ಗಾಂಧಿ ಕೃತಿ ಸಂಚಯ ಬಿಡುಗಡೆ

7

ಗಾಂಧಿ ಕೃತಿ ಸಂಚಯ ಬಿಡುಗಡೆ

Published:
Updated:
ಗಾಂಧಿ ಕೃತಿ ಸಂಚಯ ಬಿಡುಗಡೆ

ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನ್ನಡ ಅನುವಾದದ 100 ಸಂಪುಟಗಳ ಬೃಹತ್ ಯೋಜನೆಯಾಗಿರುವ `ಗಾಂಧಿ ಕೃತಿ ಸಂಚಯ~ದ 20, 21 ಮತ್ತು 22ನೇ ಸಂಪುಟಗಳನ್ನು ಶನಿವಾರ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ರಾಜ್ಯಸಭಾ ಮಾಜಿ ಸದಸ್ಯೆ ಹಾಗೂ ಗಾಂಧೀಜಿಯವರ ಮೊಮ್ಮಗಳು ಸುಮಿತ್ರಾ ಗಾಂಧಿ ಕುಲಕರ್ಣಿ ಲೋಕಾರ್ಪಣೆ ಮಾಡಿದರು.ಆನಂತರ ಮಾತನಾಡಿದ ಅವರು, ಬಾಪೂಜಿಯವರೊಂದಿಗಿನ ತಮ್ಮ ಒಡನಾಟದ ದಿನಗಳನ್ನು ಮೆಲುಕು ಹಾಕಿದರು.`ಗಾಂಧೀಜಿಯವರ ತತ್ವ ಮತ್ತು ಸಿದ್ದಾಂತಗಳು ