ಶುಕ್ರವಾರ, ಮಾರ್ಚ್ 5, 2021
30 °C

ಗರುಡಗಂಬ ಪುನರ್‌ ಸ್ಥಾಪನೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗರುಡಗಂಬ ಪುನರ್‌ ಸ್ಥಾಪನೆಗೆ ಆಗ್ರಹ

ಅರಸೀಕೆರೆ: ಜುಲೈ 9ರಂದು ನಡೆಯಬೇಕಿರುವ ತಾಲ್ಲೂಕಿನ ಮಾಲೇಕಲ್‌ ತಿರುಪತಿ ಲಕ್ಷ್ಮೀ ವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವ ಆಚರಣೆಗೆ ವಿಘ್ನ ಉಂಟಾಗಿರುವ ಕಾರಣ ಭಕ್ತರಲ್ಲಿ ಆತಂಕ ಮನೆ ಮಾಡಿದೆ.ಲಕ್ಷ್ಮೀ ವೆಂಕಟರಮಣಸ್ವಾಮಿ ರಥೋತ್ಸವ ಬಹಳ ಹಿಂದಿನಿಂದಲೂ  ಸಂಪ್ರದಾಯದಂತೆ ನಡೆದುಕೊಂಡು ಬಂದು ಇತಿಹಾಸ ಪ್ರಸಿದ್ದವಾಗಿದೆ. ರಥೋತ್ಸವದ ಸಂದರ್ಭದಲ್ಲಿ ಧಾರ್ಮಿಕ ವಿಧಿ–ವಿಧಾನಗಳ ಪ್ರಕಾರ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಶಾಸ್ತ್ರೋಕ್ತವಾಗಿ ನಿರ್ಮಿಸಲ್ಪಟ್ಟಿರುವ ‘ಗರುಡಗಂಬ’ಕ್ಕೆ ಗರುಡ ಪಟವನ್ನು ಕಟ್ಟಿ  ಅದಕ್ಕೆ ಪೂಜೆ ಸಲ್ಲಿಸಿದ ನಂತರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ.ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಆದರೆ, ಏ. 27ರಂದು ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಯ ಹೊಡೆತಕ್ಕೆ ಸಿಲುಕಿ ದೇವಾಲಯದ ಮುಂಭಾಗದಲ್ಲಿದ್ದ 33 ಅಡಿ ಎತ್ತರದ ‘ಗರುಡಗಂಬ’  ಬುಡಸಹಿತ ನೆಲಕಚ್ಚಿದೆ. ಸಂಪ್ರದಾಯದಂತೆ ಗರುಡಗಂಬ ಇಲ್ಲದೆ ಜಾತ್ರಾ ಮಹೋತ್ಸವದ ಗರುಡ ಪಟ ಕಟ್ಟುವಂತಿಲ್ಲ. ಜಾತ್ರಾ ಮಹೋತ್ಸವವನ್ನೂ ನಡೆಸುವಂತಿಲ್ಲ ಎಂದು ಈ ಭಾಗದ ಹಿರಿಯರು, ಅರ್ಚಕರು ಹಾಗೂ ಆಗಮಿಕರು ಹೇಳಿದ್ದಾರೆ.  ಈಗ ತುರ್ತಾಗಿ ಗರುಡಗಂಬ ನಿರ್ಮಾಣವಾಗಬೇಕಿದೆ.ಆದರೆ, ಮಾಲೇಕಲ್‌ ತಿರುಪತಿ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಾಲಯ ಮುಜರಾಯಿ ಇಲಾಖೆಗೆ ಒಳಪಟ್ಟಿರುವುದರಿಂದ ಹಾಗೂ ಪ್ರಸ್ತುತ ದೇವಾಲಯದ ಆಡಳಿತ ಮಂಡಳಿ ವಜಾಗೊಂಡಿರುವುದರಿಂದ ಮುಜರಾಯಿ ಇಲಾಖೆಯ ಅಧಿಕಾರಿಗಳೇ ಗರುಡಗಂಭದ ನಿರ್ಮಾಣ ಕಾಮಗಾರಿ ಆರಂಭಿಸಬೇಕಿದೆ. ಆದರೆ, ಮೇ 16ರವರೆಗೆ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಹೊಸದಾಗಿ ಯಾವುದೇ ಅಭಿವೃದ್ದಿ ಕಾಮಗಾರಿ ಕೈಗೆತ್ತಿಕೊಳ್ಳುವಂತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಜಾತ್ರಾ ಮಹೋತ್ಸವಕ್ಕೆ ಕೇವಲ ಇನ್ನು ಒಂದೂವರೆ ತಿಂಗಳು ಮಾತ್ರ ಬಾಕಿ ಇದ್ದು ಆ ವೇಳೆಗೆ 33 ಅಡಿ ಎತ್ತರದ ಗರುಡಗಂಬ ನಿರ್ಮಾಣ ಆಗಬೇಕಿರುವುದರಿಂದ ಆ ಕಾಮಗಾರಿ ಮುಗಿಯುತ್ತದೆಯೋ ಅಥವಾ ಇಲ್ಲವೋ  ಎಂಬ ಚಿಂತೆ ಮಾಲೇಕಲ್‌ ತಿರುಪತಿ ಗ್ರಾಮಸ್ಥರು ಹಾಗೂ ಭಕ್ತರಲ್ಲಿ  ಮನೆ ಮಾಡಿ ತೀವ್ರ ಆತಂಕಕ್ಕೆ ಕಾರಣವಾಗಿದೆ.ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಮುಜರಾಯಿ ಇಲಾಖೆಯ ಹಿರಿಯ ಅಧಿಕಾರಿಗಳು ತುರ್ತಾಗಿ ಸಭೆ ನಡೆಸಿ, ಗರುಡಗಂಬ ನಿರ್ಮಾಣ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.