ಭಾನುವಾರ, ಜೂನ್ 20, 2021
25 °C
ಇಂದು ನಡೆಯಲಿದೆ ಸಾವಿರಾರು ಕುರಿ, ಕೋಳಿಗಳ ಬಲಿ

ಗಲ್ಲಿಗಲ್ಲಿಗಳಲ್ಲೂ ದುಗ್ಗಮ್ಮ ದೇವಿಯ ಜಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಅಲ್ಲಿ ಸಂಭ್ರಮ ಮೇರೆ ಮೀರಿದೆ. ‘ದುಗ್ಗಮ್ಮ’ನ ಜಪ ಮಂಗಳವಾರವೂ ಮುಂದುವರಿದೆ. ದೇವಿಯ ದರ್ಶನ ಪಡೆದು ಪುನೀತರಾದ ಧನ್ಯತಾ ಭಾವ..!ದೂರದ ಊರಿನಿಂದ ಬಂದ ಭಕ್ತರು, ಹರಕೆ ಹೊತ್ತವರು, ನವ ವಧು– ವರರು, ಮಕ್ಕಳಿಲ್ಲದವರು, ಕಾಯಿಲೆ– ಸಂಕಷ್ಟದಿಂದ ಬಳಲುತ್ತಿದ್ದವರೂ ದುಗ್ಗಮ್ಮನಿಗೆ ಭಕ್ತಿಯಿಂದ ನಮಿಸಿದರು. ಸಿಹಿಯೂಟ ಮಾಡಿ, ದೇವಸ್ಥಾನ ಮುಂದೆ ಸರತಿ ಸಾಲಿನಲ್ಲಿ ನಿಂತು ಶಕ್ತಿ ದೇವತೆ ದುಗ್ಗಮ್ಮನನ್ನು ಕಣ್ತುಂಬಿಕೊಂಡರು.ನಿಟುವಳ್ಳಿ, ಕೊರಚರಹಟ್ಟಿ, ಕೆ.ಟಿ.ಜೆ. ನಗರ, ಲೇಬರ್‌ ಕಾಲೊನಿ, ಗಾಂಧಿನಗರ, ಚೌಕಿಪೇಟೆ, ಕಾಯಿಪೇಟೆ, ಚೌಡೇಶ್ವರಿ ಗಲ್ಲಿ, ಎಸ್‌ಜೆಎಂ ನಗರ, ಕುರುಬರಕೇರಿ, ಭಾರತ್‌ ಕಾಲೊನಿ, ಯಲ್ಲಮ್ಮ ನಗರ, ವಿನೋಬನಗರ, ಆವರಗೆರೆ, ಮೌನೇಶ್ವರ ಬಡಾವಣೆ, ಲೆನಿನ್‌ ನಗರದಲ್ಲೂ ಹಬ್ಬ ಸಂಭ್ರಮ ಮನೆ ಮಾಡಿದ್ದು ಬುಧವಾರ ಬಾಡೂಟಕ್ಕೆ ಸಕಲ ರೀತಿಯಲ್ಲೂ ನಗರ ಸಜ್ಜಾಗಿದೆ.ದೇವಸ್ಥಾನದಲ್ಲಿ ಮಂಗಳವಾರ ಮಧ್ಯರಾತ್ರಿ ‘ಮಹಾಪೂಜೆ’ಯೊಂದು ನಡೆದ ಬಳಿಕ ಬುಧವಾರ ಬೆಳಿಗ್ಗೆ ಗಲ್ಲಿಗಲ್ಲಿಗಳಲ್ಲಿ ರಕ್ತಾರ್ಪಣೆ ಆಗಲಿದೆ. ಸೂರ್ಯೋದಯಕ್ಕೂ ಮೊದಲೇ ಅವರವರ ಮನೆಗಳ ಎದುರು ಸಾವಿರಾರು ಕುರಿಗಳು, ಲಕ್ಷಾಂತರ ಕೋಳಿಗಳು ಬಲಿ ನಡೆಯಲಿದೆ. ದೇಗುಲದ ಸುತ್ತಮುತ್ತ ಬಲಿ ನೀಡದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಸಿಸಿ ಕ್ಯಾಮೆರಾ ಅಳವಡಿಸಿ ಹೆಚ್ಚಿನ ಭದ್ರತೆಯನ್ನೂ ಆಯೋಜಿಸಲಾಗಿದೆ. ಭದ್ರತೆಗೆ ದೂರದ ಊರಿನಿಂದ ಹೆಚ್ಚಿನ ಪೊಲೀಸರು ಬಂದಿದ್ದಾರೆ.ಸಿಹಿ ಊಟದ ಸವಿ...! ಮಂಗಳವಾರ ನಗರದ ಎಲ್ಲೆಡೆ ಸಿಹಿ ಊಟದ ಸವಿ ಅನುಭವ. ಹೋಳಿಗೆ, ಕೀರು, ಗೋಧಿ ಹುಗ್ಗಿಯನ್ನು ಮನೆಯಲ್ಲಿಯೇ ತಯಾರಿಸಿ ದೇವಿಗೆ ಅರ್ಪಿಸಿದರು. ಜತೆಗೆ ಹರಕೆ ಹೊತ್ತವರು ಹರಕೆ ತೀರಿಸಿದರು. ದೇಗುಲದಲ್ಲಿ ಮಹಾಪೂಜೆ ನಡೆಯಿತು. ರೈತರು, ಗೌಡರ ವಂಶಸ್ಥರು, ಶಾನಭೋಗರು ಪೂಜೆ ಸಲ್ಲಿಸಿದರು. ಜತೆಗೆ ಮಧ್ಯರಾತ್ರಿ ದೇವಿಯ ಉತ್ಸವವೂ ನಡೆಯಲಿದೆ.ಹಗೆದಿಬ್ಬ ವೃತ್ತ, ಕಾಳಿಕಾದೇವಿ ರಸ್ತೆ, ಚಾಮರಾಜಪೇಟೆ, ಚೌಕಿಪೇಟೆ, ಮಂಡಿಪೇಟೆ, ಗಡಿಯಾರ ಕಂಬ, ಒಕ್ಕಲಿಗರ ಪೇಟೆ,

ಹಾಸಬಾವಿ ವೃತ್ತ, ವೀರಮದಕರಿ ವೃತ್ತದ ಮೂಲಕ ದೇವಿಯ ಉತ್ಸವ ನಡೆಯಲಿದೆ. ಸುರ್ಯೋದಯಕ್ಕೂ ಮೊದಲೇ ಚರಗ ಚೆಲ್ಲುವ ಕಾರ್ಯಕ್ರಮ ನಡೆಯಲಿದೆ.ಪರೀಕ್ಷೆ, ಚುನಾವಣೆ ಗುಂಗು; ಜಾತ್ರೆಗಿಲ್ಲ ರಂಗು..!

ಕಳೆದ ಎರಡು ಜಾತ್ರೆ ನಡೆದ ಸಂದರ್ಭದಲ್ಲೂ ರಾಜ್ಯದಲ್ಲಿ ಯಾವುದೇ ಚುನಾವಣೆಗಳು ನಡೆದಿರಲಿಲ್ಲ. ಆದರೆ, ಪ್ರಸ್ತುತ ನಡೆಯುತ್ತಿರುವ ಜಾತ್ರೆಗೆ ದ್ವಿತೀಯ ಪಿಯು ಪರೀಕ್ಷೆ ಹಾಗೂ ಲೋಕಸಭಾ ಚುನಾವಣೆ ಅಡ್ಡಿಯಾಗಿವೆ. ಮುಂಚೂಣಿಯಲ್ಲಿ ನಿಂತು ದೊಡ್ಡಪೂಜೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಭಕ್ತರು ಈ ಬಾರಿ ಚುನಾವಣೆ ಬಿಸಿಯಲ್ಲಿ ಇದ್ದಾರೆ.ಜತೆಗೆ, ಬುಧವಾರವೇ ದ್ವಿತೀಯ ಪಿಯು ಪರೀಕ್ಷೆಯೂ ಪ್ರಾರಂಭವಾಗಲಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯೂ ಬಹಳ ಹತ್ತಿರವೇ ಇದೆ. ವಿದ್ಯಾರ್ಥಿಗಳು ಪರೀಕ್ಷಾ ಸಿದ್ಧತೆಯಲ್ಲಿದ್ದರೆ, ದೊಡ್ಡವರಿಗೆ ಚುನಾವಣೆ ಗುಂಗು. ಹೀಗಾಗಿ, ದೇವಸ್ಥಾನದಲ್ಲಿ ಮಂಗಳವಾರ ಅಂತಹ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಕಂಡು ಬರಲಿಲ್ಲ.ಮೆರವಣಿಗೆಯಲ್ಲಿ ತಂದ ಮಚ್ಚು ವಶ

ಕೋಣಬಲಿ ನೀಡುವುದಕ್ಕಾಗಿ ಸಿದ್ದಗೊಳಿಸಿದ್ದ ಮಚ್ಚನ್ನು ಮಂಗಳವಾರ ಸಂಜೆ ಪೊಲೀಸರು ವಶಪಡಿಸಿಕೊಂಡ ಘಟನೆ ನಡೆಯಿತು. ಭಕ್ತರು ಕೋಣಬಲಿ ನೀಡುವ ಮಚ್ಚನ್ನು ಸಾಣೆ ಹಿಡಿದು ಸಜ್ಜುಗೊಳಿಸುತ್ತಿರುವ ಮಾಹಿತಿ ತಿಳಿದ ಪೊಲೀಸರು ದೇವಾಲಯದ ಆವರಣದಲ್ಲಿ ಮಚ್ಚು ವಶಪಡಿಸಿಕೊಂಡರು. ವಶಪಡಿಸಿಕೊಂಡಿರುವ ಮಚ್ಚನ್ನು ಪೊಲೀಸರಿಂದ ಮರಳಿ ಕೊಡಿಸುವಂತೆ ಭಕ್ತರು ಶಾಸಕ ಎಸ್‌.ಎಸ್.ಮಲ್ಲಿಕಾರ್ಜುನ್ ಅವರ ಬಳಿ ಅಲವತ್ತು ಕೊಂಡರು. ನಂತರ ಪೊಲೀಸರು ಅದನ್ನು ಎಸ್ಪಿ ಕಚೇರಿಗೆ ಕಳುಹಿಸಿಕೊಡಲಾಗಿದೆ. ಉತ್ಸವದ ನಂತರ ಮರುಳಿಸುವುದಾಗಿ ಹೇಳಿದರು ಎಂದು ತಿಳಿಸಿದರು.

ನೂಕುನುಗ್ಗಲು: ಮಂಗಳವಾರ ಬೆಳಿಗ್ಗೆ ದೇವಿಯ ದರ್ಶನ ಪಡೆಯಲು ಭಕ್ತರ ಉದ್ದನೆಯ ಸಾಲು ನಿರ್ಮಾಣಗೊಂಡಿತ್ತು. ದೇವಿ ದರ್ಶನ ಪಡೆಯಲು ಭಕ್ತರು ಅವಸರ ಮಾಡಿದ್ದರಿಂದ ಕ್ಷಣಕಾಲ ನೂಕುನುಗ್ಗಲು ಉಂಟಾಯಿತು.ದೇವಿದರ್ಶನ ಪಡೆದ ಎಸ್.ಎಸ್‌.ಮಲ್ಲಿಕಾರ್ಜುನ್‌ ಕುಟುಂಬ: ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಸಂಜೆ 4ಕ್ಕೆ ಶಾಸಕ

ಎಸ್.ಎಸ್.ಮಲ್ಲಿಕಾರ್ಜುನ್ ಪತ್ನಿ ಪ್ರಭಾ ಅವರೊಂದಿಗೆ ದೇವಾಲಯಕ್ಕೆ ಭೇಟಿ ನೀಡಿ ದುರ್ಗಾದೇವಿಯ ದರ್ಶನ ಪಡೆದರು.ಮರಳು ಹಾಸು ಶಾಸಕ ಅಸಮಾಧಾನ: ದುರ್ಗಾದೇವಿ ದೇಗುಲದ ಸುತ್ತಲೂ ಮರಳು ಹಾಸು ಹಾಕಿರುವ ಬಗ್ಗೆ ಶಾಸಕ ಎಸ್‌.ಎಸ್.ಮಲ್ಲಿಕಾರ್ಜುನ್ ದೇವಾಲಯ ಸಮಿತಿ ಸದಸ್ಯರ ಎದುರು ಅಸಮಾಧಾನ ವ್ಯಕ್ತಪಡಿಸಿದರು. ಕನಿಷ್ಠ ಮುಕ್ಕಾಲು ಅಡಿ ಎತ್ತರದವರೆಗೆ ಮರಳು ಹಾಸಬೇಕಿತ್ತು. ಇದು 6ಇಂಚು ಸಹ ಇಲ್ಲ. ಇದರಿಂದ ಭಕ್ತರಿಗೆ ಅನನುಕೂಲವಾಗಲಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದರು.ಮರಳು ಹಾಸು ಟೆಂಡರ್‌ಗೆ ರೂ. 2.20ಲಕ್ಷ ನೀಡಲಾಗಿದೆ. ಆದರೆ, ಸಾಕಷ್ಟು ಮರಳು ಹಾಸಿಲ್ಲ ಎಂದು ಕಾರ್ಯಕರ್ತರೊಬ್ಬರು ಹೇಳಿದರು. ಕೂಡಲೇ ಮತ್ತೊಂದು ಟ್ರ್ಯಾಕ್ಟರ್ ಮರಳು ಹಾಕಿಸಿ ಎಂದು ಶಾಸಕ ಮಲ್ಲಿಕಾರ್ಜುನ್ ಸಮಿತಿ ಸದಸ್ಯರಿಗೆ ಸೂಚಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.