ಗಾಂಧಿನಗರ ವಾರ್ಡ್ ಉಪಚುನಾವಣೆ: ಚುರುಕಾದ ಬಹಿರಂಗ ಪ್ರಚಾರ

7

ಗಾಂಧಿನಗರ ವಾರ್ಡ್ ಉಪಚುನಾವಣೆ: ಚುರುಕಾದ ಬಹಿರಂಗ ಪ್ರಚಾರ

Published:
Updated:

ಬೆಂಗಳೂರು: ಬಿಬಿಎಂಪಿಯ ಗಾಂಧಿನಗರ ವಾರ್ಡ್‌ಗೆ ಇದೇ ತಿಂಗಳ 26ರಂದು ನಡೆಯಲಿರುವ ಉಪ ಚುನಾವಣೆಗೆ ಪ್ರಚಾರದ ಅಬ್ಬರ ತಾರಕಕ್ಕೇರಿದೆ. ಶುಕ್ರವಾರ ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರ ಕೊನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಗುರುವಾರ ಬಿರುಸಿನ ಪ್ರಚಾರ ನಡೆಸಿದರು.

ಕಾಂಗ್ರೆಸ್ ಸದಸ್ಯ ನಟರಾಜ್ ಹತ್ಯೆಯಿಂದ ತೆರವಾದ ಸ್ಥಾನಕ್ಕೆ ನಡೆಯುತ್ತಿರುವ ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿ. ಗೋಪಾಲಕೃಷ್ಣ, ಬಿಜೆಪಿಯಿಂದ ಜಿ. ರಾಮಚಂದ್ರ, ಜೆಡಿಎಸ್‌ನಿಂದ ಪಿ.ಕೆ. ಸುರೇಶ್, ಎಐಎಡಿಎಂಕೆನ ಎಂ.ಪಿ. ಯುವರಾಜ್, ಜೆಡಿಯುನಿಂದ ಎಸ್. ಅಶ್ವತ್ಥನಾರಾಯಣ ಸ್ಪರ್ಧಿಸಿದ್ದರೆ, ಪಕ್ಷೇತರರಾಗಿ ಕೆ. ರಮೇಶ್,ಎಸ್.ಎನ್.ರಮೇಶ್, ಸಿ.ಜಿ.ಕೆ. ರಾಮು, ಅಬ್ದುಲ್ ಗಫಾರ್ ಕಣದಲ್ಲಿದ್ದಾರೆ.

ಬಿಜೆಪಿ ಅಭ್ಯರ್ಥಿ ಜಿ. ರಾಮಚಂದ್ರ ಪರವಾಗಿ ಸಚಿವ ಆರ್. ಅಶೋಕ ಹಾಗೂ ಸಂಸದ ಪಿ.ಸಿ. ಮೋಹನ್ ಪ್ರಚಾರ ಕೈಗೊಂಡರೆ, ಕಾಂಗ್ರೆಸ್ ಅಭ್ಯರ್ಥಿ ಟಿ. ಗೋಪಾಲಕೃಷ್ಣ ಪರವಾಗಿ ಶಾಸಕ ದಿನೇಶ್ ಗುಂಡೂರಾವ್ ಬಹಿರಂಗ ಪ್ರಚಾರ ನಡೆಸಿದರು.

ಜೆಡಿಎಸ್ ಅಭ್ಯರ್ಥಿ ಪಿ.ಕೆ. ಸುರೇಶ್ ಕೂಡ ವಾರ್ಡ್‌ನ ವಿವಿಧ ಕಡೆಗಳಲ್ಲಿ ಪ್ರಚಾರ ನಡೆಸಿ ಮತ ಯಾಚಿಸಿದರು. ಶುಕ್ರವಾರ ಸಂಜೆ ಬಹಿರಂಗ ಪ್ರಚಾರ ಕೊನೆಗೊಳ್ಳಲಿದೆ.

ವಾರ್ಡ್‌ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದ್ದರೆ, ಜೆಡಿಎಸ್ ಕೂಡ ಗೆಲುವಿನ ಹುಮ್ಮಸ್ಸಿನಲ್ಲಿದೆ. 26ರಂದು ಮತದಾನ ನಡೆಯಲಿದೆ. ಚುನಾವಣೆಯಲ್ಲಿ `ನಿರ್ಣಾಯಕ ಪಾತ್ರ~ ವಹಿಸಲಿರುವ ತಮಿಳು ಭಾಷಿಕರು ಹಾಗೂ ಕೊಳೆಗೇರಿ ಮತದಾರರ ಮೇಲೆ ಕಣ್ಣಿಟ್ಟಿರುವ ಎಐಎಡಿಎಂಕೆ ಅಭ್ಯರ್ಥಿ ಯುವರಾಜ್ `ಅಮ್ಮ~ ಜಯಲಲಿತಾ ಹೆಸರೇಳಿಕೊಂಡು ಮತ ಯಾಚಿಸಿದರು. ಕ್ಷೇತ್ರದಲ್ಲಿ ಒಟ್ಟು 24,901 ಮತದಾರರಿದ್ದು, ಇವರಲ್ಲಿ 13,494 ಪುರುಷರು, 11,406 ಮಹಿಳೆಯರು ಹಾಗೂ ಒಬ್ಬರು ಇತರ (ಹಿಜಡಾ) ಮತದಾರರಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry