ಗರ್ಭಿಣಿ ಎಂದಾಗಲೇ ಕೈಲಿತ್ತು ಮಗು!

7

ಗರ್ಭಿಣಿ ಎಂದಾಗಲೇ ಕೈಲಿತ್ತು ಮಗು!

Published:
Updated:

`ಕೆಲವು ತಿಂಗಳುಗಳಿಂದ ನನಗೆ ತುಂಬಾ ಹೊಟ್ಟೆ ನೋವು ಬರ‌್ತಾ ಇದೆ. ಈಗ ನೋವು ವಿಪರೀತ ಆಗಿದೆ. ನನಗೆ ಒಂದೂವರೆ ವರ್ಷದ ಮಗುವಿದೆ. ಅದು ಹುಟ್ಟುವಾಗ ಸಿಸೇರಿಯನ್ ಆಪರೇಷನ್ ಮಾಡಿದ್ದ ಜಾಗದಲ್ಲಿ ತುಂಬಾ ನೋವಿದೆ. ಆಪರೇಷನ್ ಮಾಡುವಾಗ ಹಾಕಿರೋ ಹೊಲಿಗೆಯಲ್ಲಿ ಸಮಸ್ಯೆ ಆಗಿರಬೇಕು. ನೋವು ತಡೆಯಲಾಗುತ್ತಿಲ್ಲ. ದಯವಿಟ್ಟು ನೋಡಿ...'ಹೀಗೆಂದು ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ಬಂದಿದ್ದ 25 ವರ್ಷದ ಮಹಿಳೆಯೊಬ್ಬರಿಗೆ ತಾವು ತುಂಬು ಗರ್ಭಿಣಿ ಎಂದು ಅರಿವಾದದ್ದು ಆಗಲೇ! ನೋವು ಎಂದು ಬಂದಿದ್ದ ಆಕೆಗೆ ತಾವು ಗರ್ಭಿಣಿ ಎಂದು ಗೊತ್ತಾಗುವ ಹೊತ್ತಿಗೆ ಆರೋಗ್ಯವಂತ ಹೆಣ್ಣು ಮಗುವಿನ ಜನನವೂ ಆಗಿತ್ತು!

ಇದು ನಡೆದದ್ದು ಈಚೆಗೆ, ಯಲಹಂಕ ಸಮೀಪದ ಶುಶ್ರೂಷ ನರ್ಸಿಂಗ್ ಹೋಂನಲ್ಲಿ. ಒಂಬತ್ತು ತಿಂಗಳ ಗರ್ಭಿಣಿಯಾದರೂ ತಮಗೆ ಅದರ ಅರಿವೇ ಇದ್ದಿರಲಿಲ್ಲ ಎಂದು ರೂಪಾ ಅವರು ಹೇಳಿದಾಗ, ವೈದ್ಯರೇ ದಂಗಾಗಿ ಹೋಗಿದ್ದರು.ದಿನನಿತ್ಯದಂತೆ ಅಂದು ಕೂಡ ರೂಪಾ ಆರಾಮಾಗಿಯೇ ಇದ್ದರು. ಐ.ಟಿ ಉದ್ಯೋಗಿ ಆಗಿರುವ ಪತಿ ಧನುಷ್ (ಇಬ್ಬರ ಹೆಸರು ಬದಲಾಯಿಸಲಾಗಿದೆ) ಅವರಿಗೆ ಬುತ್ತಿ ತುಂಬಿ ಕಚೇರಿಗೆ ಕಳುಹಿಸಿದ್ದರು. ಪತಿ ಸಂಜೆ ಮನೆಗೆ ಮರಳಿದ ಮೇಲೆ ಹೊರಗೆ ಸುತ್ತಾಡಿಕೊಂಡು ಬರುವ ಯೋಜನೆ ಕೂಡ ರೂಪಿಸಿದ್ದರು. ಆದರೆ ಪತಿ ಬರುವ ವೇಳೆಗೆ ಎಲ್ಲ ಯೋಜನೆ ಬುಡಮೇಲಾಗಿತ್ತು. ರೂಪಾ ಅವರಿಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿತು.ಪತಿಯನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಿದ್ದರು. ಕೆಳಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಆಪರೇಷನ್ ಮಾಡಿದ ಜಾಗದಲ್ಲಿ ಏನೋ ಸಮಸ್ಯೆ ಆಗಿರಬಹುದು ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಹೊಟ್ಟೆ ನೋವು ಕಾಣಿಸಿಕೊಂಡಿರಬಹುದು ಎಂದುಕೊಂಡಿದ್ದರು ದಂಪತಿ. ಇದನ್ನೇ ಅವರು ಆ ದಿನ ಕರ್ತವ್ಯದಲ್ಲಿದ್ದ ಸ್ತ್ರೀರೋಗ ತಜ್ಞೆ ಡಾ. ಅನಿತಾ ಅಶೋಕ್ ಅವರಿಗೂ ತಿಳಿಸಿದರು.ರೂಪಾ ಅವರನ್ನು ತಪಾಸಣೆ ಮಾಡಿದ ವೈದ್ಯೆ, `ನೀವೀಗ ತುಂಬು ಗರ್ಭಿಣಿ. ನನಗೆ ಮಗು ಕೂಡ ಹೊರಬರುವುದು ಕಾಣುತ್ತಿದೆ' ಎಂದಾಗ ರೂಪಾ ದಂಗಾಗಿ ಹೋಗಿದ್ದರು. ಆಕೆ ಈ `ಶಾಕ್'ನಿಂದ ಹೊರಬರುವ ಮೊದಲೇ ಸಹಜ ಹೆರಿಗೆ ಕೂಡ ಆಗಿ 2.6 ಕೆ.ಜಿ ತೂಕದ ಹೆಣ್ಣು ಮಗುವೂ ಹುಟ್ಟಿತ್ತು!

ಎಂತಹ ಅವಿದ್ಯಾವಂತೆಗಾದರೂ ತಾನು ಗರ್ಭಿಣಿ ಎನ್ನುವುದು ತಿಳಿಯುತ್ತದೆ. ಬಿ.ಎಸ್ಸಿ ಪದವೀಧರೆ ಆಗಿರುವ ರೂಪಾ, ಅದೂ ಒಂದು ಮಗುವಿನ ತಾಯಿಗೆ ಗರ್ಭಿಣಿ ಆಗಿರುವುದು ತಿಳಿಯದೇ ಇರುವುದು ಅಸಹಜ. ಆದರೆ ಗರ್ಭಿಣಿಯ ದೇಹಸ್ಥಿತಿಯಲ್ಲಿ ಉಂಟಾಗುವ ಯಾವುದೇ ಬದಲಾವಣೆ ತಮ್ಮ ದೇಹದಲ್ಲಿ ಆಗಿರಲೇ ಇಲ್ಲ ಎನ್ನುತ್ತಾರೆ ಅವರು. ಹೆಂಗಸರಿಗೆ ತಾವು ಗರ್ಭಿಣಿ ಎನ್ನುವುದು ತಿಳಿಯುವುದು ಮಾಸಿಕ ಋತುಸ್ರಾವ ನಿಂತಾಗ. ಆದರೆ ತಮಗೆ ಒಂಬತ್ತು ತಿಂಗಳೂ ಸಹಜವಾಗೇ ಮಾಸಿಕ ಋತುಸ್ರಾವ ಆಗಿದ್ದರಿಂದ ತಾವು ಗರ್ಭಿಣಿ ಎಂಬುದು ತಿಳಿಯಲೇ ಇಲ್ಲ ಎಂದು ಹೇಳುತ್ತಾರೆ. ಮೊದಲ ಮಗು ಹುಟ್ಟಿದ ಮೇಲೆ ಹೊಟ್ಟೆಗೆ ಬೊಜ್ಜು ಬರುವುದು ಸಾಮಾನ್ಯ ಎಂದು ಅವರು ಅಂದುಕೊಂಡರಂತೆ.ಇದು ಸಾಧ್ಯವೇ?

ಇದು ವೈದ್ಯಲೋಕದ ವಿಸ್ಮಯ ಎನ್ನುವುದು ರೂಪಾ ಅವರ ಪ್ರಸವ ಮಾಡಿರುವ ಡಾ. ಅನಿತಾ ಅವರ ಅಭಿಪ್ರಾಯ. ಈ ಕುರಿತು `ಭೂಮಿಕಾ' ಜೊತೆ ಮಾತನಾಡಿದ ಅವರು, `ನನ್ನ ಇಷ್ಟು ವರ್ಷಗಳ ಅನುಭವದಲ್ಲಿ ಇದು ಮೊದಲ ಪ್ರಕರಣ. ಒಂಬತ್ತು ತಿಂಗಳೂ ಐದು ದಿನಗಳ ಕಾಲ ಋತುಸ್ರಾವ ಆಗಿದೆ ಎನ್ನುವುದು ವಿಚಿತ್ರವೇ ಸರಿ. ತೀವ್ರ ಹೊಟ್ಟೆನೋವು ಎಂದು ಅಂದು ರೂಪಾ ಬಂದಿದ್ದರು. ತಪಾಸಣೆ ಮಾಡಿ ತುಂಬು ಗರ್ಭಿಣಿ ಎಂದು ಹೇಳಿದಾಗ ಅದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಅವರು ಇರಲಿಲ್ಲ. ಇದು ಆಸ್ಪತ್ರೆಯಲ್ಲಿನ ಎಲ್ಲ ವೈದ್ಯರಿಗೂ ಅಚ್ಚರಿ ತಂದರೂ ಆ ಸಂದರ್ಭದಲ್ಲಿ ಪ್ರಸವ ತುರ್ತಾಗಿ ಆಗಬೇಕಿದ್ದರಿಂದ  ಯಾವುದನ್ನೂ ಕೇಳುವಷ್ಟು ವೇಳೆ ನಮ್ಮಲ್ಲಿ ಇರಲಿಲ್ಲ. ಹಾಗೆಯೇ ಸಹಜ ಹೆರಿಗೆ ಕೂಡ ಆಯಿತು. ಪ್ರಸವದ ನಂತರ ಕೆಲವು ತಜ್ಞ ವೈದ್ಯರಲ್ಲಿ ಈ ಅಸಹಜ ಪ್ರಕರಣದ ಬಗ್ಗೆ ಚರ್ಚಿಸಿದೆ. ಅಪರೂಪದಲ್ಲಿ ಅಪರೂಪ ಎನ್ನಬಹುದಾದ ಇಂತಹ ಪ್ರಕರಣ ಅಲ್ಲಲ್ಲಿ ದಾಖಲಾಗಿರುವ ಬಗ್ಗೆ ವೈದ್ಯರುವಿವರಿಸಿದರು.`ಎಂಥದ್ದೇ ಪ್ರಕರಣ ಇರಲಿ. ಆರನೆಯ ತಿಂಗಳ ಗರ್ಭಾವಸ್ಥೆಯಲ್ಲಿ ಮಗುವಿನ ಚಲನವಲನ ತಾಯಿಗೆ ತಿಳಿದೇ ತಿಳಿಯುತ್ತದೆ. ಆದರೆ ರೂಪಾ ಅವರ ಪ್ರಕರಣದಲ್ಲಿ ಅದು ತಿಳಿಯದೇ ಇರುವುದು ಅಚ್ಚರಿ ತರುವ ವಿಷಯ. ಮಗು ಚಲಿಸುತ್ತಿದ್ದರೂ ಇದನ್ನು ರೂಪಾ ಗ್ಯಾಸ್ಟ್ರಿಕ್ ಸಮಸ್ಯೆ ಎಂದುಕೊಂಡು ಸುಮ್ಮನಾಗಿರಬಹುದು ಅಷ್ಟೇ' ಎನ್ನುವುದು ಅವರ ಅಭಿಮತ.ಇದನ್ನೇ ಇನ್ನೊಬ್ಬ ಪ್ರಸೂತಿ ತಜ್ಞೆ ಡಾ. ಪದ್ಮಿನಿ ಪ್ರಸಾದ್ ಕೂಡ ಒಪ್ಪಿಕೊಳ್ಳುತ್ತಾರೆ. ಇದು ಬಹಳ ಅಪರೂಪದ ಪ್ರಕರಣ. ಆಕೆಯ ಮೂತ್ರಕೋಶದ ಕೆಳಭಾಗದಲ್ಲಿ ರಕ್ತಸ್ರಾವ ಆಗುತ್ತಿದ್ದಿರಬಹುದು. ಇದರಿಂದ ಅದು ಮಗುವಿನ ಬೆಳವಣಿಗೆ ಮೇಲೆ ಪ್ರತಿಕೂಲ ಪರಿಣಾಮ ಬೀರದೇ ಇರುವ ಸಾಧ್ಯತೆ ಇದೆ' ಎನ್ನುವುದು ಅವರ ಅಭಿಪ್ರಾಯ.ಇದನ್ನೇ ಸಮರ್ಥಿಸಿಕೊಳ್ಳುವ ಇನ್ನೊಬ್ಬ ಸ್ತ್ರೀರೋಗ ತಜ್ಞ ಡಾ. ಬಿ.ರಮೇಶ್, ಮೊದಲ 3-4 ತಿಂಗಳು ರಕ್ತಸ್ರಾವ ಆಗುವ ಕಾರಣ, ಮಹಿಳೆ ತಾನು ಗರ್ಭಿಣಿ ಅಲ್ಲವೋ ಹೌದೋ ಎನ್ನುವ ಬಗ್ಗೆ ಗೊಂದಲಕ್ಕೆ ಒಳಗಾದ ಕೆಲವು ಪ್ರಕರಣಗಳು ನನ್ನ ಗಮನಕ್ಕೆ ಬಂದಿವೆ' ಎನ್ನುತ್ತಾರೆ. ಒಟ್ಟಿನಲ್ಲಿ ರೂಪಾ ಅವರ ಪ್ರಕರಣ ಈಗ ವೈದ್ಯಲೋಕದಲ್ಲಿ ಗಂಭೀರ ಚರ್ಚೆಗೆ ಗ್ರಾಸವಾಗಿದೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry