ಮಂಗಳವಾರ, ಏಪ್ರಿಲ್ 20, 2021
32 °C

ಗರಿಬಿಚ್ಚಿದ ತಿರಂಗಾ; ಸುರುಳಿಬಿಚ್ಚಿದ ನೆನಪುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಇಲ್ಲಿಯ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ಸ್ವಾತಂತ್ರ್ಯೋತ್ಸವದಲ್ಲಿ ಸಾವಿರಾರು ಜನರು ಭಾಗವಹಿಸಿ 66 ವರ್ಷಗಳ ಹಿಂದೆ ಬಂದ `ರಾಜಕೀಯ ಸ್ವಾತಂತ್ರ್ಯ~ದ ನೆನಪನ್ನು ಎರಡು ಗಂಟೆಗಳ ಕಾಲ ಮೆಲುಕು ಹಾಕಿದರು.ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರು ಸರಿಯಾಗಿ 9 ಗಂಟೆಗೆ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ನಂತರ ತಮ್ಮ ಸ್ವಾತಂತ್ರ್ಯ ದಿನದ ಸಂದೇಶ ನೀಡಿದ ಅವರು, `ನಿರಂತರ ಹೋರಾಟ ಹಾಗೂ ಬಲಿದಾನಗಳಿಂದ ಪಡೆದಿರುವ ದೇಶದ ಸ್ವಾತಂತ್ರ್ಯವನ್ನು ರಕ್ಷಿಸಿಕೊಂಡು ದೇಶದ ಅಭಿವೃದ್ಧಿಗೆ ಎಲ್ಲರೂ ಮುಂದಾಗಬೇಕು.

 

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವಿಭಜಿತ ಧಾರವಾಡ ಜಿಲ್ಲೆಯ ನರಗುಂದ ಬಾಬಾ ಸಾಹೇಬ, ಮೈಲಾರ ಮಹಾದೇವಪ್ಪ, ಅಂದಾನಪ್ಪ ದೊಡ್ಡಮೇಟಿ, ನರಸಿಂಹ ದಾಬಡೆ ಅವರ ಪಾತ್ರ ಗಣನೀಯವಾಗಿತ್ತು. ಅಂತಹವರಿಂದ ಬಳುವಳಿ ಪಡೆದ ಸ್ವತಂತ್ರ್ಯ ನಾಡಿನ ಶ್ರೀಮಂತ ಚರಿತ್ರೆಗೆ ತಕ್ಕಂತೆ ನಮ್ಮ ಚಾರಿತ್ರ್ಯ ಬೆಳೆಸಿಕೊಳ್ಳಬೇಕಾಗಿದೆ~ ಎಂದರು. `ದೇಶದ ಭವಿಷ್ಯವಾಗಿರುವ ಯುವಜನರು ತಮ್ಮ ಕರ್ತವ್ಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯುವ ನೀತಿ ರೂಪಿಸುತ್ತಿದ್ದು, ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಯುವಜನರಿಗಾಗಿ ನಿಗಮ ವೊಂದನ್ನು ಸ್ಥಾಪಿಸಲು ನಿರ್ಧರಿಸಿದೆ~ ಎಂದು ಹೇಳಿದರು.`ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಬರ ಎದುರಾಗಿದೆ. ಜಿಲ್ಲಾಡಳಿತ ಹಾಗೂ ಜಿ.ಪಂ. ಜನತೆಯ ನೆರವಿಗೆ ಅಗತ್ಯ ಕ್ರಮಗಳನ್ನು ಜರುಗಿಸಲು ನಿರಂತರ ನಿಗಾವಹಿಸುತ್ತಿವೆ. ಬರದ ಬವಣೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಸಹಕಾರಿ ಬೆಳೆಸಾಲ ಪಡೆದ ರೈತರ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಲು ಮುಂದಾಗಿದ್ದು, ರಾಷ್ಟ್ರೀಕೃತ ಬ್ಯಾಂಕುಗಳು ನೀಡಿದ ಬೆಳೆಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕು~ ಎಂದು ಆಗ್ರಹಿಸಿದರು.ಬಳಿಕ ಸಚಿವರಿಗೆ ವಿವಿಧ ತಂಡಗಳು ಗೌರವ ವಂದನೆ ಸಲ್ಲಿಸಿದವು. ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಮಹಿಳಾ ಪೊಲೀಸ್ ತರಬೇತಿ ಶಾಲೆಯ ಪಡೆ, ಗೃಹ ರಕ್ಷಕ ಹಾಗೂ ಅಬಕಾರಿ ದಳಗಳು. ಕಿಟೆಲ್ ಕಾಲೇಜಿನ ಸೀನಿಯರ್ ಡಿವಿಜನ್ ಎನ್‌ಸಿಸಿ ಪಡೆ, ಯುನಿವರ್ಸಿಟಿ ಪಬ್ಲಿಕ್ ಸ್ಕೂಲಿನ ಎನ್‌ಸಿಸಿ ಕೆಡೆಟ್‌ಗಳು ಪಾಲ್ಗೊಂಡಿದ್ದರು.ಕೆಎನ್‌ಕೆ ಗರ್ಲ್ಸ್ ಹೈಸ್ಕೂಲ್, ಪ್ರೆಸಂಟೇಶನ್ ಗರ್ಲ್ಸ್ ಹೈಸ್ಕೂಲ್ ಹಾಗೂ ಪವನ ಇಂಗ್ಲಿಷ್ ಮಾಧ್ಯಮ ಶಾಲೆ, ಗರಗದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಕ್ಯಾರಕೊಪ್ಪದ ಜವಾಹರ ನವೋದಯ ಶಾಲೆ, ಬುದ್ಧರಕ್ಕಿಥ ವಸತಿ ಶಾಲೆ, ಹೆಬ್ಬಳ್ಳಿಯ ಮೊರಾರ್ಜಿ ವಸತಿ ಶಾಲೆ, ಅಂಜುಮನ್ ಹೈಸ್ಕೂಲ್ ವಿದ್ಯಾರ್ಥಿ ನಿಯರು, ಜೆಎಸ್‌ಎಸ್ ಹಾಗೂ ಕೆ.ಇ. ಬೋರ್ಡ್ಸ್ ಹಾಗೂ ಕೆಪಿಇಸ್ ಶಾಲೆಗಳ ಸ್ಕೌಟ್ಸ್ ಹಾಗೂ ಗೈಡ್ಸ್ ದಳಗಳು ಪಥಸಂಚಲನದಲ್ಲಿ ಶಿಸ್ತಿನಿಂದ ಪಾಲ್ಗೊಂಡಿದ್ದವು.ಇದಕ್ಕೆ ಪೂರಕವಾಗಿ ಎ.ಎಚ್. ಕರಡಿಗುಡ್ಡ ನೇತೃತ್ವದ ಪೊಲೀಸ್ ಬ್ಯಾಂಡ್‌ನ ಆಕರ್ಷಕ ಹಿಮ್ಮೇಳವಿತ್ತು.ಮತ್ತೆ ಧರೆಗಿಳಿದರು ಕ್ರಾಂತಿ ಪುರುಷರು...

