀವನವೇ ಹಾಸ್ಯವಾಗಿದೆ ಎನ್ನುವುದು ಬೆಂಗಳೂರಿನವರಿಗೆ ಚೆನ್ನಾಗಿ ಗೊತ್ತಿದೆ’ ಎಂದು ಪ್ರಾಣೇಶ ಮೊದಲ ಪಂಚ್ ನೀಡಿದರು.ಉತ್ತರ ಕರ್ನಾಟಕದ ‘ನರಂ’ ಜೋಳದ ರೊಟ್ಟಿಯಂತೆ ಪ್ರಾಣೇಶ ಅವರ ಮಾತುಗಳು  ಖಡಕ್ಕಾಗಿ ಗುರಿ ಮುಟ್ಟಿದವು. ಆದರೆ ಸಭೆಯ ಆರಂಭದಲ್ಲೇ ಆಶಯ ಭಾಷಣ ಮಾಡಲು ಎದ್ದ ಅ.ರಾ.ಮಿತ್ರ, ಪೊಲೀಸರ ಮೇಲೆ ‘ಗರಂ’ ಆಗಿದ್ದರು. ‘ಸಭೆಯ ಒಳಗೆ ಬರಲು ನಮ್ಮನ್ನು ಪೊಲೀಸರು ಬಿಡಲಿಲ್ಲ. ಪ್ರವೇಶದ್ವಾರದಲ್ಲಿ ಕಾರ್ಯಕರ್ತರೇ ಇರಲಿಲ್ಲ. ಇಲ್ಲಿ ಬಹಳ ಅವ್ಯವಸ್ಥೆ ಇದೆ. ಇದಕ್ಕೆ ಯಾರೂ ಏನೂ ಮಾಡಲಾಗದು. ಇದಕ್ಕೇನು ಕಾರಣ ಎಂದು ಸಿದ್ಧರಾಮಯ್ಯನವರನ್ನೇ ಕೇಳಿದರೆ ಅವರು ಯಡಿಯೂರಪ್ಪ ರಾಜೀನಾಮೆ ಕೊಟ್ಟರೆ ಎಲ್ಲ ಸರಿಯಾಗುತ್ತದೆ ಎಂದಾರು. ಹಾಗೇ ಇದೆ ಇಲ್ಲಿನ ಪರಿಸ್ಥಿತಿ’ ಎಂದು ಮಿತ್ರ ಸಿಟ್ಟಿನಿಂದಲೇ ನುಡಿದಾಗ, ಜನ ಗೊಳ್ಳೆಂದು ನಕ್ಕರು.‘ಹಾಸ್ಯ ಸಾಹಿತಿಗೆ ಮಾತು ಮುಖ್ಯವಲ್ಲ. ಮಾತಿನಲ್ಲಿ ಸ್ವರ, ಲಯ ಇರಬೇಕು. ಕೇಳುಗರಿಗೆ ಆಸಕ್ತಿ ಮೂಡಿಸುವಂತಿರಬೇಕು. ವಾಗ್‌ವಿಜೃಂಭಣೆ, ಕೊರೆತದ ಅದ್ಭುತ ಸಿದ್ಧಿ ಇದ್ದರಷ್ಟೇ ಸಾಲದು’ ಎಂದು ನುಡಿದ ಅ.ರಾ. ಮಿತ್ರ, ಹಾಸ್ಯ ಕಲಾವಿದ, ಹಾಸ್ಯಗಾರ ಮತ್ತು ಹಾಸ್ಯ ಸಾಹಿತಿ ಹೇಗೆ ಬೇರೆ ಎಂಬುದನ್ನು ವಿವರಿಸಿದರು.‘ಬರೀ ನಗೋದಷ್ಟಕ್ಕೆ ನಿಮ್ಮ ಬದುಕು ಸೀಮಿತವಾಗುವುದು ಬೇಡ. ಹಾಸ್ಯದ ಜತೆಗೆ ಜನರನ್ನು ಚಿಂತನೆಗೆ ಹಚ್ಚುವಂತಹ ಹಾಸ್ಯ ಸಾಹಿತಿಗಳಾಗಿ’ ಎಂದು ಕಿರಿಯರಿಗೆ ಕಿವಿಮಾತು ಹೇಳಿದರು.ಸಭೆಯಲ್ಲಿ ಉತ್ತರ ಕರ್ನಾಟಕದ ಭಾಷೆಯೇ ಹೆಚ್ಚು ವಿಜೃಂಭಿಸಿತು. ಅಧ್ಯಕ್ಷತೆ ವಹಿಸಿದ್ದ ಕೃಷ್ಣೇಗೌಡರೂ ಅದನ್ನು ಗುರುತಿಸಿ ಮಂಡ್ಯ ಭಾಷೆಯ ಜತೆಗೆ ಹುಬ್ಬಳ್ಳಿಯ ಜೋಕುಗಳನ್ನೂ ಸಿಡಿಸಿದರು. ಆದರೆ ನಿರೀಕ್ಷೆಯಂತೆ ಹೆಚ್ಚು ಚಪ್ಪಾಳೆಗಳು ಬಿದ್ದದ್ದು ಗಂಗಾವತಿ ಪ್ರಾಣೇಶರಿಗೆ.ತೀರದ ಆಸೆ...

