ಸೋಮವಾರ, ಮೇ 23, 2022
30 °C
ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಬಜೆಟ್ * ಸಂಪನ್ಮೂಲ ಸಂಗ್ರಹವೇ ಸವಾಲು

ಗರಿಗೆದರಿದ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅನ್ನ ಭಾಗ್ಯ, ಶಾಲಾ ಮಕ್ಕಳಿಗೆ ಹಾಲು, ಸಾಲ ಮನ್ನಾ ಇತ್ಯಾದಿ ಜನಪ್ರಿಯ ಯೋಜನೆಗಳಿಗೆ ಸಂಪನ್ಮೂಲ ಕ್ರೋಡೀಕರಿಸಿಕೊಳ್ಳುವುದರ ಜೊತೆಗೆ, ಬಡವರ ಕಲ್ಯಾಣ, ಕೃಷಿ, ನೀರಾವರಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ, ನಗರಾಭಿವೃದ್ಧಿ ಸೇರಿದಂತೆ ಪ್ರಮುಖ ಕ್ಷೇತ್ರಗಳಿಗೆ ಹಣ ಹೊಂದಿಸುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲಾಗಿದೆ. ಈ ಸವಾಲನ್ನು ಅವರು ಹೇಗೆ ನಿಭಾಯಿಸಿದ್ದಾರೆ ಎನ್ನುವುದು ಶುಕ್ರವಾರ ಬಹಿರಂಗವಾಗಲಿದೆ.ಹಣಕಾಸು ಖಾತೆಯನ್ನೂ ಹೊಂದಿರುವ ಸಿದ್ದರಾಮಯ್ಯ ಶುಕ್ರವಾರ ಮಧ್ಯಾಹ್ನ 12.30ಕ್ಕೆ ವಿಧಾನಸಭೆಯಲ್ಲಿ 2013-14ನೇ ಸಾಲಿನ ಪರಿಷ್ಕೃತ ಬಜೆಟ್ ಮಂಡಿಸಲಿದ್ದಾರೆ. ಹಣಕಾಸು ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ ಹಿಂದೆ ಏಳು ಬಾರಿ ಬಜೆಟ್ ಮಂಡಿಸಿದ ಅನುಭವ ಅವರಿಗೆ ಇದೆ. ಆದರೆ, ಮುಖ್ಯಮಂತ್ರಿಯಾದ ನಂತರ ಮಂಡಿಸುತ್ತಿರುವ ಚೊಚ್ಚಲ ಬಜೆಟ್ ಇದಾಗಿದೆ.ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಅತಿ ಹೆಚ್ಚು ಬಡವರು (ಶೇ 23) ಇರುವ ಕಾರಣ, ಅವರ ಕಲ್ಯಾಣಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನವೇ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಿಸಿರುವುದರಿಂದ ಬಜೆಟ್‌ನಲ್ಲಿ ಪುನಃ ಅಂತಹ ಕಾರ್ಯಕ್ರಮಗಳು ಪುರಾವರ್ತನೆ ಅನುಮಾನ ಎನ್ನಲಾಗಿದೆ.ಸಾಮಾಜಿಕ ವಲಯ ಮತ್ತು ಅಭಿವೃದ್ಧಿಗೆ ಸಮಾನ ಆದ್ಯತೆ ನೀಡುವ ಸಮತೋಲನ ಬಜೆಟ್ ಮಂಡಿಸಲಿದ್ದಾರೆ. ತೆರಿಗೆ ಕ್ಷೇತ್ರದಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಘೋಷಿಸುವ ಮೂಲಕ ಸಂಪನ್ಮೂಲ ಸಂಗ್ರಹಕ್ಕೆ ಒತ್ತು ನೀಡಲಿದ್ದಾರೆ. ಇನ್ನಷ್ಟು ಕ್ಷೇತ್ರಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲಿದ್ದಾರೆ. ತೆರಿಗೆ ವಸೂಲಾತಿಯಲ್ಲಿ ಆಗುತ್ತಿರುವ ಸೋರಿಕೆ ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಗೊತ್ತಾಗಿದೆ.ಗ್ರಾಮೀಣ ಪ್ರದೇಶದಲ್ಲಿನ ಸರ್ಕಾರಿ ಭೂಮಿಯಲ್ಲಿ ಬಡವರು ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸುವ `ಅಕ್ರಮ - ಸಕ್ರಮ' ಯೋಜನೆಯಿಂದ  2,500 ಕೋಟಿ   ಸಂಪನ್ಮೂಲ ಸಂಗ್ರಹಣೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕ್ಷೇತ್ರದ ಉದ್ದಿಮೆಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಮೂಲಕ ಸಂಪನ್ಮೂಲ ಸಂಗ್ರಹಿಸಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ.ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಪ್ರಕಟಿಸಿದ ಹಾಗೆ ನೀರಾವರಿಗೆ ್ಙ10 ಸಾವಿರ ಕೋಟಿ ಅನುದಾನ ಒದಗಿಸುವ ಸೂಚನೆಗಳಿವೆ. ಮುಂದಿನ ಐದು ವರ್ಷಗಳಲ್ಲಿ 25 ಸಾವಿರ ಹೆಕ್ಟೇರ್ ಭೂಮಿಯನ್ನು ನೀರಾವರಿಗೆ ಒಳಪಡಿಸುವ ಕಾರ್ಯಕ್ರಮಕ್ಕೆ ಒತ್ತು ನೀಡಲಿದ್ದಾರೆ. ಸಹಕಾರ ಸಂಘಗಳ ಮೂಲಕ ಪ್ರಸ್ತುತ ರೈತರಿಗೆ ನೀಡುತ್ತಿರುವ ಬಡ್ಡಿ ರಹಿತ ಸಾಲವನ್ನು ಒಂದು ಲಕ್ಷದಿಂದ ಎರಡು ಲಕ್ಷಕ್ಕೆ ಏರಿಸಲಿದ್ದಾರೆ ಎಂದು ತಿಳಿದುಬಂದಿದೆ.ಯಶಸ್ವಿನಿ ಯೋಜನೆಯನ್ನು ನಗರ ಪ್ರದೇಶಕ್ಕೆ ವಿಸ್ತರಿಸುವುದು, ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳ ಖರೀದಿಗೆ ಕಾರ್ಯಕ್ರಮ ರೂಪಿಸುವುದು, ಭೂಸ್ವಾಧೀನ ಸಂದರ್ಭದಲ್ಲಿ ರೈತರಿಗೆ ನಷ್ಟ ಆಗದಂತೆ ನೋಡಿಕೊಳ್ಳುವುದು. ಅನಿವಾರ್ಯ ಸಂದರ್ಭದಲ್ಲಿ ಅಷ್ಟೇ ಕೃಷಿ ಭೂಮಿ ಸ್ವಾಧೀನ ಮಾಡಿಕೊಳ್ಳುವ ಸಂಬಂಧ ಕಾಯ್ದೆಯಲ್ಲಿ ಬದಲಾವಣೆಗಳನ್ನು ತರುವ ಸಾಧ್ಯತೆ ಇದೆ.ಕೈಗಾರಿಕೆಗಳನ್ನು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸುವ ಎಲ್ಲರಿಗೂ ಅನುಮತಿ ನೀಡುವ ಬದಲು, ಉದ್ಯೋಗ ಸೃಷ್ಟಿಯಾಗುವಂತಹ ಕೈಗಾರಿಕೆಗಳಿಗೆ ಮಾತ್ರ ಪರವಾನಗಿ ನೀಡಲಾಗುತ್ತದೆ. ಅಲ್ಲದೆ ಅಗತ್ಯ ಇದ್ದಷ್ಟೇ ಭೂಮಿ ನೀಡಲಾಗುತ್ತದೆ. ಈ ವಿಷಯದಲ್ಲಿ ಕಠಿಣ ನಿಲುವುಗಳನ್ನು ಪ್ರಕಟಿಸಲಿದ್ದಾರೆ.ಶಿಕ್ಷಣಕ್ಕೆ ಒತ್ತು: ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ. ಅವುಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಇಂಗ್ಲಿಷ್ ಕಲಿಕೆಗೂ ಒತ್ತು ನೀಡಲಾಗುತ್ತದೆ. ಗುಣಮಟ್ಟ ಶಿಕ್ಷಣ ನೀಡುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯುವ ಘೋಷಣೆ ಮಾಡುವ ಸಂಭವವಿದೆ.ಹಿಂದೆ ಬಿಜೆಪಿ ಸರ್ಕಾರ ಮಠಗಳಿಗೆ ನೀಡುತ್ತಿದ್ದ ಅನುದಾನವನ್ನು ಸಂಪೂರ್ಣವಾಗಿ ನಿಲ್ಲಿಸುವ ಸಾಧ್ಯತೆ ಇಲ್ಲ. ಉಚಿತವಾಗಿ ಶಾಲೆ, ಹಾಸ್ಟೆಲ್‌ಗಳನ್ನು ನಡೆಸುತ್ತಿರುವ ಸಂಸ್ಥೆಗಳು ಆರ್ಥಿಕ ನೆರವು ಬಯಸಿದರೆ ಅನುದಾನ ನೀಡಲಾಗುತ್ತದೆ. ನಂತರ ಉದ್ದೇಶಿತ ಕಾರ್ಯಕ್ಕೆ ಹಣ ಬಳಕೆ ಆಗಿರುವ ಬಗ್ಗೆ ಪರಿಶೀಲಿಸಲಾಗುತ್ತದೆ ಎನ್ನಲಾಗಿದೆ.ಶಾಲಾ ಮಕ್ಕಳಿಗೆ ಹಾಲು ನೀಡುವ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಯಾವ ವಯೋಮಾನದ ಮಕ್ಕಳಿಗೆ ಹಾಲು ನೀಡಲಾಗುತ್ತದೆ ಎಂಬುದನ್ನು ಬಜೆಟ್‌ನಲ್ಲಿ ಸ್ಪಷ್ಟವಾಗಲಿದೆ. ಪರಿಶಿಷ್ಟ ಜಾತಿ/ಪಂಗಡದವರಿಗೆ ಬಜೆಟ್‌ನಲ್ಲಿ ಮೀಸಲಾದ ಶೇ 22.75ರಷ್ಟು ಹಣವನ್ನು ಕಡ್ಡಾಯವಾಗಿ ವೆಚ್ಚ ಮಾಡುವ ಸಂಬಂಧ ಆಂಧ್ರಪ್ರದೇಶದ ಮಾದರಿಯಲ್ಲಿ ಕಾಯ್ದೆ ಜಾರಿಗೊಳಿಸಲಾಗುತ್ತದೆ. ಅಲ್ಲದೆ ಈ ಹಣ ವೆಚ್ಚ ಮಾಡಲು ಮಹಾರಾಷ್ಟ್ರ ಮಾದರಿಯಲ್ಲಿ ಏಕಗವಾಕ್ಷಿ ಪದ್ಧತಿ ಜಾರಿಗೊಳಿಸಲಾಗುತ್ತದೆ. ಹಾಸ್ಟೆಲ್‌ಗಳ ನಿರ್ವಹಣೆಗೆ ಪ್ರಾಧಿಕಾರ ರಚನೆಯಾಗಲಿದೆ. ಹಾಸ್ಟೆಲ್‌ಗಳು ಇಲ್ಲದ ಕಡೆ ವಿದ್ಯಾರ್ಥಿಗಳಿಗೆ ನೇರವಾಗಿ ಊಟದ ವೆಚ್ಚವನ್ನು ನೀಡಲು ಉದ್ದೇಶಿಸಲಾಗಿದೆ.ನೋಂದಣಿ, ಮುದ್ರಾಂಕ ಶುಲ್ಕ

ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹದಲ್ಲಿ ಸೋರಿಕೆ ತಡೆಯಲು ಕೆಲವೊಂದು ಬದಲಾವಣೆಗಳನ್ನು ತರುವ ನಿರೀಕ್ಷೆ ಇದೆ.

ಹಿಂದಿನ ಸರ್ಕಾರ ಏಳು ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ತೆರೆಯುವುದಾಗಿ ಘೋಷಿಸಿತ್ತು. ಕಾಂಗ್ರೆಸ್ ಸರ್ಕಾರ ಅಷ್ಟೂ ಕಾಲೇಜುಗಳನ್ನು ಪ್ರಾರಂಭಿಸುವ ಸಾಧ್ಯತೆ ಇಲ್ಲ. ಈ ವರ್ಷ 3-4 ಕಾಲೇಜುಗಳನ್ನು ಪ್ರಕಟಿಸಲಿದ್ದು, ಪ್ರಣಾಳಿಕೆಯಲ್ಲಿ ಘೋಷಿಸಿದ ಹಾಗೆ ಹಂತ ಹಂತವಾಗಿ ಜಿಲ್ಲೆಗೊಂದು ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಕೆಲವು ಕಡೆ ಹೊಸದಾಗಿ ಕ್ಯಾನ್ಸರ್ ಹಾಗೂ ಡಯಾಲಿಸಿಸ್ ಕೇಂದ್ರಗಳನ್ನು ತೆರೆಯುವ ಸಾಧ್ಯತೆಗಳಿವೆ.ಅಲ್ಪಸಂಖ್ಯಾತರು, ಹಿಂದುಳಿದವರು, ಶೋಷಿತ ವರ್ಗಗಳ ಕಲ್ಯಾಣಕ್ಕೆ ಹೆಚ್ಚಿನ ಅನುದಾನ ನೀಡಲಾಗುತ್ತದೆ. ಬಡವರಿಗೆ ವಸತಿ, ಶಿಕ್ಷಣ, ಆರೋಗ್ಯ ಕಲ್ಪಿಸುವುದು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಉತ್ತಮ ರಸ್ತೆ ಸಂಪರ್ಕ ಕಲ್ಪಿಸುವುದಕ್ಕೆ ಆದ್ಯತೆ ದೊರೆಯಲಿದೆ.

ಕಳೆದ 5 ವರ್ಷಗಳಿಂದ ವಿದ್ಯುತ್ ಸಮಸ್ಯೆ ರಾಜ್ಯವನ್ನು ಕಾಡುತ್ತಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿದ್ಯುತ್ ಯೋಜನೆಗಳಿಗೂ ಒತ್ತು ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

8 ತಿಂಗಳಿಗೆ ಬಜೆಟ್

ಶುಕ್ರವಾರ ಮಂಡನೆಯಾಗಲಿರುವ ಬಜೆಟ್ ಅನುಷ್ಠಾನಕ್ಕೆ ಎಂಟು ತಿಂಗಳ ಸಮಯ ಇದೆ. ಆಗಸ್ಟ್ 1ರಿಂದ ಜಾರಿಗೆ ಬರುವ ಬಜೆಟ್, 2014ರ ಮಾರ್ಚ್ 31ರವರೆಗೆ ಅಸ್ತಿತ್ವದಲ್ಲಿರುತ್ತದೆ. ಜಗದೀಶ್ ಶೆಟ್ಟರ್ ಅವರು ಕಳೆದ ಫೆಬ್ರುವರಿಯಲ್ಲಿ 2013-14ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿ, ನಾಲ್ಕು ತಿಂಗಳ (ಜುಲೈವರೆಗೆ) ಲೇಖಾನುದಾನ ಪಡೆದುಕೊಂಡಿದ್ದರು. ಸರ್ಕಾರ ಬದಲಾದ ಕಾರಣ, ಸಿದ್ದರಾಮಯ್ಯ ಅವರು ಪರಿಷ್ಕೃತ ಬಜೆಟ್ ಮಂಡಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.