ಬುಧವಾರ, ನವೆಂಬರ್ 20, 2019
22 °C

ಗರಿಗಳು ಪುಡಿ ಪುಡಿ...

Published:
Updated:

ತೋಟಗಳಲ್ಲಿ ಬೀಳುವ ತೆಂಗಿನ ಗರಿ, ಅಡಿಕೆ ಗರಿಗಳನ್ನು ಸಾಮಾನ್ಯವಾಗಿ ಉರುವಲಿಗೆ ಬಳಸುತ್ತಾರೆ ಅಥವಾ ತೋಟದಲ್ಲೇ ಸುಡುತ್ತಾರೆ. ಆದರೆ ಇವುಗಳ ಸದ್ಬಳಕೆ ಮಾಡಿಕೊಂಡರೆ ತೋಟಕ್ಕೆ ಉತ್ತಮ ಗೊಬ್ಬರವಾಗುತ್ತದೆ ಎಂದು ತೋರಿಸಿಕೊಟ್ಟಿದ್ದಾರೆ ಮೈಸೂರಿನ ಕಟ್ಟಿಗೇನಹಳ್ಳಿಯ ಮೂವರು ಯುವ ಪ್ರತಿಭೆಗಳು.ಇವುಗಳ ಸದ್ಬಳಕೆ ಕುರಿತು ಮೊದಲು ಯೋಚನೆ ಬಂದದ್ದು ಕೆ.ಬಿ.ಕ್ರಾಸ್ ಬಳಿಯ ಕಟ್ಟಿಗೇನಹಳ್ಳಿಯ ರೈತ ಕೈಲಾಸ್ ಅವರಿಗೆ. ಇವರ ಈ ಯೋಚನೆಗೆ ನೀರೆರೆದವರು ಮೆಕ್ಯಾನಿಕ್ ಡೇವಿಸ್ ಮತ್ತು ಎಂಜಿನಿಯರ್ ಪ್ರಕಾಶ್. ಈ ಮೂವರ ಪ್ರಯತ್ನದ ಫಲವಾಗಿ ಯಂತ್ರವೊಂದು ಸಿದ್ಧಗೊಂಡಿದೆ. ಈ ಯಂತ್ರವನ್ನು ಟ್ರ್ಯಾಕ್ಟರ್ ಎಂಜಿನ್‌ಗೆ ಜೋಡಿಸಿಕೊಂಡು ತೋಟದ ಯಾವುದೇ ಮೂಲೆಗೆ ಬೇಕಾದರೂ ತೆಗೆದುಕೊಂಡು ಹೋಗಬಹುದು. ತೆಂಗಿನ ಅಥವಾ ಅಡಿಕೆ ಗರಿಗಳನ್ನು ಪುಡಿ ಪುಡಿ ಮಾಡಬಹುದು. ಈ ಪುಡಿಗಳನ್ನು ಗೊಬ್ಬರವನ್ನಾಗಿ ಬಳಕೆ ಮಾಡಬಹುದು.ಈ ಯಂತ್ರಕ್ಕೆ ಇವರು ಬಳಸಿರುವುದು ಗುಜರಿಯಲ್ಲಿ ತಂದಿರುವ ವಸ್ತುಗಳನ್ನು. 7.5 ಹೆಚ್‌ಪಿಯ ನಾಲ್ಕು ಸಿಲಿಂಡರ್‌ನ ಹಳೆಯ ಜೀಪ್ ಎಂಜಿನ್ ಬಿಡಿ ಭಾಗ. ಇದಕ್ಕೆ ಅವರು ಖರ್ಚು ಮಾಡಿರುವುದು ಬರೋಬ್ಬರಿ ಒಂದು ಲಕ್ಷ ರೂಪಾಯಿಗಳು. ಯಂತ್ರವನ್ನು ಬೇರೆ ರೈತರಿಗೆ ಬಾಡಿಗೆಗೆ ಕೊಡುವ ಯೋಚನೆ ಕೂಡ ಕೈಲಾಸ್‌ಅವರಿಗಿದೆ. ಈಗಾಗಲೇ ತಮ್ಮ ತೋಟದಲ್ಲಿ ಪ್ರಾಯೋಗಿಕವಾಗಿ ತೆಂಗಿನ ಗರಿಗಳನ್ನು ಪುಡಿ ಪುಡಿ ಮಾಡಿ ಗೊಬ್ಬರ ಮಾಡುವಲ್ಲಿ ಕೈಲಾಸ್ ಯಶಸ್ವಿಯಾಗಿದ್ದಾರೆ. ಎಡೆಮಟ್ಟೆ ಒಳಗೊಂಡಂತೆ ಪೂರ್ತಿ ತೆಂಗಿನ ಗರಿಯನ್ನು ಕ್ಷಣ ಮಾತ್ರದಲ್ಲಿ ಪುಡಿ ಮಾಡುವ ಈ ಯಂತ್ರ ಡೀಸೆಲ್‌ನಿಂದ ಚಾಲನೆಯಾಗುತ್ತದೆ.ಇದರ ಬಳಕೆಗೆ ಒಂದು ಗಂಟೆಗೆ ಕೇವಲ ಎರಡು ನೂರು ರೂಪಾಯಿಗಳಷ್ಟು ಖರ್ಚು ತಗಲುತ್ತದೆ. ಎಡೆಮಟ್ಟೆ ಸಹಿತ ಪೂರ್ತಿ ತೆಂಗಿನ ಗರಿಯನ್ನು ಹತ್ತು ಸೆಕೆಂಡ್‌ಗೆ ಒಂದರಂತೆ ಪುಡಿ ಮಾಡುವ ಈ ಯಂತ್ರವು ಮಧ್ಯಮ ಮತ್ತು ಬೃಹತ್ ತೆಂಗು ಹಾಗೂ ಅಡಿಕೆ ಬೆಳೆಗಾರರಿಗೆ ವರದಾನ. ಮಾಹಿತಿಗೆ- 9449173663.

 

ಪ್ರತಿಕ್ರಿಯಿಸಿ (+)