‘ಪ್ರಾಧ್ಯಾಪಕರೊಬ್ಬರು ಪ್ರತಿ ವರ್ಷವೂ ವಿದ್ಯಾರ್ಥಿನಿಯರನ್ನು ಗೋವಾ ಕಡಲ ತೀರದ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದರಂತೆ. ಅದಕ್ಕೆ ಕಾರಣವೇನೆಂದು ಕೇಳಿದಾಗ ಬೀಚಿಯವರು ಒಂದೇ ಮಾತಿನಲ್ಲಿ ಉತ್ತರಿಸಿದ್ದು- ಅಧ್ಯಾಪಕರ ತೀರದ ಆಸೆ’ ಎಂದು ಪ್ರಾಣೇಶ ಹೇಳಿದಾಗ ಜನ ಹೋ ಎಂದು ನಕ್ಕರು. ‘ಈಗ ಟಿ.ವಿಗಳು ಬಂದ ಮೇಲೆ ನಮಗೆಲ್ಲ ವ್ಯಾಪಕ ಪ್ರಚಾರ ಸಿಗುತ್ತಿದೆ. ಹಿಂದೆ ಬೀಚಿಯವರ ಕಾಲದಲ್ಲಿ ಟಿ.ವಿ ಗಳು ಇರಲಿಲ್ಲ; ಇದ್ದದ್ದೊಂದೇ ರೇಡಿಯೊ’ ಎಂದ ಪ್ರಾಣೇಶ, ತಮ್ಮ ಕೀರ್ತಿಗೆ ಕಾರಣ ಗುರುಗಳಾದ ಬೀಚಿ ಎಂದು ಸ್ಮರಿಸಿದರು. ‘ಆದರೆ ಟಿ.ವಿ ಗಳು ಬಂದ ಮೇಲೆ ಪುಸ್ತಕ ಓದುವವರು ಕಣ್ಮರೆಯಾಗಿದ್ದಾರೆ. ಕೋಟಿ ರೂಪಾಯಿಗಳ ಪುಸ್ತಕ ಮಾರಾಟವಾಗುತ್ತದೆ ಎಂದು ಪತ್ರಿಕೆಗಳು ಬರೆಯುತ್ತಿವೆ. ಆದರೆ ಎಷ್ಟು ಮಂದಿ ಪುಸ್ತಕಗಳನ್ನು ಓದುತ್ತಾರೆ ಎಂಬ ಬಗ್ಗೆ ಬರೆಯುವುದೇ ಇಲ್ಲ’ ಎಂದರು.‘ಬೆಂಗಳೂರಿನ ಜನ ಹಾಸ್ಯ ಸಮ್ಮೇಳನಗಳಿಗೆ ಕರೀತಾರೆ, ಆದರೆ ನಗಂಗಿಲ್ರೀ. ರೊಕ್ಕ ಮಾತ್ರ ಕೈ ತುಂಬ ಕೊಡ್ತಾರೆ. ಅದೇ ಉತ್ತರ ಕರ್ನಾಟಕದ ಜನ ಉಳ್ಳಾಡಿ ನಕ್ತಾರೆ. ಆದರೆ ರೊಕ್ಕ ಕೊಡಂಗಿಲ್ರೀ. ಅದಕ್ಕೇ ನಾನು ಇತ್ತೀಚೆಗೆ ಬೆಂಗಳೂರಿಗೇ ಅಂಟಿಕೊಂಡಿದ್ದೇನೆ’ ಎಂದು ಪ್ರಾಣೇಶ ಹೇಳಿದಾಗ, ಸಭೆಯಲ್ಲಿ ನೆರೆದಿದ್ದ ಉತ್ತರ- ದಕ್ಷಿಣದ ಜನರೆಲ್ಲ ಹೊಟ್ಟೆ ಹಿಡಿದು ನಕ್ಕರು.