ಧಾರವಾಡ: ಪಂಜಾಬ್‌ನ ಜಲಿಯನ್ ವಾಲಾಬಾಗ್ ಹತ್ಯಾಕಾಂಡ, ಕ್ರಾಂತಿಕಾರಿ ಸಿಂಹಗಳಾದ ಸರ್ದಾರ್ ಭಗತ್‌ಸಿಂಗ್, ಸುಖದೇವ್, ರಾಜ್‌ಗುರು ಅವರ ಗಲ್ಲಿಗೆ ಹಾಕುವ ಸನ್ನಿವೇಶ, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿ (ಚಲೇಜಾವ್ ಚಳವಳಿ), ಸ್ವದೇಶಿ ಸ್ವೀಕಾರ, ವಿದೇಶಿ ವಸ್ತುಗಳ ಬಹಿಷ್ಕಾರ, ಸ್ವಾತಂತ್ರ್ಯದ ಘೋಷವನ್ನು ಊರತುಂಬ ಹರಡಿದ ಸೀರೆಯುಟ್ಟ ನೀರೆಯರು, ಮನಸೆಳೆದ ಮಕ್ಕಳ ಡೊಳ್ಳಿನ ಕುಣಿತ, ಅಂದಿನ ಪ್ರಧಾನಿ ನೆಹರೂರಿಂದ ಕೆಂಪುಕೋಟೆಯ ಮೇಲೆ ಧ್ವಜಾರೋಹಣ, ಮೈದಾನದಲ್ಲಿ ಕಾಣಿಸಿಕೊಂಡ ಎತ್ತಿನಗಾಡಿಗಳು...ಇವು ಇಲ್ಲಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಝಲಕ್‌ಗಳು.

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಬಾಲವಿಕಾಸ ಅಕಾಡೆಮಿ ಸಹಯೋಗದಲ್ಲಿ ಧ್ವಜಾರೋಹಣದ ನಂತರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳು ತಾಯ್ನೆಲವನ್ನು ಬಂಧನದಿಂದ ವಿಮುಕ್ತಿಗೊಳಿಸಲು ಶ್ರಮಿಸಿದ ಮಹಾತ್ಮ ಗಾಂಧಿ, ನೇತಾಜಿ ಸುಭಾಷಚಂದ್ರ ಬೋಸ್, ಭಗತ್, ಸುಖದೇವ್, ರಾಜ್‌ಗುರು, ತಾತ್ಯಾ ಟೋಪಿ, ಕೆಳದಿ ಚನ್ನಮ್ಮ, ಕಿತ್ತೂರು ಚನ್ನಮ್ಮ ಹೀಗೆ ಹಲವು ಸ್ವಾತಂತ್ರ್ಯ ಪ್ರೇಮಿಗಳ ಛದ್ಮವೇಶ ಧರಿಸಿ ಗಮನ ಸೆಳೆದರು.ಮೊದಲಿಗೆ ಮೈದಾನದಲ್ಲಿ ಮೂಡಿ ಬಂದದ್ದು ಜಲಿಯನ್ ವಾಲಾಬಾಗ್ ದುರಂತದ ಕಥನ. ಶಾಂತಿಯುತವಾಗಿ ಸಭೆ ಸೇರಿ ಚರ್ಚಿಸುತ್ತಿದ್ದ ನಾಗರಿಕರ ಮೇಲೆ ಬ್ರಿಟಿಷ್ ಪೊಲೀಸರು ಅನ್ಯಾಯವಾಗಿ ದಾಳಿ ಎಸಗಿ ಗುಂಡಿಟ್ಟು ಕೊಂದದ್ದು ಘಟನಾವಳಿಗಳನ್ನು ನೂರಾರು ಮಕ್ಕಳು ಪುನರ್ ಸೃಷ್ಟಿಸಿದರು. ಜೀವ ಉಳಿಸಿಕೊಳ್ಳಲು ಬಾವಿಯಲ್ಲಿ ಜಿಗಿದದ್ದು, ಮಣ್ಣಿನಲ್ಲಿ ಬಿದ್ದು ಮಣ್ಣಾಗಿ ಹೋದದ್ದನ್ನು ಕಣ್ಣಾರೆ ಕಟ್ಟಿಕೊಟ್ಟರು.ಬಳಿಕ ಸ್ವಾತಂತ್ರ್ಯ ಚಳವಳಿಯ ಸಂಧಾನಾತೀತ ಪಂಥದಲ್ಲಿ ಗುರುತಿಸಿಕೊಂಡಿದ್ದ ಭಗತ್‌ಸಿಂಗ್ ಹಾಗೂ ಅವರ ಸಹಚರರನ್ನು ಗಲ್ಲಿಗೇರಿಸುವ ದೃಶ್ಯ ಅಲ್ಲಿದ್ದವರನ್ನು ಕೆಲಕಾಲ ಭಾವುಕರನ್ನಾಗಿಸಿತು.ಅದರ ಪಕ್ಕದಲ್ಲೇ ಸ್ವದೇಶಿ ಚಳವಳಿಯ ಕುರುಹಾಗಿ ವಿದೇಶಿ ವಸ್ತುಗಳನ್ನು ಬೆಂಕಿಯಲ್ಲಿ ಹಾಕುವ ದೃಶ್ಯ, ಸ್ವಾತಂತ್ರ್ಯ ಬಂದ ಮಧ್ಯರಾತ್ರಿ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಅವರಿಂದ ನವದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಧ್ವಜಾರೋಹಣದ ಪ್ರಾತ್ಯಕ್ಷಿಕೆಯನ್ನು ಮಕ್ಕಳು ಪ್ರದರ್ಶಿಸಿದರು.ಈ ಕಾರ್ಯಕ್ರಮಗಳನ್ನು ಬಾಸೆಲ್ ಮಿಷನ್ ಬಾಲಕಿಯರ ಶಾಲೆ ಮಕ್ಕಳು ನಡೆಸಿಕೊಟ್ಟರು.

ಕರ್ನಾಟಕ ಬಾಲವಿಕಾಸ ಅಕಾಡೆಮಿುಂದ ರೂಪಿಸಲ್ಪಟ್ಟ ಪುಟ್ಟಮಕ್ಕಳ ಡೊಳ್ಳುಕುಣಿತ ಹಾಗೂ ಸ್ವಾತಂತ್ರ್ಯದ ಸಮೂಹ ನೃತ್ಯ ಮತ್ತು ಪ್ರಜಂಟೇಶನ್ ಬಾಲಕಿಯರ ಪ್ರೌಢಶಾಲೆಯ ಸಮೂಹ ನೃತ್ಯಗಳು ಗಮನ ಸೆಳೆದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.