ಗಾಂಜಾ ಗಿಡಗಳನ್ನು ಬೆಳೆದ ಆರೋಪಿಯ ಬಂಧನ

7

ಗಾಂಜಾ ಗಿಡಗಳನ್ನು ಬೆಳೆದ ಆರೋಪಿಯ ಬಂಧನ

Published:
Updated:

ಬೆಂಗಳೂರು: ಜಮೀನಿನಲ್ಲಿ ಬೆಳೆಗಳ ಮಧ್ಯೆ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪದ ಮೇಲೆ ಗದಗ ಜಿಲ್ಲೆಯ ಜಕ್ಕಲಿ ಗ್ರಾಮದ ಅಶೋಕ್ (52) ಎಂಬುವರನ್ನು ಸಿಐಡಿ ಮಾದಕ ದ್ರವ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ಆರೋಪಿಯಿಂದ ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ 34 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆತ ಮೆಣಸಿನಕಾಯಿ ಮತ್ತು ಈರುಳ್ಳಿ ಬೆಳೆಯ ಮಧ್ಯೆ ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ. ಈ ಬಗ್ಗೆ ಮಾಹಿತಿ ಕಲೆ ಹಾಕಿ ಆತನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಯು ಹಲವು ವರ್ಷಗಳಿಂದ ಇದೇ ರೀತಿ ಗಾಂಜಾ ಬೆಳೆಯುತ್ತಿದ್ದಾಗಿ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾನೆ. ಆತನ ವಿರುದ್ಧ ಮಾದಕ ದ್ರವ್ಯ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

 

ಆರೋಪಿಯನ್ನು ಬಂಧಿಸಿರುವ ಪೊಲೀಸ್ ಸಿಬ್ಬಂದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಿಐಡಿ ಡಿಜಿಪಿ ಶಂಕರ ಬಿದರಿ ಅವರು ಸಿಬ್ಬಂದಿಗೆ 10 ಸಾವಿರ ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ.ಸರಗಳವು: ವಾಯುವಿಹಾರ ಮಾಡುತ್ತಿದ್ದ ಮಹಿಳೆಯ ಚಿನ್ನದ ಸರವನ್ನು ದುಷ್ಕರ್ಮಿಗಳು ಕಿತ್ತುಕೊಂಡು ಪರಾರಿಯಾದ ಘಟನೆ ತ್ಯಾಗರಾಜನಗರದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.ತ್ಯಾಗರಾಜನಗರ ಎಂಟನೇ ತಿರುವಿನಲ್ಲಿರುವ ಗೌರಿ ವಿಲ್ಲಾ ಅಪಾರ್ಟ್‌ಮೆಂಟ್ ನಿವಾಸಿ ಕೌಸಲ್ಯಾ ಸರ ಕಳೆದುಕೊಂಡವರು. ಅವರು ಬೆಳಿಗ್ಗೆ ಏಳು ಗಂಟೆ ಸುಮಾರಿಗೆ ಅಪಾರ್ಟ್‌ಮೆಂಟ್‌ನ ಸಮೀಪವೇ ವಾಯುವಿಹಾರ ಮಾಡುತ್ತಿದ್ದರು. ಬೈಕ್‌ನಲ್ಲಿ ಬಂದ ಇಬ್ಬರು ಅವರ ಸರ ದೋಚಿದ್ದಾರೆ. ಸರ 80 ಗ್ರಾಂ ತೂಕದ್ದು ಎಂದು ಪೊಲೀಸರು ತಿಳಿಸಿದ್ದಾರೆ. ತ್ಯಾಗರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಳವು: ಮನೆಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು 70 ಗ್ರಾಂ ಚಿನ್ನಾಭರಣ ಕಳವು ಮಾಡಿರುವ ಘಟನೆ ಕೆ.ಆರ್.ಪುರದ ಎಸಿಎಲ್ ಲೇಔಟ್‌ನಲ್ಲಿ ಗುರುವಾರ ನಡೆದಿದೆ.ಮನೆಯ ಮಾಲೀಕ ಚಂದ್ರಶೇಖರ್ ಎಂಬುವರು ಈ ಬಗ್ಗೆ ದೂರು ಕೊಟ್ಟಿದ್ದಾರೆ.ಚಂದ್ರಶೇಖರ್ ಅವರು ಬೆಳಿಗ್ಗೆ ಎಂಟು ಗಂಟೆಗೆ ಕೆಲಸಕ್ಕೆ ಹೋಗಿದ್ದರು. ಅವರು ರಾತ್ರಿ ಮನೆಗೆ ಬಂದಾಗ ಕಳವಾಗಿದ್ದು ಗೊತ್ತಾಗಿದೆ. ಮುಂಬಾಗಿಲು ಮುರಿದು ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆ.ಆರ್. ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಾಡುಗೊಂಡನಹಳ್ಳಿ: ಕಾಡುಗೊಂಡನಹಳ್ಳಿಯ ನಂಜಪ್ಪ ಕಾಲೊನಿಯಲ್ಲಿರುವ ಯಶೋಧಾ ಎಂಬುವರ ಮನೆಯ ಮುಂಬಾಗಿಲು ಮುರಿದು ದುಷ್ಕರ್ಮಿಗಳು ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ ಆಭರಣ ದೋಚಿದ್ದಾರೆ.

ಮನೆ ಮಾಲೀಕರು ಬೆಳಿಗ್ಗೆ ಹನ್ನೊಂದು ಗಂಟೆಗೆ ಮನೆಗೆ ಬೀಗ ಹಾಕಿ ಹೊರಗೆ ಹೋಗಿದ್ದಾಗ ಕಳವು ಮಾಡಿದ್ದಾರೆ. ಅವರು ರಾತ್ರಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಡುಗೊಂಡನಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry