ಬುಧವಾರ, ಅಕ್ಟೋಬರ್ 23, 2019
22 °C

ಗವಿಮಠ ಜಾತ್ರೆ: ನಾಲ್ಕು ಲಕ್ಷ ಭಕ್ತರ ಆಗಮನ

Published:
Updated:
ಗವಿಮಠ ಜಾತ್ರೆ: ನಾಲ್ಕು ಲಕ್ಷ ಭಕ್ತರ ಆಗಮನ

ಕೊಪ್ಪಳ: ನಗರದ ಪ್ರತಿಷ್ಠಿತ ಹಾಗೂ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾದ ಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.ಶ್ರೀಮಠದ ಮುಖ್ವದ್ವಾರದ ಬಳಿ ಸಂಜೆ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ರಥೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಸುಮಾರು  4ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.ನಂತರ, ಭಕ್ತರ ಹರ್ಷೋದ್ಗಾರ, ಭಜನೆ, ವಾದ್ಯ ಮೇಳಗಳೊಂದಿಗೆ ಸಾಗಿದ ಸರ್ವಾಲಂಕೃತ ರಥ ಪಾದಗಟ್ಟೆಯನ್ನು ತಲುಪಿತು. ಪುನಃ ಶ್ರೀಮಠದ ಮುಂಭಾಗದಲ್ಲಿನ ಮೊದಲಿನ ಸ್ಥಾನಕ್ಕೆ ರಥವು ಬಂದು ನಿಲ್ಲುವವರೆಗೂ ಭಕ್ತರ ಉತ್ಸಾಹ, ಘೋಷಣೆಗಳು ನಿಂತಿರಲಿಲ್ಲ. ರಥವು ಪಾದಗಟ್ಟೆವರೆಗೆ ಸಾಗಿ ಪುನಃ ಮಠದ ಮಹಾದ್ವಾರದ ಬಳಿ ಬರುವವರೆಗೂ ಭಕ್ತರು ರಥದತ್ತ ಉತ್ತತ್ತಿ, ಬಾಳೆಹಣ್ಣುಗಳನ್ನು ಎಸೆದು, ಕೈಮುಗಿದು ಭಕ್ತಿ ಮೆರೆದರು.ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ, ಶಾಸಕರಾದ ಸಂಗಣ್ಣ ಕರಡಿ, ಪರಣ್ಣ ಮುನವಳ್ಳಿ, ಶಿವರಾಜ ತಂಗಡಗಿ, ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್, ನಗರಸಭಾ ಅಧ್ಯಕ್ಷ ಸುರೇಶ ದೇಸಾಯಿ, ನಗರಸಭಾ ಸದಸ್ಯರು, ಜಿಲ್ಲಾ ಪಂಚಾಯಿತಿ ಸದಸ್ಯರು, ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಸಿ.ಎಸ್.ಮಾಳಗಿ, ನ್ಯಾಯಾಧೀಶರಾದ ಎಲ್.ಬಿ.ಜಂಬಗಿ, ಶಿವರಾಮ ಕೆ., ಲಕ್ಷ್ಮೀನಾರಾಯಣ ಭಟ್, ಸಹಾಯಕ ಆಯುಕ್ತ ಎಂ.ಶರಣಬಸಪ್ಪ, ನಗರಸಭೆ ಆಯುಕ್ತರಾದ ಅಶ್ವಿನಿ ಬಿ.ಎಂ. ಮತ್ತಿತರರು ಅಧಿಕಾರಿಗಳು ಹಾಜರಿದ್ದರು.ಗವಿಸಿದ್ಧೇಶ್ವರ ಸ್ವಾಮೀಜಿ, ಚಳಗೇರಿ ಅರಳೆಲೆಕಟ್ಟಿಮನಿ ಹಿರೇಮಠದ ವೀರಸಂಗಮೇಶ್ವರ ಸ್ವಾಮೀಜಿ, ಮಂಗಳೂರು ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಗುಡದೂರು ಹಿರೇಮಠದ ನೀಲಕಂಠಯ್ಯ ತಾತನವರು, ಸುಳೇಕಲ್ ಬೃಹನ್ಮಠದ ಭುವನೇಶ್ವರಯ್ಯ ತಾತನವರು ಸೇರಿದಂತೆ ವಿವಿಧ ಮಠಾಧೀಶರು ರಥೋತ್ಸವಕ್ಕೆ ಸಾಕ್ಷಿಯಾದರು.ಭದ್ರತೆ: ರಥೋತ್ಸವ ನಡೆಯುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಜಿಲ್ಲಾ ಪೊಲೀಸ್ ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿತ್ತು. ರಥದ ಸುತ್ತ ಹಾಗೂ ಮುಂದೆ ಸುಮಾರು 20-25 ಅಡಿಗಳಷ್ಟು ದೂರದ ವರೆಗೂ ಕ್ಷಿಪ್ರ ಕಾರ್ಯಾಚರಣೆ ಪಡೆಯ ಪೊಲೀಸರು ಹಗ್ಗದಿಂದ ತಡೆಗೋಡೆ ನಿರ್ಮಿಸಿದ್ದರು.ಉತ್ಸಾಹ ಹಾಗೂ ರಥಕ್ಕೆ ನಮಸ್ಕರಿಸುವ ಭರದಲ್ಲಿ ಜನರು ಮುನ್ನುಗ್ಗಿದ ಸಂದರ್ಭದಲ್ಲಿ ಅನಾಹುತ ಸಂಭವಿಸದಂತೆ ಮಾಡಲು ಈ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆ, ರಾಜ್ಯದ ವಿವಿಧ ಭಾಗಗಳಿಂದ ಅಲ್ಲದೇ ಹೊರ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಧನ್ಯತಾ ಭಾವ ಅನುಭವಿಸಿದರು. ಯಾವ ಕಡೆ ಕಣ್ಣು ಹಾಯಿಸಿದರೂ ಜನರೇ ಕಾಣುತ್ತಿದ್ದರು.ರಥೋತ್ಸವ ಪೂರ್ಣಗೊಂಡ ನಂತರ ಶ್ರೀಮಠದ ಪಕ್ಕದಲ್ಲಿನ ಕೈಲಾಸ ಮಂಟಪದಲ್ಲಿ `ಅನುಭಾವಿಗಳ ಅಮೃತ~ ಎಂಬ ಚಿಂತನಗೋಷ್ಠಿ ನಡೆಯಿತು.ಅಲ್ಲದೇ, ರಥವು ಮೊದಲಿನ ಸ್ಥಾನಕ್ಕೆ ಬಂದ ನಂತರ ಭಕ್ತರು ಗದ್ದುಗೆ ದರ್ಶನ ಪಡೆದರು. ಗವಿಸಿದ್ಧೇಶ್ವರ ಪ್ರೌಢಶಾಲೆಯ ಮೈದಾನದಲ್ಲಿನ ಅಂಗಡಿಗಳಲ್ಲಿ ವ್ಯಾಪಾರ ಸಹ ಆರಂಭಗೊಂಡಿತಲ್ಲದೇ, ಮನರಂಜನಾ ಸಾಧನಗಳತ್ತಲೂ ಜನ ದೌಡಾಯಿಸುತ್ತಿರುವುದು ಸಾಮಾನ್ಯ ದೃಶ್ಯವಾಗಿತ್ತು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)