ಗುರುವಾರ , ಆಗಸ್ಟ್ 22, 2019
22 °C

ಗಾಂಜಾ ಸಾಗಾಟ: 10 ವರ್ಷ ಕಠಿಣ ಶಿಕ್ಷೆ

Published:
Updated:

ಮಡಿಕೇರಿ: ಗಾಂಜಾ ಸೊಪ್ಪನ್ನು ಅಕ್ರಮವಾಗಿ ಸಾಗಾಟ ಮಾಡಿದ ಮೂವರಿಗೆ 10 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ ರೂ 1 ಲಕ್ಷ ದಂಡ ವಿಧಿಸಿ ಜಿಲ್ಲಾ ಮತ್ತು  ಸೆಷನ್ಸ್ ನ್ಯಾಯಾಧೀಶ ಎಸ್.ಆರ್. ಸೋಮಶೇಖರ್ ಬುಧವಾರ ಶಿಕ್ಷೆ ಪ್ರಕಟಿಸಿದ್ದಾರೆ.2006ರ ನವೆಂಬರ್ 26ರಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಂಪಾಜೆ ಗ್ರಾಮದ ಫಾರೆಸ್ಟ್‌ನ ಬಳಿ ಲಾರಿಯಲ್ಲಿ ಅಕ್ರಮವಾಗಿ ಗಾಂಜಾ ಸೊಪ್ಪನ್ನು ಸಾಗಾಟ ಮಾಡುವ ಸಂದರ್ಭದಲ್ಲಿ ಆಂಧ್ರಪ್ರದೇಶದ ವಾರಂಗಲ್ ತಾಲ್ಲೂಕಿನ ಶಿವಾನಗರ್ ಬೀದಿಯ ನಿವಾಸಿ ಎನ್. ರಾಜಯ್ಯ (25),  ವಾರಂಗಲ್ ತಾಲ್ಲೂಕಿನ ಹಸನಿಪರ್ತಿ ಗ್ರಾಮದ ಜಿ. ದೇವೆಂದ್ರ (27), ಹೈದರಾಬಾದ್‌ನ ಕಾಚಿಗುಡ ಬೀದಿಯ ಜಿ. ಮಾರುತಿ (65) ಎಂಬವರು ಸಿಕ್ಕಿಬಿದಿದ್ದರು.ಆಂಧ್ರಪ್ರದೇಶದ ಕರೀಂನಗರ ಜಿಲ್ಲೆಯ ಉಜಿರಬಾದ್‌ನ ನಿವಾಸಿ ಶ್ರೀನಿವಾಸ್ ಎಂಬಾತ ಕೇರಳದ ಕೊಲ್ಲಂ ಎಂಬಲ್ಲಿಗೆ ತಲುಪಿಸುವ ಉದ್ದೇಶದಿಂದ ಸುಮಾರು 106 ಕೆ.ಜಿ.ಗಳಷ್ಟು ಗಾಂಜಾ ಸೊಪ್ಪನ್ನು ಮಂಗಳೂರಿಗೆ ಸಾಗಿಸಲು ಯತ್ನಿಸಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಶ್ರೀನಿವಾಸ್ ತಲೆ ಮರೆಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜಯ್ಯ, ಜಿ. ದೇವೆಂದ್ರ, ಜಿ. ಮಾರುತಿ ಅವರಿಗೆ 10 ವರ್ಷಗಳ ಕಠಿಣ ಶಿಕ್ಷೆ ಮತ್ತು ತಲಾ ರೂ 1 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ದಂಡ ಪಾವತಿಸಲು ತಪ್ಪಿದ್ದಲ್ಲಿ ಪುನಃ 2 ವರ್ಷಗಳ ಕಠಿಣ ಸಜೆ ಅನುಭವಿಸುವಂತೆ ಸೂಚಿಸಿದ್ದಾರೆ. ಸರ್ಕಾರಿ ಅಭಿಯೋಜಕ ಎ.ಪಿ. ಫಿರೋಜ್‌ಖಾನ್ ಅಂತಿಮ ವಾದ ಮಂಡಿಸಿದರು.

Post Comments (+)