ಕೃಷ್ಣೇಗೌಡರು ಅತ್ತೆ-ಸೊಸೆಯರ ಪರೋಕ್ಷ ಜಗಳದ ಕುರಿತು ಮಂಡ್ಯದ ಭಾಷೆಯಲ್ಲಿ ಸಿಡಿಸಿದ ಜೋಕು ಕ್ಲಿಕ್ಕಾಯಿತು. ‘ಕುವೆಂಪು ಯಾವಾಗ ಹುಟ್ಟಿದರು’ ಎಂದು ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಿದಾಗ, ‘ನಾವು ಹುಟ್ಟೋದಕ್ಕಿಂತ ಮುಂಚೆ ಹುಟ್ಟಿದರು’ ಎಂಬ ಉತ್ತರ ಬಂದದ್ದನ್ನು ಕೃಷ್ಣೇಗೌಡ ಪ್ರಸ್ತಾಪಿಸಿದರು. ‘ಒಂದೇ ಅಂಕದ ಪ್ರಶ್ನೆಯದು. ಉತ್ತರಕ್ಕೆ ಮಾರ್ಕ್ ಕೊಡದಿದ್ದರೆ ವಿದ್ಯಾರ್ಥಿಗಳು ಕೋರ್ಟಿಗೆ ಹೋಗ್ತಾರೆ. ಮುಖ್ಯ ನಾನು ಕೇಳಿದ ಪ್ರಶ್ನೆಯೇ ಸರಿ ಇರಲಿಲ್ಲ’ ಎಂದು ಅವರು ಹಾಸ್ಯಮಯವಾಗಿ ಹೇಳಿದರು.‘ಸಾಹಿತ್ಯ ಸಮ್ಮೇಳನದಲ್ಲಿ ಇವತ್ತು ಹಾಸ್ಯ ಗದ್ದುಗೆಗೆ ಬಂದಿದೆ. ಇದು ನಿಜಕ್ಕೂ ಚರಿತ್ರಾರ್ಹ ಸಮ್ಮೇಳನ. ಆದರೆ ಇತ್ತೀಚೆಗೆ ಅದ್ಯಾಕೋ ಹಾಸ್ಯಕ್ಕೆ ರಾಜಕಾರಣಿಗಳು ಗಂಭೀರ ಪ್ರತಿಕ್ರಿಯೆ ನೀಡಲು ತೊಡಗಿದ್ದಾರೆ. ಎಸ್.ಎಂ.ಕೃಷ್ಣರ ಕಾಲದಲ್ಲಿ ಅವರನ್ನು ಎದುರಿಗೇ ಹಾಸ್ಯ ಮಾಡಿದರೂ ದೊಡ್ಡದಾಗಿ ನಗುತ್ತಿದ್ದರು. ಪಾಶ್ಚಿಮಾತ್ಯರಂತೆ ನಮ್ಮ  ರಾಜಕಾರಣಿಗಳೂ ತಮ್ಮನ್ನು ಹಾಸ್ಯ ಮಾಡಿದಾಗ ಅದನ್ನು ಆಸ್ವಾದಿಸಲು ಕಲಿಯಬೇಕು. ಅವರು ಪ್ರತಿಕ್ರಿಯೆ ನೀಡದೆ ಸುಮನಿದ್ದರೆ ಹಾಸ್ಯ ಬೆಳೆ ಯುತ್ತದೆ’ ಎಂದು ಕೃಷ್ಣೇಗೌಡರು ಹೇಳಿದಾಗ ಸಭೆಯಲ್ಲಿ ಚಪ್ಪಾಳೆ ಕೇಳಿಬಂತು.ಆಶಯ ಭಾಷಣ ಮಾಡಿದ ಅ.ರಾ.ಮಿತ್ರರ ಕಟ್ಟಪ್ಪಣೆಯ ಹಿನ್ನೆಲೆಯಲ್ಲಿ ಎಲ್ಲ ಭಾಷಣಕಾರರೂ ಸಮಯದ ಮಿತಿಯನ್ನು ಪರಿಪಾಲಿಸಿದರು. ‘ಹಿರಿಯರಾದ ಮಿತ್ರರು ವೇದಿಕೆಯಲ್ಲಿ ಇದ್ದರೆ ಸಮಯದ ಅತಿಕ್ರಮಣ ಆಗುವುದಿಲ್ಲ. ಭೂಮಿಯನ್ನು ಅತಿಕ್ರಮಣ ಮಾಡಿದರೆ ರಾಜಕೀಯದವರು ಆ ಬಳಿಕ ಅದನ್ನು ಅಕ್ರಮ ಸಕ್ರಮ ಮಾಡುತ್ತಾರೆ. ನಮ್ಮಲ್ಲಿ ಹಾಗಿಲ್ಲ’ ಎಂದೂ ಕೃಷ್ಣೇಗೌಡ ರಾಜಕಾರಣಿಗಳ ಕಾಲೆಳೆದರು. ಭುವನೇಶ್ವರಿ ಹೆಗಡೆಯವರು ಸಮ್ಮೇಳ ನದ ಸಭಾಂಗಣದ ಒಳಗೆ ಬರುವಾಗ ಪೊಲೀಸರ ಕಾಟ ಇರಬಹುದೆಂದು ಮೊದಲೇ ಊಹಿಸಿದ್ದರಂತೆ. ‘ಯಾರು ನೀವು ಎಂದು ಪೊಲೀಸರು ಕೇಳಿದರೆ ನಾವು ಭುವನೇಶ್ವರಿ ಎನ್ನಬೇಕು.