ಗಾಂಧಿವಾದಿಯ ನಿರ್ಗಮನ

7

ಗಾಂಧಿವಾದಿಯ ನಿರ್ಗಮನ

Published:
Updated:
ಗಾಂಧಿವಾದಿಯ ನಿರ್ಗಮನ

ಬೆಂಗಳೂರು: ಮಹಾತ್ಮ ಗಾಂಧಿ ಅವರ ಆದರ್ಶದ ನೆರಳಲ್ಲಿ ನಡೆದವರು ಡಾ.ದೇಶಹಳ್ಳಿ ಜಿ.ನಾರಾಯಣ. ಶಿಕ್ಷಣ, ಪತ್ರಿಕೋದ್ಯಮ, ಭಾಷಾ ಹೋರಾಟ, ಸಾಹಿತ್ಯ, ರಾಜಕಾರಣ, ಸಂಘಟನೆ, ಸಂಸ್ಕೃತಿ ಹೀಗೆ ಅವರ ವ್ಯಕ್ತಿತ್ವ ಹಲವು ನದಿಗಳ ಸಂಗಮ. ಹುಟ್ಟಿದ್ದು 1923, ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ದೇಶಹಳ್ಳಿಯಲ್ಲಿ.



ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಚಳವಳಿಯ ಸೆಳೆತ. ಆ ಹಂಬಲಕ್ಕೆ ನೀರೆರೆಯುವಂತೆ ಶಿವಪುರದಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯಿತು. ಹಿರಿಯ ಗಾಂಧಿವಾದಿಗಳಾದ ಟಿ.ಸಿದ್ದಲಿಂಗಯ್ಯ ಮತ್ತು ಕೆ.ಎಚ್.ವೀರಣ್ಣಗೌಡ ಅವರ ಪರಿಚಯವಾಯಿತು. ಅವರ ಬದುಕಿನ ದಿಕ್ಕು ಬದಲಾಯಿತು.



1940ರಲ್ಲಿ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿ ಬೆಳಗಾವಿಯ ಜಮನಾಲಾಲ್ ಖಾದಿ ವಿದ್ಯಾಲಯ ಪ್ರವೇಶ. 1942ರ ಕ್ವಿಟ್ ಇಂಡಿಯಾ ಚಳವಳಿ ಮೂಲಕ ಹೋರಾಟ ಆರಂಭ. ಪೊಲೀಸರ ಕೆಂಗಣ್ಣಿಗೆ ಗುರಿ. ಹಿಂಡಲಗಾ ಜೈಲಿನಲ್ಲಿ ಮೂರು ತಿಂಗಳ ಕಠಿಣ ಶಿಕ್ಷೆ. ಬಳಿಕ ಹುಟ್ಟೂರಿಗೆ ಮರಳಿದ ಅವರು ವಯಸ್ಕರ ಶಿಕ್ಷಣದ ಮಹತ್ವದ ಬಗ್ಗೆ ಪ್ರಚಾರ ಆರಂಭಿಸಿದರು. `ಅಕ್ಷರವ ನೀವು ಕಲಿಯಿರಿ~ ಮತ್ತಿತರ ಪ್ರಚಾರ ಕೃತಿಗಳನ್ನು ರಚಿಸಿದರು.

 

ಮುಂಬೈ ಬಿರ್ಲಾ ಭವನದಲ್ಲಿ ಅವರು ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ದಿವ್ಯ ಚೇತನವೊಂದರ ದರ್ಶನವಾಯಿತು. ಆ ಚೇತನವೇ ಮಹಾತ್ಮ ಗಾಂಧಿ. ಅವರ ಚಿಂತನೆಗಳ ದಟ್ಟ ಪ್ರಭಾವ ನಾರಾಯಣರ ಮೇಲೆ.



ಕನ್ನಡ ಪತ್ರಿಕಾ ರಂಗದ ಬೆಳವಣಿಗೆಗೂ ಅವರ ಕೊಡುಗೆ ಅಪಾರ. ವಾರ್ತಾ ಪತ್ರಿಕೆ ಹಾಗೂ ಚಿತ್ರಗುಪ್ತ ಪತ್ರಿಕೆಯ ವ್ಯವಸ್ಥಾಪಕ ಹುದ್ದೆ ಅರಸಿ ಬಂತು. 1950ರಲ್ಲಿ ಸ್ವತಂತ್ರ ಮುದ್ರಣಾಲಯ ಸ್ಥಾಪಿಸಿದರು. ಸುಮಾರು 60 ವರ್ಷಗಳ ಕಾಲ ವಿನೋದ ಮಾಸ ಪತ್ರಿಕೆ ನಡೆಸಿದರು.

 

ಕರ್ನಾಟಕ ಪತ್ರಿಕಾ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿ ಸೇವೆ. ಪತ್ರಿಕಾ ದಿನಾಚರಣೆ ಪರಂಪರೆಗೆ ನಾಂದಿ. ಯಶೋಧಮ್ಮ ಅವರನ್ನು ಬಾಳಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳುವ ಮೂಲಕ ದಾಂಪತ್ಯ ಜೀವನ ಪ್ರವೇಶ.



1957ರಲ್ಲಿ ಬೆಂಗಳೂರು ನಗರಸಭೆ ಸದಸ್ಯರಾಗಿ ಆಯ್ಕೆ. ಅಲ್ಲಿಂದ ಮುಂದೆ ಸಕ್ರಿಯ ರಾಜಕಾರಣ ಆರಂಭ. 1964ರಲ್ಲಿ ಮೇಯರ್ ಹುದ್ದೆ ಅಲಂಕಾರ. ನಗರಕ್ಕೆ ನೀರುಣಿಸುವ ಸಲುವಾಗಿ ಕಾವೇರಿ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಿದವರಲ್ಲಿ ಇವರು ಪ್ರಮುಖರು.

 

ಪುಸ್ತಕಗಳ ಬಗ್ಗೆ ಅಪಾರ ಒಲವು ಹೊಂದಿದ್ದ ನಾರಾಯಣ ಕನ್ನಡ ರಾಜ್ಯೋತ್ಸವ ಆಚರಣೆಗೆ ಹೊಸ ರೂಪ ನೀಡಿದರು. ರಾಜ್ಯೋತ್ಸವ ಸಾಹಿತ್ಯ ಪ್ರಚಾರ ಸಮಿತಿ ರಚಿಸಿದರು. ಪುಸ್ತಕ ದಾನ ಚಳವಳಿ ಆರಂಭಿಸಿದರು.



1969ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನೇಮಕಗೊಂಡರು. ಪರಿಷತ್ತಿಗೆ ಆರ್ಥಿಕ ಸಮೃದ್ಧತೆ ಒದಗಿಸಿದರು. ಸುಮಾರು 8 ವರ್ಷಗಳ ಕಾಲ ಅಧ್ಯಕ್ಷರಾಗಿ ಪರಿಷತ್ತಿಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಿದರು. ಪರಿಷತ್ತನ್ನು ಜಿಲ್ಲೆ ಹಾಗೂ ತಾಲ್ಲೂಕು ಮಟ್ಟಗಳಿಗೆ ಕೊಂಡೊಯ್ದರು.



ಈ ಅವಧಿಯಲ್ಲಿ ಅನೇಕ ಜಿಲ್ಲಾ ಸಾಹಿತ್ಯ ಸಮ್ಮೇಳನಗಳು ನಡೆದವು. ಪರಿಷತ್ತಿನ ಸುವರ್ಣ ಮಹೋತ್ಸವ ಕಟ್ಟಡ ಆರಂಭಿಸಿದರು. ಪರಿಷತ್ತಿನ ಏಳಿಗೆಗಾಗಿ ತ್ರೈವಾರ್ಷಿಕ, ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿದರು. ಪರಿಷತ್ತಿನ ಕಾರ್ಯ ಚಟುವಟಿಕೆಗಳ ಸಾಕ್ಷ್ಯಚಿತ್ರ ತಯಾರಿಗೆ ಚಾಲನೆ ನೀಡಿದರು.



ಲೇಖಕಿಯರಿಗೆ ಉತ್ತಮ ವೇದಿಕೆ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಲೇಖಕಿಯರ ಸಂಘ ಹುಟ್ಟುಹಾಕಿದರು. ಎರಡು ಬಾರಿ ಕನ್ನಡ ಸಾಹಿತ್ಯ ಪರಿಷತ್‌ನ ಚುಕ್ಕಾಣಿ ಹಿಡಿದಿದ್ದ ನಾರಾಯಣ, ಮಂಡ್ಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಪ್ರಥಮ ಬಾರಿಗೆ ಮಹಿಳಾ ಸಾಹಿತಿ ಜಯದೇವಿ ತಾಯಿ ಲಿಗಾಡೆ ಅವರನ್ನು ಆಯ್ಕೆ ಮಾಡಿದರು. ಗಮಕ ಸಾಹಿತ್ಯ ಪರಿಷತ್ತಿನ ಉಗಮಕ್ಕೂ ಶ್ರಮ. 1972ರಲ್ಲಿ ಪ್ರಥಮ ಬಾರಿಗೆ ಅಖಿಲ ಕರ್ನಾಟಕ ಗಮಕ ಸಮ್ಮೇಳನ ನಡೆಸಿದರು.



ಕರ್ನಾಟಕ ಜಾನಪದ ಪರಿಷತ್ತು ಹಾಗೂ ರಾಮನಗರದ ಜಾನಪದ ಲೋಕದ ಅಧ್ಯಕ್ಷರಾಗಿ ಸೇವೆ. ಜಾನಪದ ಲೋಕಕ್ಕೆ ಹೊಸ ಆಯಾಮ. ಒಂದಿಲ್ಲೊಂದು ಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ ಪರಿಶ್ರಮ. 2005ರಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ.

ನಗರದ ಕೈಗಾರಿಕೆ, ಕಚೇರಿ, ಶಾಲಾ ಕಾಲೇಜುಗಳಲ್ಲಿ ಕನ್ನಡ ಉಸಿರಾಡುವಂತಾಗಲು ನಾರಾಯಣ ನಿರಂತರ ಹೋರಾಟ ನಡೆಸಿದರು. ನಾಡಿನ ಅನೇಕ ಕನ್ನಡ ಪರ ಹೋರಾಟಗಾರರು ನಾರಾಯಣ ಅವರ ಗರಡಿಯಲ್ಲಿ ಪಳಗಿದವರು. ಕನ್ನಡ ಕಾರ್ಯಕರ್ತರ ದೊಡ್ಡ ಪಡೆಯನ್ನೇ ಕಟ್ಟಿದರು.



ಮಲೇರಿಯಾ ಹಾವಳಿ, ಕಬ್ಬಿನ ಕಥಾಂತರ, ಚಿಂತನಾ ಲಹರಿ ನಾರಾಯಣರ ಇತರ ಕೃತಿಗಳು. ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಜಾನಪದ ತಜ್ಞ, ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸೇರಿದಂತೆ ಅವರನ್ನು ಅರಸಿ ಬಂದ ಗೌರವಗಳೂ ಅಪಾರ. ಅವರ ಅಗಲಿಕೆಯಿಂದಾಗಿ ಗಾಂಧಿ ಪರಂಪರೆಯ ಕನ್ನಡ ಕಣಜವೊಂದು ಬರಿದಾದಂತಾಗಿದೆ.



ಪತ್ರಕರ್ತರ ಸಂತಾಪ

ಬೆಂಗಳೂರು: ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರ ಜಿ.ನಾರಾಯಣ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತ ಪಡಿಸಿದೆ.



80 ವರ್ಷಗಳ ಇತಿಹಾಸವಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾಗಿಯೂ ನಾರಾಯಣ ಅವರು ಪತ್ರಕರ್ತರಿಗೆ ಆದರ್ಶ ಸಂಹಿತೆಯನ್ನು ನಿರೂಪಿಸಿದ್ದರು ಎಂದು  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಮೊದಲಿಯಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.



ಲೇಖಕಿಯರ ಸಂಘದ ಸ್ಥಾಪನೆಗೆ ಕಾರಣೀಭೂತರಾದ ಜಿ.ನಾರಾಯಣ ಅವರ ನಿಧನಕ್ಕೆ ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷೆ ವಸುಂಧರಾ ಭೂಪತಿ ಸಂತಾಪ ವ್ಯಕ್ತ ಪಡಿಸಿದ್ದಾರೆ.



* 1923- ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ದೇಶಹಳ್ಳಿಯಲ್ಲಿ ಜನನ.



* 1940- ಪ್ರೌಢಶಾಲಾ ಶಿಕ್ಷಣಕ್ಕೆ ವಿದಾಯ.



* 1942- ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲು;



* 1951- ವಿನೋದ ಮಾಸ ಪತ್ರಿಕೆ ಪ್ರಾರಂಭ;



* 1957- ಮೊದಲ ಬಾರಿಗೆ ಬೆಂಗಳೂರು ನಗರಸಭೆಯ ಸದಸ್ಯರಾಗಿ ಚಾಮರಾಜ ಪೇಟೆ ಕ್ಷೇತ್ರದಿಂದ ಆಯ್ಕೆ;



* 1964- ಬೆಂಗಳೂರು ನಗರಸಭೆಯ ಮೇಯರ್ ಸ್ಥಾನದ ಗೌರವ;



* 1969- ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷತೆ;



* 2005- ಜಾನಪದ ಪರಿಷತ್ತಿನ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry