ಗಾಂಗ್‌ನಾಮ್ ಡಾನ್ಸ್ ಕ್ರೇಜ್

7

ಗಾಂಗ್‌ನಾಮ್ ಡಾನ್ಸ್ ಕ್ರೇಜ್

Published:
Updated:

ಹಾರ್ಡ್ ರಾಕ್ ಡಾನ್ಸ್ ಫ್ಲೋರ್‌ನಿಂದ ಹಿಡಿದು ಗಣೇಶ ವಿಸರ್ಜನೆಯ ಬ್ಯಾಂಡ್ ಮುಂದೆ ಕುಣಿಯುವ ಹುಡುಗರವರೆಗೆ `ಗೇಲ್ ಡಾನ್ಸ್~ ಕ್ರೇಜ್. ಎಲ್ಲರೂ ಕಾಲು ಕೈಗಳನ್ನು ಕ್ರಾಸ್ ಮಾಡಿಕೊಂಡು ಕುಣಿಯತೊಡಗಿದ್ದಾರೆ. ಅಣ್ಣಾ ಬಾಂಡ್ ಕನ್ನಡ ಹಾಡಿಗೂ ಹಾಗೆಯೇ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ ಉದ್ಯಾನನಗರಿಯ ಯುವಕರು.ಭಾರತ-ಪಾಕಿಸ್ತಾನ ನಡುವಣ ಟ್ವೆಂಟಿ-20 ಪಂದ್ಯವನ್ನು ಕ್ಲಬ್‌ವೊಂದರಲ್ಲಿನ ಬೃಹತ್ ಪರದೆಯ ಮೇಲೆ ವೀಕ್ಷಿಸುತ್ತಿದ್ದ ಡ್ರಮ್ಮು ಹೊಟ್ಟೆಯ ಮಹನೀಯರು ಕೂಡ ಇದೇ ಕತ್ತರಿಗಾಲು ಡಾನ್ಸ್ ಮಾಡುವ ಸಾಹಸ ಮಾಡಿದ್ದರು.ಎಲ್ಲರೂ `ಗೇಲ್ ಡಾನ್ಸ್~ ಎಂದು ಉತ್ಸಾಹದಿಂದ ಅನುಕರಣೆ ಮಾಡಿದ್ದೂ ವಿಶೇಷ. ಪುಟಾಣಿ ಮಕ್ಕಳು ಕೂಡ ಎರಡು ವಾರದಿಂದೀಚೆಗೆ ಶಾಲೆ ಮೈದಾನದಲ್ಲಿ ಕ್ರಿಕೆಟ್ ಆಡುವಾಗ ವಿಕೆಟ್ ಪಡೆದಾಗ ಗೇಲ್ ರೀತಿಯಲ್ಲಿಯೇ ಹೆಜ್ಜೆ ಹಾಕತೊಡಗಿದ್ದಾರೆ. `ಗೇಲ್ ನ್ಯೂ ಡಾನ್ಸ್~ ಎಂದು ಇಂಗ್ಲೆಂಡ್‌ನ ಪತ್ರಿಕೆಗಳು ಕೂಡ ಈ ಸಿಂಪಲ್ ಸ್ಟೆಪ್ಪನ್ನು ವರ್ಣಿಸಿವೆ.ಹೀಗೆ ಅಲ್ಪ ಕಾಲದಲ್ಲಿ ಅದ್ಭುತ ಎನ್ನುವ ಮಟ್ಟದ ಪ್ರಚಾರ ಪಡೆದ `ಗೇಲ್ ಡಾನ್ಸ್~ ನಿಜವಾಗಿಯೂ ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಸೃಷ್ಟಿ ಅಲ್ಲ. ಇದು ದಕ್ಷಿಣ ಕೊರಿಯಾದ ರ‌್ಯಾಪ್ ಕಲಾವಿದ ಪಾರ್ಕ್ ಜಾನ್ ಸಾಂಗ್ ಅವರ ವಿಶಿಷ್ಟ ಪ್ರಯೋಗ. `ಗಾಂಗ್‌ನಾಮ್ ಸ್ಟೈಲ್~ ಎನ್ನುವ ಏಕವ್ಯಕ್ತಿ ಗಾನ-ನರ್ತನದ ವೀಡಿಯೊದಲ್ಲಿನ ಹೆಜ್ಜೆಯನ್ನೇ ಗೇಲ್ ಅನುಕರಿಸುತ್ತಿದ್ದಾರೆ.ಆದರೆ, ಸಾಂಗ್ ಅವರ ಮೂಲ ನೃತ್ಯಕ್ಕಿಂತ ಗೇಲ್ ಮಾಡಿರುವ ಅನುಕರಣೆ ಕ್ರಿಕೆಟ್ ಪ್ರೇಮಿಗಳಿಗೆ ಮೆಚ್ಚುಗೆಯಾಗಿದೆ. ಆದ್ದರಿಂದಲೇ ಈ ಸ್ಟೆಪ್‌ನ ಕ್ರೆಡಿಟ್ ಈಗ ಗೇಲ್ ಖಾತೆಗೆ ಸೇರಿಕೊಂಡಿದೆ.ಈ ನೃತ್ಯದ ನಿಜವಾದ ಸೊಗಸು ಕಾಣಬೇಕೆಂದರೆ `ಪ್ಸಿ~ ಅವರ `ಗಾಂಗ್‌ನಾಮ್ ಸ್ಟೈಲ್~ ವೀಕ್ಷಿಸಲೇಬೇಕು. ಕಳೆದ ಜುಲೈ 15ರಂದು ಬಿಡುಗಡೆಯಾದ ಈ ಹಾಡಿನ ವೀಡಿಯೊ ಜನರಿಗೆ ಎಷ್ಟೊಂದು ಇಷ್ಟವಾಯಿತೆಂದರೆ ಈಗಾಗಲೇ `ಯುಟ್ಯೂಬ್~ನಲ್ಲಿ ಮೂವತ್ತು ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಅಷ್ಟೇ ಅಲ್ಲ, `ಕೆ-ಪಾಪ್~ ಚಾರ್ಟ್‌ನಲ್ಲಿ ಕಳೆದು ಎರಡು ತಿಂಗಳಿಂದ ಟಾಪ್‌ನಲ್ಲಿಯೇ ಇದೆ. ವಿಶ್ವಮಟ್ಟದಲ್ಲಿಯೂ ಇದರ ಜನಪ್ರಿಯತೆ ಏರಿಕೆಯಲ್ಲಿದೆ.ಇನ್ನೊಂದು ವಿಶೇಷವೆಂದರೆ ಕ್ಯಾಟಿ ಪೆರ‌್ರಿ, ಬ್ರಿಟ್ನಿ ಸ್ಪೀಯರ್ಸ್ ಹಾಗೂ ಟಾಮ್ ಕ್ರೂಸ್ ಅವರಂಥ ಖ್ಯಾತ ತಾರೆಗಳು ಕೂಡ ಅಂತರ್ಜಾಲದಲ್ಲಿನ ತಮ್ಮ ಪ್ರೊಫೈಲ್‌ನಲ್ಲಿ `ಗ್ಯಾಂಗ್‌ನಾಮ್ ಸ್ಟೈಲ್~ಗೆ ನೆಚ್ಚಿನ ವೀಡಿಯೊ ಸ್ಥಾನ ನೀಡಿದ್ದಾರೆ. ವಾಲ್ ಸ್ಟ್ರೀಟ್ ಜರ್ನಲ್ ಕೂಡ ಇದಕ್ಕೆ ಅಗ್ರಪಟ್ಟ ನೀಡಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡೆದ ಸಾಂಗ್ ಹಾಡನ್ನು ಬೆಂಗಳೂರಿನ ಪಾಪ್ ಸಂಗೀತ ಪ್ರಿಯರೂ ಗುನುಗುತ್ತಿದ್ದಾರೆ.ತಿಂಗಳ ಹಿಂದೆ ಕೇವಲ ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ ಮಂದಿಯ ನಡುವೆ ಮಾತ್ರ ಸುಳಿದಾಡಿದ್ದ `ಗ್ಯಾಂಗ್‌ನಾಮ್ ಸ್ಟೈಲ್~ ಈಗ ಬೀದಿಯಲ್ಲಿ ಆಡುವ ಮಕ್ಕಳಿಗೂ ಅಚ್ಚುಮೆಚ್ಚು. ಅದಕ್ಕೆ ಕಾರಣ ಕ್ರಿಸ್ ಗೇಲ್ ಕ್ರಿಕೆಟ್ ಅಂಗಳದಲ್ಲಿ ಈ ಶೈಲಿಯನ್ನು ಅನುಕರಣೆ ಮಾಡಿದ್ದು. ನಿಧಾನವಾಗಿ ಗೇಲ್‌ಗೆ ಇಷ್ಟವಾದ ಈ ಪಾಪ್ ಗೀತೆಯ ನಿನಾದವು ಚೆಂಡು-ದಾಂಡಿನ ಆಟವನ್ನು ಇಷ್ಟಪಡುವ ಜನರ ಮನದ ಮನೆಯಲ್ಲಿ ಸದ್ದು ಮಾಡುತ್ತಿದೆ.ಯಾರಿದು `ಪಿಎಸ್‌ವೈ~?

`ಪ್ಸಿ~ (ಪಿಎಸ್‌ವೈ) ಇದು ಹೆಸರಲ್ಲ. `ಪ್ಸಿ~ ಎನ್ನುವ ದಕ್ಷಿಣ ಕೊರಿಯಾದ ಜನಪ್ರಿಯ ಸಂಗೀತ ಪ್ರದರ್ಶನ ತಂಡ. ಅದೇ ರ‌್ಯಾಪ್ ಡಾನ್ಸರ್ ಹಾಗೂ ಸಿಂಗರ್ ಪಾರ್ಕ್ ಜಾನ್ ಸಾಂಗ್ ಅವರ ಹೆಸರಿನೊಂದಿಗೆ ಅಂಟಿಕೊಂಡಿದೆ. ಹಾಸ್ಯದ ಲೇಪದೊಂದಿಗೆ ಗಾನಸುಧೆ ಹರಿಸುತ್ತ ಬಂದ ಸಾಂಗ್ ಅತಿ ಕಡಿಮೆ ಅವಧಿಯಲ್ಲಿ ಖ್ಯಾತಿಯ ಎತ್ತರಕ್ಕೆ ಏರಿದವರು.ಮೂವತ್ನಾಲ್ಕು ವರ್ಷ ವಯಸ್ಸಿನ, ಗುಂಡು ಗುಂಡಾಗಿರುವ ಯುವಕನ `ಎಕ್ಸ್‌ಟ್ರಾ~, `ಗುಡ್ ಸಂಡೆ~, `ಎಕ್ಸ್-ಮ್ಯಾನ್~, `ದಿ ಟುಡೆ~ ಶೋಗಳನ್ನು ಕಲಾ ಪ್ರೇಮಿಗಳು ಮೆಚ್ಚಿಕೊಂಡಿದ್ದಾರೆ. `ಗಾಂಗ್‌ನಾಮ್ ಸ್ಟೈಲ್~ ಅಂತೂ ಮಕ್ಕಳಿಂದ ಮುದುಕರವರೆಗೆ ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಈ ವೀಡಿಯೊ ವೀಕ್ಷಿಸಲು http://www.youtube.com/watch?v=9bZkp7q19f0 ನಲ್ಲಿ ಕ್ಲಿಕ್ ಮಾಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry