ಸೋಮವಾರ, ಆಗಸ್ಟ್ 19, 2019
21 °C
ಊರಿನಲ್ಲಿ ನೆರೆಯ ಚಿಂತೆ; `ಆಸರೆ'ಯಲ್ಲಿ ಚಿರತೆ ಭಯ

ಗರ್ಭಗುಡಿ ನೆರೆ ಸಂತ್ರಸ್ತರ ಬದುಕು ಅತಂತ್ರ

Published:
Updated:

ಹರಪನಹಳ್ಳಿ:  ಸೂರು ಸಿಕ್ಕ ಸಂಭ್ರಮ ಅವರ ಮುಖದಲ್ಲಿ ಪುಟಿದೇಳುತ್ತಿತ್ತು. ಅಂದದ ಮನೆಯಲ್ಲಿ ಚಂದದ ಬದುಕು ಕಟ್ಟಿಕೊಳ್ಳುವ ಹಂಬಲ ಅವರಲ್ಲಿ ಮನೆಮಾಡಿತ್ತು. ಆದರೆ, ಕಟ್ಟಿದ ಮನೆಗೆ ಹೋದರೆ   ಬೀದಿ ದೀಪಗಳಲ್ಲಿದ ಬಡಾವಣೆಯಲ್ಲಿ ಚಿರತೆ ದಾಳಿಯ ಭಯ. `ಆಸರೆ' ಮನೆಗೆ ಹೋಗದೆ ಊರಲ್ಲಿನ ಮನೆಯಲ್ಲಿ ಉಳಿದರೆ, ಸೆರಗಂಚಿನಲ್ಲಿ ಹರಿಯುತ್ತಿರುವ ತುಂಗಭದ್ರೆಯ ನೆರೆಯ ಭೀತಿ.

- ಇದು ತಾಲ್ಲೂಕಿನ ಗರ್ಭಗುಡಿ ಗ್ರಾಮದ ಸಂತ್ರಸ್ತ ಕುಟುಂಬಗಳ ಅತಂತ್ರ ಸ್ಥಿತಿ.ಮಳೆಗಾಲ ಆರಂಭವಾದರೆ ಸಾಕು ತುಂಗಭದ್ರಾ ನದಿಯಲ್ಲಿ ಪ್ರತಿವರ್ಷ ಸಂಭವಿಸುವ ನೆರೆ ಭೀತಿಯಲ್ಲಿ ಈ ಗ್ರಾಮಸ್ಥರು ಜೀವನ ಸಾಗಿಸುತ್ತಾರೆ. ಊರಿನ ಕೂಗಳತೆಯ ದೂರದಲ್ಲಿ ಹರಿಯುತ್ತಿರುವ ತಂಗಭದ್ರಾ ನದಿಯಲ್ಲಿ ಪ್ರವಾಹ ಉಂಟಾಗಿ, ಭೋರ್ಗರೆದು ಹರಿಯುವ ನದಿಯಲ್ಲಿ ಇಲ್ಲಿನ ಅನೇಕ ಕುಟುಂಬಗಳ ಬದುಕು ನೆರೆಯಲ್ಲಿ ಕೊಚ್ಚಿಹೋಗುತ್ತದೆ. ಹೀಗಾಗಿ, 2009ರಲ್ಲಿ ಸಂಭವಿಸಿದ ಭೀಕರ ಜಲಪ್ರಳಯದಿಂದ ಎಚ್ಚೆತ್ತ ಸರ್ಕಾರ ಗ್ರಾಮದ ನೆರೆಪೀಡಿತ ಪ್ರದೇಶದ 170 ಕುಟುಂಬಗಳನ್ನು ಶಾಶ್ವತವಾಗಿ ಸ್ಥಳಾಂತರಿಸಲು ಖಾಸಗಿ ಸಹಭಾಗಿತ್ವದಲ್ಲಿ `ಆಸರೆ' ಯೋಜನೆ ರೂಪಿಸಿತ್ತು. ಆದರೆ, 170 ಮನೆಗಳ ಪೈಕಿ, ಊರವಲಯದಲ್ಲಿ 130 ಮನೆಗಳ `ಆಸರೆ' ಯೋಜನೆ ಅಡಿ ನಿರ್ಮಿಸಲಾಗಿದ್ದು, ಕಳೆದ ವರ್ಷ ಜೂನ್ 20ರಂದು ಫಲಾನುಭವಿಗಳಿಗೆ ಮನೆಗಳ ಒಡೆತನದ ಹಕ್ಕುಪತ್ರ ವಿತರಿಸಲಾಗಿದೆ.`ಆಸರೆ' ವಸತಿಪ್ರದೇಶದಲ್ಲಿ ಕೇವಲ ಮನೆ ಹಾಗೂ ಗುತ್ತಿಗೆದಾರರಿಗೆ ಲಾಭ ಮಾಡಿಕೊಡುವ ದಿಸೆಯಲ್ಲಿ ಒಂದಿಷ್ಟು ಚರಂಡಿ ವ್ಯವಸ್ಥೆ ನಿರ್ಮಾಣ ಮಾಡಲಾಗಿದೆ ಹೊರತು, ಸಮರ್ಪಕ ಕುಡಿಯುವ ನೀರು, ಬೀದಿ ದೀಪ, ಸುಸಜ್ಜಿತ ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸದಿರುವ ಪರಿಣಾಮ ಸಂತ್ರಸ್ತ ಕುಟುಂಬಗಳು ಆಸರೆ ಯೋಜನೆಯ ವಸತಿಪ್ರದೇಶಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.ಯೋಜನೆ ಅಡಿ ಹಕ್ಕುಪತ್ರ ಪಡೆದುಕೊಂಡಿರುವ 130 ಕುಟುಂಬಗಳ ಪೈಕಿ, ಕೇವಲ 25-30 ಕುಟುಂಬಗಳು ವಸತಿ ಪ್ರದೇಶದಲ್ಲಿ ವಾಸಿಸುತ್ತಿವೆ. ಉಳಿದ 90ಕ್ಕೂ ಅಧಿಕ ಮನೆಗಳು ವಾಸವಿಲ್ಲದ ಪರಿಣಾಮ ಮನೆ ಸುತ್ತಲೂ ಗಿಡಗಳು ಬೆಳೆದುನಿಂತಿವೆ.ಸೂರ್ಯ ಅಸ್ತಂಗತ ನಾಗುತ್ತಿದ್ದಂತೆಯೇ ಇಲ್ಲಿನ ಜನ ಮನೆಯ ಬಾಗಿಲಿನ ಕದ ಮುಚ್ಚಿಕೊಂಡರೆಂದರೆ, ಮಾರನೇ ದಿನ ಮೂಡಣದಲ್ಲಿ ಸೂರ್ಯೋದಯದ ನಂತರವೇ ಇಲ್ಲಿನ ಮನೆ ಬಾಗಿಲ ಕದ ತೆರೆದುಕೊಳ್ಳುತ್ತವೆ. `ಆಸರೆ' ಬಡಾವಣೆಯಲ್ಲಿ ಅಳವಡಿಸಲಾದ ವಿದ್ಯುತ್ ಕಂಬಗಳಿಗೆ ಬೀದಿ ದೀಪಗಳನ್ನು ಅಳವಡಿಸಿಲ್ಲ. ಗ್ರಾಮ ಪಂಚಾಯ್ತಿಗೆ ಮನೆ ಹಸ್ತಾಂತರಿಸದ ಹಿನ್ನೆಲೆಯಲ್ಲಿ ಪಂಚಾಯ್ತಿ ಅಧಿಕಾರಿಗಳು, ನೀವು ನಮಗೆ ಸಂಬಂಧ ಇಲ್ಲ. ಹೀಗಾಗಿ, ನೀರು, ಬೀದಿದೀಪ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಬೀದಿ ದೀಪ ಇಲ್ಲದ ಪರಿಣಾಮ ಇಲ್ಲಿನ ನಿವಾಸಿಗಳಿಗೆ ಚಿರತೆ ದಾಳಿಯ ಭೀತಿ ಆವರಿಸಿಕೊಂಡಿದೆ.`ಕತ್ಲು ಮೈಮ್ಯಾಲಿ ಬೀಳ್ತಿದ್ದಂಗ ಮನಿ ಬಾಗ್ಲ ಕದ ಮುಚ್ಕೊತೀವಿ. ಮತ್ತೆ ಮರ‌್ದಿನ ಸೂರ್ಯ ಹುಟ್ಟಿದ್ಮ್ಯಾಲೆ ಕದ ತೆಗಿಯೋದ್ರಿ. ರಾತ್ರಿ ಯಾವ ಹೊತ್ನಾಗ ಚಿರತಿ ಬರುತ್ತಾತೋ ಗೊತ್ತಿಲ್ಲ' ಎಂದು ಚಿರತೆ ಭಯದಿಂದ ಬದುಕುತ್ತಿರುವ ಬವಣೆ ಬಿಚ್ಚಿಡುತ್ತಾರೆ ಬಡಾವಣೆ ನಿವಾಸಿ ವಾಮದೇವಪ್ಪ.`ಆಸರೆ' ಬಡಾವಣೆ ನಿವಾಸಿಗಳಿಗೆ ಕುಡಿಯುವ ನೀರು ಪೂರೈಸುವ ಹಿನ್ನೆಲೆಯಲ್ಲಿ ಒಂದು ಕೊಳವೆಬಾವಿ ಕೊರೆಯಿಸಲಾಗಿದೆ. ಆದರೆ, ವಸತಿ ಸಮುಚ್ಚಯವನ್ನು ಎರಡು ಗುಡ್ಡದ ತಳಪಾಯದ ಎತ್ತರದ ಪ್ರದೇಶದಲ್ಲಿ ತಲಾ 60 ಮನೆಗಳಂತೆ ನಿರ್ಮಿಸಲಾಗಿದೆ. ಹೀಗಾಗಿ, ಕೊಳವೆಬಾವಿ ನೀರು ಕೇವಲ ನಾಲ್ಕಾರು ಮನೆಗಳವರೆಗೂ ಮಾತ್ರ ಹರಿಯುತ್ತಿದೆ. ಉಳಿದ ಮನೆಗಳಿಗೆ ಒಂದು ಹನಿಯೂ ಸರಬರಾಜು ಆಗುವುದಿಲ್ಲ. ಪೂರೈಕೆಯಾಗುತ್ತಿರುವ ನೀರು ಸಹ ಫ್ಲೋರೈಡ್‌ಯುಕ್ತ ಎನ್ನುತ್ತಾರೆ ಬಡಾವಣೆ ಮಹಿಳೆಯರು.

Post Comments (+)