ಶುಕ್ರವಾರ, ಏಪ್ರಿಲ್ 16, 2021
28 °C

ಗರಿಮೂಡಿಸಿದ ಸಂಸ್ಕೃತಿ ಮಂದಿರ

ಶಿವಾನಂದ ಕರ್ಕಿ Updated:

ಅಕ್ಷರ ಗಾತ್ರ : | |

ಪ್ರಕೃತಿ ಸೌಂದರ್ಯಕ್ಕೆ ಗರಿಮೂಡಿಸಿದ ತೀರ್ಥಹಳ್ಳಿ ಕಲೆ, ಸಾಹಿತ್ಯ ಸಂಸ್ಕೃತಿಗೆ ತನ್ನದೇ ಆದ ಕೊಡುಗೆ ನೀಡಿದೆ. ಇಲ್ಲಿನ ಕಟ್ಟಡಗಳು, ಸ್ಮಾರಕಗಳು ಗತಕಾಲದ ಇತಿಹಾಸವನ್ನು ತೆರೆದಿಡುತ್ತವೆ.

ಇಂಥ ಅಪೂರ್ವ ಕಟ್ಟಡಗಳ ಸಾಲಿಗೆ ಪಟ್ಟಣದ `ಸಂಸ್ಕೃತಿ ಮಂದಿರ~ ಸೇರಿದೆ. 1956ರ ಸೆಪ್ಟೆಂಬರ್ 13ರಂದು ಆಗಿನ ಮೈಸೂರು ಸರ್ಕಾರದ ಮುಖ್ಯಮಂತ್ರಿ ತೀರ್ಥಹಳ್ಳಿಯವರೇ ಆದ ಕಡಿದಾಳ್ ಮಂಜಪ್ಪ ಈ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅಂದು ನಿರ್ಮಾಣಗೊಂಡ ಈ ಕಟ್ಟಡ ಕೇವಲ ಕಟ್ಟಡವಾಗಿ ಉಳಿದಿಲ್ಲ. ತೀರ್ಥಹಳ್ಳಿ ಜನರ ಸಾಂಸ್ಕೃತಿಕ ಭಾಗವಾಗಿ ಉಳಿದಿರುವುದು ಇದರ ಹೆಗ್ಗಳಿಕೆ.ರಾಷ್ಟ್ರಕವಿ ಕುವೆಂಪು, ಡಿ. ದೇವರಾಜ ಅರಸು, ಶಾಂತವೇರಿ ಗೋಪಾಲಗೌಡ, ಡಾ.ರಾಜ್‌ಕುಮಾರ್ ಸೇರಿದಂತೆ ಅನೇಕ ನಾಡಿನ ಗಣ್ಯರು ಸಂಸ್ಕೃತಿ ಮಂದಿರದ ವೇದಿಕೆಯಲ್ಲಿ ತೀರ್ಥಹಳ್ಳಿ ಜನರೊಂದಿಗೆ ಮುಖಾಮುಖಿಯಾಗಿದ್ದಾರೆ. ಆ ಕಾಲಕ್ಕೆ ತೀರ್ಥಹಳ್ಳಿಯ ಎಲ್ಲ ಸಭೆ ಸಮಾರಂಭಗಳಿಗೆ ಇಲ್ಲಿನ ಬಯಲು ರಂಗಮಂದಿರವೇ ವೇದಿಕೆಯಾಗಿತ್ತು. ಇಂದಿಗೂ ಈ ಸ್ಥಳದ ಭಾವನಾತ್ಮಕ ಸಂಬಂಧ ಜನರಿಂದ ದೂರವಾಗಿಲ್ಲ.1938ರ ಆಗಸ್ಟ್ 27ರಂದು ತೀರ್ಥಹಳ್ಳಿ ಪೇಟೆಯನ್ನು ಪುರಸಭೆ ಮಾಡಿ ಆಗಿನ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೃಷ್ಣರಾವ್ ಅಧಿಸೂಚನೆ ಹೊರಡಿಸುತ್ತಾರೆ. ಅದರ ಆಧಾರದ ಮೇಲೆ 2012ರ ಡಿ. 8, 9ರಂದು ಪಟ್ಟಣ ಪಂಚಾಯ್ತಿಯ 75 ವರ್ಷಗಳ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪುರಸಭೆಯ ಪ್ರಥಮ ಅಧ್ಯಕ್ಷರಾಗಿ ಎಂ.ಜೆ. ಅಚ್ಚುತರಾವ್ ನಂತರ ಟಿ.ಆರ್. ಚಂದ್ರಶೇಖರ್, ಡಾ.ಚಂದ್ರಶೇಖರ್ ಮುಂತಾದವರು ಆಡಳಿತ ನಡೆಸಿದ್ದಾರೆ.ತೀರ್ಥಹಳ್ಳಿಗೆ ಮುನ್ಸೀಫ್ ಕೋರ್ಟ್ ಮಂಜೂರಾದಾಗ ಸಂಸ್ಕೃತಿ ಮಂದಿರದ ಕಟ್ಟಡದಲ್ಲಿ ಕೋರ್ಟ್ ಕಲಾಪಗಳನ್ನು ನಡೆಸಲು ಅನುವು ಮಾಡಿಕೊಡಲಾಗಿತ್ತು. ಈಗ ಕೋರ್ಟ್ ಕಲಾಪಗಳು ನ್ಯಾಯಾಲಯದ ಕಟ್ಟಡದಲ್ಲಿ ನಡೆಯುತ್ತಿವೆ. ಮೂಲ ಕಟ್ಟಡದ ಸ್ವರೂಪಕ್ಕೆ ಧಕ್ಕೆ ಭಾರದ ಹಾಗೆ ಈಗ ಸಂಸ್ಕೃತಿ ಮಂದಿರ ಕಟ್ಟಡದ ನವೀಕರಣವಾಗಿದೆ. ಇದೇ ಕಟ್ಟಡದಲ್ಲಿ ಪಟ್ಟಣ ಪಂಚಾಯ್ತಿಯ ಕಾರ್ಯಾಲಯ, ಸಭಾಭವನವನ್ನು ಅಡಕಮಾಡಲಾಗಿದೆ. `ಸಂಸ್ಕೃತಿ ಮಂದಿರ~ವನ್ನು ಸ್ಮಾರಕವಾಗಿ ಉಳಿಸಿಕೊಳ್ಳಬೇಕು ಎಂಬ ಹಿನ್ನೆಲೆಯಲ್ಲಿ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಪಟ್ಟಣ ಪಂಚಾಯ್ತಿ ಸದಸ್ಯ ಸಂದೇಶ್ ಜವಳಿ ಹೇಳುತ್ತಾರೆ.ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯ್ತಿ ಸಂಸ್ಕೃತಿ ಮಂದಿರವನ್ನು ಅಂದಗಾಣಿಸಿದೆ. ತೀರ್ಥಹಳ್ಳಿ ನೆಲಕ್ಕೆ ಗರಿ ಮೂಡಿಸಬಲ್ಲ ಸಂಸ್ಕೃತಿ ಮಂದಿರ ತನ್ನ ಹೆಸರಿಗೆ ತಕ್ಕಂತೆ ಈ ನೆಲದ ಕಲೆ, ಸಾಹಿತ್ಯ, ಸಂಸ್ಕೃತಿಗಳ ಅನಾವರಣದ ವೇದಿಕೆಯಾಗಿ ಜನಮಾನಸದಲ್ಲಿ ಉಳಿದಿದೆ. ಪಟ್ಟಣದ ಸೊಪ್ಪುಗುಡ್ಡಯ ಎತ್ತರದ ಸ್ಥಳದಲ್ಲಿನ ಬಯಲು ರಂಗಮಂದಿರದಲ್ಲಿ ಸಾವಿರಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿವೆ, ನಡೆಯುತ್ತಿವೆ.ಸಂಸ್ಕೃತಿ ಮಂದಿರದ ಪಕ್ಕ ಶಾಂತವೇರಿ ಗೋಪಾಲಗೌಡ ರಂಗಮಂದಿರ ನಿರ್ಮಾಣಗೊಂಡಿದೆ. ಜಿಲ್ಲೆಯಲ್ಲಿಯೇ ಉನ್ನತ ದರ್ಜೆಯ ರಂಗಮಂದಿರ ಇದಾಗಿದ್ದು, ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಉದ್ಘಾಟನೆಗೊಳ್ಳಲಿದೆ. ರಂಗಚಟುವಟಿಕೆಗೆ ವೇದಿಕೆ ಮುಕ್ತವಾಗಲಿದೆ. ಇದು ತೀರ್ಥಹಳ್ಳಿಯ ಹಿರಿಮೆಗೆ ಮತ್ತೊಂದು ಗರಿ ಮೂಡಿಸಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.