ಗಸ್ತು ತಿರುಗುವ ಪೊಲೀಸರಿಗೆ ಬರೀ ಸ್ವೆಟರ್, ಟಾರ್ಚ್

7

ಗಸ್ತು ತಿರುಗುವ ಪೊಲೀಸರಿಗೆ ಬರೀ ಸ್ವೆಟರ್, ಟಾರ್ಚ್

Published:
Updated:

ಧಾರವಾಡ: `ಕರ್ನಾಟಕ ಪೊಲೀಸರಿಗೆ ಸರಿಯಾದ ರೀತಿಯಲ್ಲಿ ಸಮವಸ್ತ್ರ ಹಾಗೂ ಬೂಟುಗಳು ಪೂರೈಕೆಯಾಗುತ್ತಿಲ್ಲ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ದೀಪಕ ರೇಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು ಎರಡು ಮೂರು ವರ್ಷಗಳಿಗೊಮ್ಮೆ ಇವುಗಳನ್ನು ಪೂರೈಕೆ ಮಾಡಲಾಗುತ್ತಿದೆ. ಆರೋಗ್ಯ ವಿಮೆ ಹಾಗೂ ರಾತ್ರಿ ಸಮಯದಲ್ಲಿ ಊಟದ ಖರ್ಚನ್ನು ಸರ್ಕಾರ ವಿತರಿಸುತ್ತಿಲ್ಲ. ಒಟ್ಟಾರೆ ಮೂಲಸೌಲಭ್ಯಗಳು ಪೊಲೀಸರಿಗೆ ದೊರಕುತ್ತಿಲ್ಲ ಎಂದರು.`ದಿನವಿಡಿ ನಾಗರಿಕರ ರಕ್ಷಣೆಗೆ ಕಂಕಣ ಬದ್ಧರಾಗಿ ಸೇವೆ ಸಲ್ಲಿಸುವ ಪೊಲೀಸ್ ಸಿಬ್ಬಂದಿಗೆ ಅವಶ್ಯ ಸೌಲಭ್ಯಗಳು ಸಿಗುತ್ತಿಲ್ಲ ಎಂಬುದು ನಾನು ಪಡೆದ ಮಾಹಿತಿಯಿಂದ ತಿಳಿದು ಬಂದಿದೆ. ರಾತ್ರಿ ಸಮಯದಲ್ಲಿ ಗಸ್ತು ತಿರುಗುವ ಸಿಬ್ಬಂದಿಗೆ ಕೇವಲ ಸ್ವೇಟರ್ ಮತ್ತು ಟಾರ್ಚ್ ಒದಗಿಸಿರುವುದಾಗಿ ಪೊಲೀಸ್ ಆಯುಕ್ತರು ಹೇಳುತ್ತಾರೆ. ಆದರೆ ಸಮವಸ್ತ್ರ, ಬೂಟು, ಆರೋಗ್ಯ ವಿಮೆ, ಸೇವೆಗೆ ತಕ್ಕ ವೇತನ, ಆಧುನಿಕ ಶಸ್ತ್ರಗಳನ್ನು ಇಲಾಖೆ ಕೆಳ ಹಂತದ ಸಿಬ್ಬಂದಿಗೆ ಸಮರ್ಪಕವಾಗಿ ವಿತರಿಸುತ್ತಿಲ್ಲ ಎಂದು ದೂರಿದರು.ಪೊಲೀಸ್ ಸಿಬ್ಬಂದಿ ಕುಟುಂಬ ವಾಸಿಸುವ ವಸತಿ ಗೃಹಗಳಲ್ಲಿ ಮೂಲ ಸೌಕರ್ಯಗಳಿಲ್ಲ. ಮನೆಗಳನ್ನು ಹೆಂಚಿನಿಂದ ಸಿದ್ಧಪಡಿಸಿರುವುದರಿಂದ ಅವುಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ರಿಪೇರಿ ಮಾಡಬೇಕಾಗಿದೆ. ಪ್ರಸ್ತುತ ಅಪರಾಧ ಚಟುವಟಿಕೆಗಳು ವಿಭಿನ್ನ ಸ್ವರೂಪದಲ್ಲಿ ನಡೆಯುತ್ತಿವೆ.

 

ಹೀಗಾಗಿ ಅಂತಹ ಅಪರಾಧ ಕೃತ್ಯಗಳನ್ನು ಮಟ್ಟಹಾಕಲು ಪೊಲೀಸ್ ಸಿಬ್ಬಂದಿಗೆ ಸದ್ಯದ ಸ್ಥಿತಿಯಲ್ಲಿ ಸಾಧ್ಯವೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಈ ನಿಟ್ಟಿನಲ್ಲಿ ನಾನು ಇಲಾಖೆಯ ವಿವಿಧ ಮೂಲಗಳಿಂದ ಮಾಹಿತಿ ಪಡೆದುಕೊಳ್ಳುವೆ ಎಂದರು.`ವಿವಿಧ ಸಂಘಟನೆಗಳು ಹಾಗೂ ಸರ್ಕಾರದ ಅನೇಕ ನೌಕರಸ್ಥರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ಮಾಡುತ್ತಾರೆ. ಪೊಲೀಸರು ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ಮಾಡುವುದಿಲ್ಲ. ಆದ್ದರಿಂದ ಸರ್ಕಾರ ಈ ಕುರಿತು ಸೂಕ್ತ ಕ್ರಮ ಜರುಗಿಸುವ ನಿಟ್ಟಿನಲ್ಲಿ ಗಮನ ಹರಿಸದಿದ್ದರೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸುವುದು ಸೇರಿದಂತೆ ಮಾನವ ಹಕ್ಕು ಆಯೋಗಕ್ಕೂ ದೂರು ಸಲ್ಲಿಸುವುದಾಗಿ~ ಅವರು ಹೇಳಿದರು. ಗೋವಿಂದ ಇಂಚೂರ ಗೋಷ್ಠಿಯಲ್ಲಿದ್ದರು.             

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry