ಗಲಾಟೆ ಮಧ್ಯೆ ವಿಧಾನಮಂಡಲ ಕಲಾಪ

7

ಗಲಾಟೆ ಮಧ್ಯೆ ವಿಧಾನಮಂಡಲ ಕಲಾಪ

Published:
Updated:

ಬೆಂಗಳೂರು:  ಸರ್ಕಾರದ ಭ್ರಷ್ಟಾಚಾರದ ಕುರಿತು ನಿಲುವಳಿ ಸೂಚನೆ ಮಂಡನೆಗೆ ಪಟ್ಟುಹಿಡಿದು ವಿರೋಧ ಪಕ್ಷಗಳು ನಡೆಸುತ್ತಿರುವ ಧರಣಿ ಹಾಗೂ ಕಾವೇರಿದ ವಾತಾವರಣದ ನಡುವೆಯೇ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಗಳವಾರ ಕಲಾಪ ನಡೆಯಿತು.ಕಾಂಗ್ರೆಸ್, ಜೆಡಿಎಸ್ ಸದಸ್ಯರು ಧರಣಿ ನಡೆಸುತ್ತಿರುವಾಗಲೇ ವಿಧಾನಸಭೆಯ ಉಪ ಸಭಾಧ್ಯಕ್ಷರ ಚುನಾವಣೆ ನಡೆಯಿತು. 5060.41 ಕೋಟಿ ರೂಪಾಯಿ ಮೊತ್ತದ ಪೂರಕ ಅಂದಾಜುಗಳ ಎರಡನೇ ಕಂತಿನ ಪಟ್ಟಿಯನ್ನೂ ಸದನದಲ್ಲಿ ಮಂಡಿಸಲಾಯಿತು. ಹಲವು ವರದಿಗಳು ಮತ್ತು ಸೋಮವಾರದ ಪ್ರಶ್ನೋತ್ತರವನ್ನೂ ಉಭಯ ಸದನಗಳಲ್ಲಿ ಮಂಡಿಸಲಾಯಿತು.ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆ ಮತ್ತು ಭೂ ಹಗರಣಗಳ ಬಗ್ಗೆ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೋರಿ ಸೋಮವಾರ ಉಭಯ ಸದನಗಳಲ್ಲಿ ಧರಣಿ ನಡೆಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು, ಮಂಗಳವಾರವೂ ಸದನ ಆರಂಭವಾಗುತ್ತಿದ್ದಂತೆಯೇ ಧರಣಿ ಮುಂದುವರಿಸಿದರು.ವಿಧಾನಸಭೆಯಲ್ಲಿ ಗದ್ದಲ, ಕೋಲಾಹಲದ ನಡುವೆಯೇ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಎನ್.ಯೋಗೀಶ್ ಭಟ್ ಅವರನ್ನು ಉಪ ಸಭಾಧ್ಯಕ್ಷರ ಕುರ್ಚಿ ಮೇಲೆ ಕೂರಿಸಿದರು. ಈ ಸಂದರ್ಭದಲ್ಲಿ ಪ್ರತಿಪಕ್ಷ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆಯೇ ಧರಣಿ ನಡೆಸುತ್ತಿದ್ದರು.

ಕಲಾಪ ಪಟ್ಟಿಯಲ್ಲಿ ದಾಖಲಾಗಿದ್ದ ಎಲ್ಲ ವರದಿಗಳನ್ನೂ ಗದ್ದಲದ ನಡುವೆಯೇ ಮಂಡಿಸಲು ಸ್ಪೀಕರ್ ಸೂಚಿಸಿದರು. ಅದರಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಂಚಾಯತ್‌ರಾಜ್ ಸಂಸ್ಥೆಗಳ ಕುರಿತ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ವರದಿಯನ್ನು ಮಂಡಿಸಿದರು. ಬಳಿಕ ಇಸ್ಕಾನ್‌ನ ಅಕ್ಷರ ದಾಸೋಹ ಯೋಜನೆ ಕುರಿತ ಸದನ ಸಮಿತಿ, ಅಧೀನ ಶಾಸನ ರಚನಾ ಸಮಿತಿ, ಹಕ್ಕುಬಾಧ್ಯತಾ ಸಮಿತಿ, ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ, ಸಾರ್ವಜನಿಕ ಉದ್ಯಮಗಳ ಸಮಿತಿ.....ಹೀಗೆ ಏಳು ಸಮಿತಿಗಳ ವರದಿಗಳನ್ನು ಮಂಡಿಸಲಾಯಿತು.ಇವೆಲ್ಲ ಮುಗಿದ ನಂತರವೂ ಕಲಾಪ ನಡೆಸಲು ಸ್ಪೀಕರ್ ಅವಕಾಶ ಕೋರಿದರು. ಆಗಲೂ ಪ್ರತಿಪಕ್ಷಗಳ ಸದಸ್ಯರು ತಮ್ಮ ಪಟ್ಟು ಬಿಟ್ಟುಕೊಡಲಿಲ್ಲ. ನಂತರ ಮಧ್ಯಾಹ್ನ 3ಕ್ಕೆ ಸದನ ಮುಂದೂಡಿದರು.ಭೋಜನ ವಿರಾಮದ ನಂತರ ಸದನ ಆರಂಭವಾಗುತ್ತಿದ್ದಂತೆಯೇ ಸಭಾಧ್ಯಕ್ಷರ ಸ್ಥಾನದಲ್ಲಿದ್ದ ನೂತನ ಉಪಾಧ್ಯಕ್ಷ ಯೋಗೀಶ್ ಭಟ್ ಅವರು ಗಮನ ಸೆಳೆಯುವ ಸೂಚನೆಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದರು. ಆಗ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಸಂಸತ್ತಿನಲ್ಲಿ 23 ದಿನ ಬಿಜೆಪಿಯವರು ಯಾವುದೇ ಚರ್ಚೆಗೆ ಅವಕಾಶ ನೀಡಲಿಲ್ಲ. ಇಲ್ಲಿ ನಾವು ಧರಣಿ ನಡೆಸುತ್ತಿರುವಾಗ ಕಲಾಪ ನಡೆಸುವುದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.ಗದ್ದಲದ ನಡುವೆಯೇ ಬಿಜೆಪಿಯ ಸಿದ್ದು ಸವದಿ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯವನ್ನು ಮಂಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ಅಶೋಕ ಚವಾಣ್ ಅವರು ತಮ್ಮ ಸಂಬಂಧಿಕರಿಗೆ ಆದರ್ಶ ಹೌಸಿಂಗ್ ಸೊಸೈಟಿಯ ಮೂಲಕ ಫ್ಲ್ಯಾಟ್ ನೀಡಲು ಶಿಫಾರಸು ಮಾಡಿದ್ದರು ಎಂಬ ಕಾರಣಕ್ಕೆ ರಾಜೀನಾಮೆ ನೀಡಿದರು. 2ಜಿ ಪ್ರಕರಣದಲ್ಲಿ ಎ.ರಾಜಾ ರಾಜೀನಾಮೆ ನೀಡಿದ್ದಾರೆ. ಪ್ರಧಾನ ಮಂತ್ರಿ ಮೇಲೆ ನೇರ ಆರೋಪಗಳು ಇಲ್ಲದಿದ್ದರೂ ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ಆಗುತ್ತಿದೆ.ಆದರೂ ಬಿಜೆಪಿಯವರು ಪ್ರಧಾನಿ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಹಾಗಾದರೆ ಇಲ್ಲಿ ಯಡಿಯೂರಪ್ಪ ಯಾಕೆ ರಾಜೀನಾಮೆ ನೀಡಬಾರದು ಎಂದು ಪ್ರಶ್ನಿಸುತ್ತಿದ್ದಂತೆಯೇ, ಆವೇಶಕ್ಕೆ ಒಳಗಾದ ಯಡಿಯೂರಪ್ಪ ಸಭಾಧ್ಯಕ್ಷರನ್ನು ಉದ್ದೇಶಿಸಿ, ‘ಇಲ್ಲಿ ಏನು ನಡೆಯುತ್ತಿದೆ, ಇದೆಲ್ಲ ಏನು’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಯೋಗೀಶ್ ಭಟ್ ಅವರು ಸದನವನ್ನು ಬುಧವಾರಕ್ಕೆ ಮುಂದೂಡಿದರು.ಪರಿಷತ್‌ನಲ್ಲೂ ಮುಂದುವರಿದ ಧರಣಿ:

ಪರಿಷತ್‌ನಲ್ಲಿ ಮಂಗಳವಾರ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಪೀಠದ ಎದುರಿನಲ್ಲಿ ಧರಣಿ ಮುಂದುವರಿಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು, ಪ್ರಶ್ನೋತ್ತರ ರದ್ದುಪಡಿಸಿ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದರು.ವಿರೋಧ ಪಕ್ಷದ ಸದಸ್ಯರು ನಿಲುವಳಿ ಸೂಚನೆ ಮಂಡನೆಗೆ ಆದ್ಯತೆ ನೀಡುವಂತೆ ಬೇಡಿಕೆ ಇಟ್ಟರೆ, ಆಡಳಿತ ಪಕ್ಷದವರು ಪ್ರಶ್ನೋತ್ತರವೇ ಮೊದಲು ನಡೆಯಬೇಕು ಎಂದು ಪ್ರತಿವಾದ ಮಂಡಿಸಿದರು. ಒಂದು ಹಂತದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಆಗ ಸಭಾಪತಿಯವರು ಸದನವನ್ನು ಮಧ್ಯಾಹ್ನ 3.30ಕ್ಕೆ ಮುಂದೂಡಿದರು.ಧರಣಿಯ ನಡುವೆಯೇ ಕಲಾಪ:

ಮಧ್ಯಾಹ್ನ ಮತ್ತೆ ಸದನ ಸೇರಿದಾಗ ವಿಪಕ್ಷಗಳು ಧರಣಿ ಮುಂದುವರೆಸಿದವು. ಈ ನಡುವೆಯೇ ಬಿಜೆಪಿಯ ಗೋ.ಮಧುಸೂದನ್ ಅವರು ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಪ್ರಸ್ತಾವ ಮಂಡಿಸಿದರು. ನಿರ್ಣಯದ ಪರ ಭಾಷಣ ಮಾಡಲು ಮಧುಸೂದನ್ ಪ್ರಯತ್ನಿಸಿದಾಗ ಪ್ರತಿಪಕ್ಷಗಳ ಸದಸ್ಯರು ವಿರೋಧ ವ್ಯಕ್ತಪಡಿಸಿದರು.ಬಳಿಕ ಹಲವು ಸಮಿತಿಗಳ ವರದಿಗಳನ್ನು ಮಂಡಿಸಲಾಯಿತು. ಸೋಮವಾರ ನಡೆಯಬೇಕಿದ್ದ ಪ್ರಶ್ನೋತ್ತರ ಕಲಾಪದ ಉತ್ತರಗಳನ್ನೂ ಸದನದಲ್ಲಿ ಮಂಡಿಸಲಾಯಿತು. ನಂತರ ದಿನದ ಪ್ರಶ್ನೋತ್ತರ ಕಲಾಪ ನಡೆಸಲು ಸಭಾಪತಿಯವರು ಮುಂದಾದರು. ಧರಣಿ ವಾಪಸ್ ಪಡೆದು ತಮ್ಮ ಸ್ಥಾನಗಳಿಗೆ ಮರಳುವಂತೆ ಶಂಕರಮೂರ್ತಿ ಮಾಡಿದ ಮನವಿಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಒಪ್ಪಲಿಲ್ಲ.ಪ್ರಶ್ನೋತ್ತರ ರದ್ದುಮಾಡಿ ನಿಲುವಳಿ ಸೂಚನೆಗೆ ಮಂಡಿಸಲು ಅವಕಾಶ ನೀಡುವಂತೆ ವಿರೋಧಪಕ್ಷದ ನಾಯಕಿ ಮೋಟಮ್ಮ, ಉಪನಾಯಕ ಎಸ್.ಆರ್.ಪಾಟೀಲ್, ಜೆಡಿಎಸ್ ನಾಯಕ ಎಂ.ಸಿ.ನಾಣಯ್ಯ ಮತ್ತಿತರರು ಪಟ್ಟುಹಿಡಿದರು. ಪ್ರತಿಪಕ್ಷಗಳ ಸದಸ್ಯರ ಮನವೊಲಿಸಲು ಸಾಧ್ಯವಾಗದೇ ಗದ್ದಲ ಹೆಚ್ಚಿದಾಗ ಸದನವನ್ನು ಬುಧವಾರಕ್ಕೆ ಮುಂದೂಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry