ಮಂಗಳವಾರ, ಆಗಸ್ಟ್ 20, 2019
21 °C

ಗವಳಿ ಸಮಾಜದಿಂದ ಎಮ್ಮೆಗಳ ಓಟ

Published:
Updated:

ಬಾಗಲಕೋಟೆ: ಇತ್ತೀಚಿನ ದಿನಗಳಲ್ಲಿ ಕುದುರೆ ಓಟ, ಎತ್ತಿನ ಓಟ ನಡೆಸುವುದು ಸಾಮಾನ್ಯ. ಆದರೆ ನಗರೀಕರಣ ಜೀವನ ಮಧ್ಯೆಯೇ ಅಪರೂಪವೆನಿಸಿದ ಎಮ್ಮೆಗಳ ಓಟವನ್ನು ಇಂದಿನ ಆಧುನಿಕ ಯುಗದಲ್ಲೂ ಗವಳಿ ಸಮಾಜದ ವತಿಯಿಂದ ಸಂಪ್ರದಾಯದಂತೆ ನವನಗರದ ಸೆಕ್ಟರ್ ನಂ.29ರಲ್ಲಿ ನಡೆಸಲಾಯಿತು.ಕೈಯಲ್ಲಿ ಕೋಲನ್ನು ಹಿಡಿದು, ಹೆಗಲಲ್ಲಿ ಹಸಿರು ಟವಲ್ ಹೊತ್ತು ಕೇಕೆ ಹಾಕುತ್ತಾ ಎಮ್ಮೆಗಳ ಓಟವನ್ನು ನಡೆಸುವವರು ಗವಳಿ ಸಮಾಜದ ಕುಲಬಾಂಧವರು. ಪ್ರತಿವರ್ಷ ಬಾಗಲಕೋಟೆಯ ನವನಗರದಲ್ಲಿ ತಮ್ಮ ಆರಾಧ್ಯ ದೈವ ಮರಗಮ್ಮದೇವಿ ಜಾತ್ರೆಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ.`ನಮ್ಮ ಕುಲಕಸುಬು ಹಾಲು ಮಾರಾಟ. ಹೀಗಾಗಿ ನಮಗೆ ವರದಾನವಾಗಿರುವ ಎಮ್ಮೆಗಳನ್ನು ಬಣ್ಣಗಳಿಂದ ಅಲಂಕರಿಸಿ ನಂತರ ಅವುಗಳಿಗೆ ನೈವೇದ್ಯ ನೀಡಿ ನಂತರ ಅವುಗಳನ್ನು ದಾರಿಯ ಮಧ್ಯೆ ಓಟಕ್ಕೆ ಬಿಡಲಾಗುತ್ತದೆ. ಜಾತ್ರೆಗೆ ಬರುವ ಭಕ್ತರು ತಮ್ಮ ನೆಚ್ಚಿನ ಎಮ್ಮೆಗಳನ್ನು ತಂದು ಓಟಕ್ಕೆ ಹಚ್ಚಿ ತಾವೂ ಅದರಲ್ಲಿ ಭಾಗಿಯಾಗಿ ಅತ್ಯಂತ ಸಂತಸ ಪಡುತ್ತಾರೆ' ಎಂದು  ರಾಮಣ್ಣ ಲಂಗೋಟಿ ಹೇಳುತ್ತಾರೆ.ಇತ್ತೀಚಿನ ಕಂಪ್ಯೂಟರ್‌ದಂತಹ ಯುಗದಲ್ಲೂ ಕೂಡಾ ನಗರ ಪ್ರದೇಶದಲ್ಲಿ ಪ್ರತಿವರ್ಷ ಈ ಎಮ್ಮೆಗಳ ಓಟವನ್ನ ನಡೆಸಿಕೊಂಡು ಬರಲಾಗುತ್ತಿದೆ. ರಸ್ತೆಯ ಅಕ್ಕಪಕ್ಕದಲ್ಲಿ ನಿಂತು ಮನರಂಜನೆ ಪಡೆದು ಎಮ್ಮೆಗಳ ಓಟವನ್ನು ಕಂಡು ಹೆಮ್ಮೆಪಡುತ್ತಾರೆ. 10 ವರ್ಷಗಳಿಂದ ಎಮ್ಮೆಗಳ ಹಬ್ಬವನ್ನು ನಡೆಸೋದು ರೂಢಿಯಾಗಿದೆ ಎನ್ನುತ್ತಾರೆ ಸಿದ್ದು ಕಿರ್ಲೋಸ್ಕರ.ಪ್ರತಿವರ್ಷದಂತೆ ಈ ವರ್ಷವೂ ಗವಳಿ ಸಮಾಜದವರು ಮರಗಮ್ಮದೇವಿ (ಲಕ್ಷ್ಮೀದೇವಿ) ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಿದರು. ಜಾತ್ರಾ ಮಹೋತ್ಸವದ ನಿಮಿತ್ತ ದೇವಿಗೆ ವಿವಿಧ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ನಂತರ ಉಡಿತುಂಬುವ ಕಾರ್ಯಕ್ರಮ ಜರುಗಿತು.ಗವಳಿ ಸಮಾಜದ ಪ್ರಮುಖರಾದ ನಾಗೋಜಿ ಲಂಗೋಟಿ, ಬಾಬು ಗಡೆಪ್ಪ, ರಾಮ ಲಂಗೋಟಿ, ಅಂಬಾಜಿ ಕಿರ್ಲೋಸ್ಕರ, ರಾಜು ಲಂಗೋಟಿ, ರಾಜು ಗವಳಿ (ಗಡೆಪ್ಪನವರ), ವಿಠ್ಠಲ ನಾಮದೆ, ಸಿದ್ದು ನಾಮದೆ ಸೇರಿದಂತೆ ಜಾತ್ರಾ ಮಹೋತ್ಸವದಲ್ಲಿ ಅಪಾರ ಪ್ರಮಾಣದ ಮಹಿಳೆಯರೂ ಸೇರಿದ್ದರು.

 

Post Comments (+)