ಗರ್ಭಿಣಿ, ಬಾಣಂತಿಯರಿಗೆ ಭತ್ಯೆ: ಎಚ್‌ಡಿಕೆ ಭರವಸೆ

7

ಗರ್ಭಿಣಿ, ಬಾಣಂತಿಯರಿಗೆ ಭತ್ಯೆ: ಎಚ್‌ಡಿಕೆ ಭರವಸೆ

Published:
Updated:

ಬೆಂಗಳೂರು: ಜೆಡಿಎಸ್ ಅಧಿಕಾರಕ್ಕೆ ಬಂದರೆ, ಗರ್ಭಿಣಿ ಹಾಗೂ ನವಜಾತ ಶಿಶುವಿಗೆ ಪೌಷ್ಟಿಕ ಆಹಾರ ದೊರೆಯಬೇಕು ಎಂಬ ಉದ್ದೇಶದಿಂದ ಗರ್ಭಿಣಿಯರಿಗೆ ಐದನೆಯ ತಿಂಗಳಿನಿಂದ ಮಾಸಿಕ ಐದು ಸಾವಿರ ರೂಪಾಯಿ, ಬಾಣಂತಿಯರಿಗೆ ಮೊದಲ ಮೂರು ತಿಂಗಳು ತಲಾ ಐದು ಸಾವಿರ ರೂಪಾಯಿ ಭತ್ಯೆ ನೀಡಲಾಗುವುದು ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.         ಕುಮಾರಸ್ವಾಮಿ ಪ್ರಕಟಿಸಿದರು.ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಹೆಣ್ಣುಮಕ್ಕಳಿಗೆ ಮೊದಲ ಹಾಗೂ ಎರಡನೆಯ ಹೆರಿಗೆ ಸಂದರ್ಭದಲ್ಲಿ ಈ ಸೌಲಭ್ಯ ನೀಡಲಾಗುವುದು ಎಂದು ಇಲ್ಲಿನ ಹೊಸಕೆರೆಹಳ್ಳಿಯಲ್ಲಿ ಭಾನುವಾರ ನಡೆದ ಪಕ್ಷದ ಸಮಾವೇಶದಲ್ಲಿ ತಿಳಿಸಿದರು. ಈ ಯೋಜನೆಯ ಅನುಷ್ಠಾನಕ್ಕೆ ವಾರ್ಷಿಕ ರೂ 150 ಕೋಟಿ ಬೇಕಾಗಬಹುದು.ಅಂಗವಿಕಲರಿಗೆ ತಿಂಗಳಿಗೆ ರೂ 2,500 ನೀಡಲಾಗುವುದು. ಅವರ ಅಭಿವೃದ್ಧಿಗೆ ಪಕ್ಷದ ವತಿಯಿಂದ ಒಟ್ಟು 35 ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಇದೇ 28ರಂದು ಬೆಂಗಳೂರಿನಲ್ಲಿ ಪಕ್ಷದ ವತಿಯಿಂದ ನಡೆಯಲಿರುವ ಅಂಗವಿಕಲರ ಸಮಾವೇಶದಲ್ಲಿ ಈ ಕುರಿತ ವಿವರಗಳನ್ನು ಪ್ರಕಟಿಸಲಾಗುವುದು ಎಂದರು.ಬಿಜೆಪಿ ಸರ್ಕಾರ, `ಭಾಗ್ಯಲಕ್ಷ್ಮಿ ಬಾಂಡ್~ ವಿತರಣೆ ನಿಲ್ಲಿಸಿದೆ. ವೃದ್ಧಾಪ್ಯ ವೇತನ ಸಹ ಕಾಲಕಾಲಕ್ಕೆ ಪಾವತಿಯಾಗುತ್ತಿಲ್ಲ.ಜೆಡಿಎಸ್ ಅಧಿಕಾರಕ್ಕೆ ಬಂದರೆ, ವೃದ್ಧಾಪ್ಯ ವೇತನದ ಮೊತ್ತವನ್ನು ತಿಂಗಳಿಗೆ 1,500 ರೂಪಾಯಿಗೆ ಹೆಚ್ಚಳ ಮಾಡಲಾಗುವುದು. ಇಷ್ಟೇ ಮೊತ್ತವನ್ನು ವಿಧವೆಯರಿಗೂ ನೀಡಲಾಗುವುದು ಎಂದು ಹೇಳಿದರು.ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ, ಶಾಸಕ ಬಂಡೆಪ್ಪ ಕಾಶೆಂಪುರ ಮತ್ತಿತರರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry