ಮಂಗಳವಾರ, ಜನವರಿ 21, 2020
19 °C

ಗರ್ಭಿಣಿ ಸೇರಿ ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಕೋಟೆ: ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಗರ್ಭಿಣಿ ಸೇರಿದಂತೆ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ.

ರಸ್ತೆ ಬದಿ ನಡೆದು ಹೋಗುತ್ತಿದ್ದ ಗೀತಾ (24) ಎಂಬುವವರಿಗೆ ಟಾಟಾ ಸುಮೊ ವಾಹನ ಡಿಕ್ಕಿ ಹೊಡೆದುದರಿಂದ ಅವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ವೀರೇನಹಳ್ಳಿಯಲ್ಲಿ ನಡೆದಿದೆ. ಶಾಲೆಗೆ ಹೋಗಿದ್ದ ತಮ್ಮ ಇಬ್ಬರು ಮಕ್ಕಳನ್ನು ಕರೆದುಕೊಂಡು ಬರಲು ನಡೆದು ಹೋಗುತ್ತಿದ್ದ ಗೀತಾ ಅವರಿಗೆ ಹಿಮ್ಮುಖವಾಗಿ ಚಲಿಸುತ್ತಿದ್ದ ಸುಮೊ ಡಿಕ್ಕಿ ಹೊಡೆಯಿತು. ಕೆಳಗೆ ಬಿದ್ದ ಅವರ ತಲೆಯ ಮೇಲೆ ವಾಹನದ ಚಕ್ರ ಹರಿಯಿತು. ಪೇಂಟರ್ ಕೆಲಸ ಮಾಡುವ ಗದಗ ಜಿಲ್ಲೆ ಮೂಲದ ಮಹದೇವ ಗೌಡ ಅವರ ಪತ್ನಿ ಗೀತಾ 7 ತಿಂಗಳ ಗರ್ಭಿಣಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

 ಮತ್ತೊಂದು ಪ್ರಕರಣದಲ್ಲಿ ಬೂದಿಗೆರೆ ರಸ್ತೆಯ ಶೃಂಗಾರಪುರ ಗೇಟ್ ಬಳಿ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದುದರಿಂದ ಅದರ ಸವಾರ ಜಾಲಾ ಹೋಬಳಿ ಮಂಚೇನಹಳ್ಳಿಯ ಮೋಹನ್ (19) ತೀವ್ರವಾಗಿ ಗಾಯಗೊಂಡರು. ಬೆಂಗಳೂರಿನ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಅವರು ಸಾವನ್ನಪ್ಪಿದರು.

ಕೃಷ್ಣರಾಜಪುರದ ಕೋಳಿ ಮಾರಾಟ ಅಂಗಡಿಯಲ್ಲಿ ಮೋಹನ್ ಕೆಲಸ ಮಾಡುತ್ತ್ದ್ದಿದರು. ಅಂಗಡಿಗೆ ಹೋಗಲು ಬೈಕ್‌ನಲ್ಲಿ ಬೂದಿಗೆರೆ ಕಡೆಯಿಂದ ಬರುತ್ತಿದ್ದಾಗ ಅಪಘಾತ ನಡೆದಿದೆ. ಪೊಲೀಸರು ಎರಡೂ ಪ್ರಕರಣ ದಾಖಲಿಸಿದ್ದಾರೆ.

ಅಪರಿಚಿತ ವ್ಯಕ್ತಿ ಸಾವು: ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟರು. ಸುಮಾರು 45 ವರ್ಷದ ಆ ವ್ಯಕ್ತಿ ತಿಳಿ ಆಕಾಶ ಬಣ್ಣದ ತುಂಬು ತೋಳಿನ ಶರ್ಟ್, ನೀಲಿ ನಿಕ್ಕರು ಧರಿಸಿದ್ದರು. ಇಲ್ಲಿಗೆ ಸಮೀಪದ ಕೊಳತೂರು ಗ್ರಾಮದ ರಸ್ತೆ ಬದಿ ಅಸ್ವಸ್ಥರಾಗಿ ಬಿದ್ದಿದ್ದ ಅವರನ್ನು ಗ್ರಾಮಸ್ಥರು ಭಾನುವಾರ ಆಸ್ಪತ್ರೆಗೆ ಸೇರಿಸಿದ್ದರು. ಶವವನ್ನು ಇಲ್ಲಿಯ ಎಂವಿಜೆ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿದೆ. ಪೊಲೀಸರು ಅಸ್ವಾಭಾವಿಕ ಮರಣದ ಮೊಕದ್ದಮೆ ದಾಖಲಿಸಿದ್ದು, ವಾರಸುದಾರರು ಹೊಸಕೋಟೆ ಪೊಲೀಸರನ್ನು ಸಂಪರ್ಕಿಸಬಹುದು.

ಪ್ರತಿಕ್ರಿಯಿಸಿ (+)