ಶುಕ್ರವಾರ, ಜನವರಿ 24, 2020
27 °C

ಗವಿಮಠ ಜಾತ್ರೆ- ವೈವಿಧ್ಯ ಸಂಗಮ

ಪ್ರಜಾವಾಣಿ ವಾರ್ತೆ ಭೀಮಸೇನ ಚಳಗೇರಿ Updated:

ಅಕ್ಷರ ಗಾತ್ರ : | |

ಕೊಪ್ಪಳ: ಗವಿಮಠವು ತ್ರಿವಿಧ ದಾಸೋಹಕ್ಕೆ, ಭಕ್ತರ ಆಶಯಕ್ಕೆ ಸದಾ ಸ್ಪಂದಿಸುತ್ತದೆ. ಸಮಾಜದ ಸ್ವಾಸ್ಥ್ಯಕ್ಕೆ ತುಡಿಯುತ್ತದೆ ಎಂಬುದನ್ನು ಜ. 7ರಿಂದ ಆರಂಭಗೊಂಡಿರುವ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಮೂಲಕ ಶ್ರೀಮಠವು ಮತ್ತೊಮ್ಮೆ ಗಟ್ಟಿಯಾಗಿ ಹೇಳಿದೆ.ಅಲ್ಲದೇ, ಭಕ್ತರು ಭಕ್ತಿರೂಪದಲ್ಲಿ ಅರ್ಪಿಸಿದ ರೊಟ್ಟಿ, ತರಕಾರಿ, ಮಾದಲಿ, ಅಕ್ಕಿ, ಬೂಂದಿ ಮತ್ತಿತರ ಖಾದ್ಯಗಳನ್ನು ಪುನಃ ಭಕ್ತರಿಗೇ ಪ್ರಸಾದ ರೂಪದಲ್ಲಿ ಹಂಚುವ ಮೂಲಕ ಗವಿಮಠವು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ ಎಂದೇ ಹೇಳಬಹುದು. ಈಗಿನ ಪೀಠಾಧಿಪತಿ ಗವಿಸಿದ್ಧೇಶ್ವರ ಸ್ವಾಮೀಜಿ ಅವರೇ ಹೇಳಿರುವಂತೆ 5 ವರ್ಷಗಳ ಹಿಂದೆ ಕೇವಲ 80 ಕ್ವಿಂಟಲ್ ಅಕ್ಕಿಯಿಂದ ಆರಂಭಗೊಂಡಿದ್ದ ದಾಸೋಹಕ್ಕೆ ಈಗ ಸಾವಿರಾರು ಕ್ವಿಂಟಲ್ ಅಕ್ಕಿ ಅರ್ಪಣೆಯಾಗುತ್ತಿದೆ. ಕಳೆದ ವರ್ಷ 10 ಲಕ್ಷ ರೊಟ್ಟಿಗಳು ಸಮರ್ಪಣೆಗೊಂಡಿದ್ದರೆ ಈ ಬಾರಿ ಈ ಸಂಖ್ಯೆ 12 ಲಕ್ಷ ಮುಟ್ಟಿದೆ. ಇದು ಈ ಭಾಗದ ಭಕ್ತರು ಶ್ರೀಮಠದ ಬಗ್ಗೆ ಹೊಂದಿರುವ ವಿಶ್ವಾಸ-ಭಕ್ತಿಯ ಪ್ರತೀಕ. ಭಕ್ತರ ಈ ಪ್ರೀತಿ, ಅಭಿಮಾನಕ್ಕೆ ಕುಂದು ಬರದಂತೆ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿರುವ ಗವಿಮಠ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಸಹ ಅಷ್ಟೇ ಸಮರ್ಥವಾಗಿ ಹಾಗೂ ಜವಾಬ್ದಾರಿಯಿಂದ ನಿಭಾಯಿಸುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ.ಧಾರ್ಮಿಕ ವಿಚಾರಗಳನ್ನು ಜನರಿಗೆ ತಲುಪಿಸುವ ಸಲುವಾಗಿ ಈ ಜಾತ್ರಾ ಮಹೋತ್ಸವದಲ್ಲಿಯೂ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು.ಸಂಗೀತ ಕ್ಷೇತ್ರದಲ್ಲಿ ಖ್ಯಾತ ನಾಮರಿಂದ ರಸದೌತಣ, ಗಂಗಾವತಿ ಪ್ರಾಣೇಶ, ರಿಚರ್ಡ್ ಲೂಯಿಸ್ ಅವರ ಹಾಸ್ಯ ಸಂಜೆ ಕಾರ್ಯಕ್ರಮ ಜಾತ್ರೆಗೆ ಕಳೆ ಕಟ್ಟಿತ್ತು.ಇನ್ನು, ದೇಶ ಭಕ್ತಿ ಕುರಿತಂತೆ ಚಕ್ರವರ್ತಿ ಸೂಲಿಬೆಲೆ ಅವರಿಂದ ವಿಚಾರ ಪ್ರಚೋದಕ ಮಾತುಗಳು ಜಡಗೊಂಡ ಮನಸ್ಸುಗಳಿಗೆ ಚಿಕಿತ್ಸೆ ನೀಡಿ ಚೈತನ್ಯ ತುಂಬುವಂತಿದ್ದವು. ಸಾಣೆಹಳ್ಳಿಯ ಶಿವಕುಮಾರ ತಂಡದಿಂದ ಪ್ರದರ್ಶನಗೊಂಡ ನಾಟಕಗಳು ಮನರಂಜನೆ ಜೊತೆಗೆ ಚಿಂತನೆಗೆ ಹಚ್ಚುವಂತಿದ್ದವು.ಇವಿಷ್ಟು ಶ್ರೀಮಠದಿಂದ ನಡೆದ ಕಾರ್ಯಕ್ರಮಗಳ ಹಾಗೂ ಶ್ರೀಮಠದೊಳಗಿನ ಚಿತ್ರಣವಾದರೆ, ಜಾತ್ರೆಯಲ್ಲಿ ತಳಯೂರಿರುವ ಅಂಗಡಿಗಳು, ಮಾರಾಟದ್ದೇ ಮತ್ತೊಂದು ಜಗತ್ತು.ಪ್ರತಿ ವರ್ಷ ಪ್ರಚಲಿತ ವಿಷಯ ಕುರಿತು ಮಿಠಾಯಿಗಳಿಂದಲೇ ಬರೆದು ಗಮನ ಸೆಳೆಯುವ ಹಾಜಿ ಅಬ್ದುಲ್ ರಶೀದ್‌ಸಾಬ್ ಅವರು, ಈ ಬಾರಿ ಜನಲೋಕಪಾಲ್ ಮಸೂದೆ ಬೇಕು ಎಂದು ಬರೆದಿದ್ದರು. ಇನ್ನು, ಮಕ್ಕಳ ಆಟಿಕೆ ಸಾಮಾನುಗಳು, ಅರಿಶಿಣ-ಕುಂಕುಮ, ಹಣ್ಣಿನ ರಸ, ಐಸ್‌ಕ್ರೀಮ್, ಪಾತ್ರೆ-ಪಗಡೆಗಳ ಮಾರಾಟವೂ ಇತ್ತು. ಆದರೆ, ಮಾರಾಟಕ್ಕಿಟ್ಟಿದ್ದ ಬಳೆಗಳ ಹೆಸರುಗಳು ಗಮನ ಸೆಳೆಯುವಂತಿದ್ದವು. ಈ ಸಲದ ಜಾತ್ರೆಯಲ್ಲಿ ಮಾರಾಟಗೊಂಡ ಬಳೆಗಳಿಗೆ ಧಾರಾವಾಹಿಗಳ ಹೆಸರನ್ನು ಇಡಲಾಗಿತ್ತು.ಕಾದಂಬರಿ, ಜೋಕಾಲಿ, ಕುಂಕುಮ, ಮಾಂಗಲ್ಯ ಹೆಸರಿನ ಬಳೆಗಳನ್ನು ಖರೀದಿಸಲು ಹೆಂಗಳೆಯರು ಮುಗಿ ಬಿದ್ದದ್ದು ಸಹ ವಿಶೇಷವಾಗಿತ್ತು.ಇನ್ನು, ಲಕ್ಷಾಂತರ ಜನರು ಬಂದು-ಹೋಗುವ ಜಾತ್ರೆಯಲ್ಲಿ ಮೊಬೈಲ್ ಸಿಗ್ನಲ್ ಸಿಗುವುದು ಕಷ್ಟ. ಆದರೆ, ಖಾಸಗಿ ಮೊಬೈಲ್ ಸೇವಾ ಕಂಪೆನಿಯೊಂದು ಸಿಗ್ನಲ್ ತೊಂದರೆ ಆಗಬಾರದು ಎಂಬ ದೃಷ್ಟಿಯಿಂದ ಶ್ರೀಮಠದ ಆವರಣದಲ್ಲಿ ತಾತ್ಕಾಲಿಕ ಟವರ್ ಅಳವಡಿಸಿ ಗ್ರಾಹಕರನ್ನು ಸೆಳೆಯುವ ಯತ್ನವನ್ನೂ ಮಾಡಿದೆ.ವರ್ಷದಿಂದ ವರ್ಷಕ್ಕೆ ಹೆಚ್ಚು ಜನರನ್ನು ಸೆಳೆಯುತ್ತಿರುವ, ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜದ ಎಲ್ಲ ವರ್ಗದ ಜನರಿಗೆ ಸ್ಪಂದಿಸುತ್ತಿರುವ ಗವಿಮಠದ ಜಾತ್ರಾ ಮಹೋತ್ಸವ ಒಂದರ್ಥದಲ್ಲಿ ಸಾಂಸ್ಕೃತಿಕ-ಧಾರ್ಮಿಕ ಕಾರ್ಯಗಳ ಸಂಗಮ, ಹಾಸ್ಯ-ನಾಟಕ-ಸಂಗೀತದ ಸಮ್ಮಿಲನ ಸಂಭ್ರಮ.

ಪ್ರತಿಕ್ರಿಯಿಸಿ (+)