ಮುಖ್ಯಮಂತ್ರಿಗಳು ನಿಮ್ಮ ಪ್ರತಿಮೆ ಸ್ಥಾಪಿಸುವುದಾಗಿ ಮೊನ್ನೆಯೇ ಹೇಳಿದ್ದಾರೆ. ಪ್ರತಿಮೆ ಸ್ಥಾಪನೆಯಾದ ಬಳಿಕ ಬನ್ನಿ ಎಂದು ಪೊಲೀಸರು ಹೇಳುತ್ತಾರೆ ಎಂದುಕೊಂಡಿದ್ದೆ. ಆದರೆ ಹಾಸ್ಯ ಸಾಹಿತಿಗಳಿಗೆ ಭಯ ಎಂಬುದಿಲ್ಲ. ಒಳಗೆ ಬಿಡದಿದ್ದರೂ ಧೈರ್ಯವಾಗಿ ಬಂದೆ’ ಎಂದು ಅವರು ಹೇಳಿದಾಗ ಜನ ಅರ್ಥವಾದವರಂತೆ ತಲೆದೂಗಿದರು. ಪಂಪ, ರನ್ನನ ಕಾಲದಿಂದಲೂ ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಬಂದಿರುವುದನ್ನು ಗುರುತಿಸಿದ ಕಬ್ಬಿನಾಲೆ ವಸನ್ತ ಭಾರದ್ವಾಜ್, ‘ರೋಮದ ರಾಜರು, ಮಲಬಾರದ ಮಂತ್ರಿಗಳು, ಅಶ್ವಾಮಿತ್ರ (ಜಟಕಾ ಸಾಬಿ) ಬಿಕನಾಸಿ (ಬಿಕನಿ ಹಾಕಿದವಳ ಆಸೆ), ಬೀರ-ಬಲ್ಲ, ಬೋರ್ನ್ ವಿಟಾ (ಹುಟ್ಟಿದಾಗಲೇ ವಿಟ!) ಮುಂತಾದ ಕೈಲಾಸಂ, ಕಸ್ತೂರಿಯವರ ಫನ್-ಡಿತ್ಯವನ್ನು ಆಡಿ ತೋರಿಸಿ ಚಪ್ಪಾಳೆ ಗಿಟ್ಟಿಸಿದರು.‘ಪ್ರತಿ ಭಾಷಣಕಾರರಿಗೂ ಹದಿನೈದೇ ನಿಮಿಷ’ ಎಂದು ಅ.ರಾ.ಮಿತ್ರ ಘೋಷಿಸಿದಾಗ ಜನರಿಂದ ‘ಹೋ.. ನೋ’ ಎಂಬ ಕೂಗು ಕೇಳಿಬಂತು. ಪ್ರಾಣೇಶ ಅವರೂ ಸಮಯದೊಳಗೆ ಮಾತು ಮುಗಿಸಲು ಹೊರಟಾಗ ಜನ ‘ಇನ್ನೂ ಬೇಕು’ ಎಂದು ಕೂಗಿದರು. ‘ಇನ್ನೂ ಮಾತು ಕೇಳಲು ಮನಸ್ಸಿದ್ದರೆ ನಿಮ್ಮ ನಿಮ್ಮ ಊರಿಗೆ ನನ್ನನ್ನು ಕರೆಸ್ರೀ’ ಎಂದು ಪಂಚ್ ಇಟ್ಟೇ ಪ್ರಾಣೇಶ ಮಾತು ಮುಗಿಸಿದರು. ಮಡ್ಡೀಕೆರೆ ಗೋಪಾಲ್ ಸ್ವಾಗತಿಸಿ, ಎಚ್.ಚಂದ್ರಪ್ಪ ವಂದಿಸಿದರು. ಸುರೇಶ್ ಮತ್ತು ರಮಾದೇವಿ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry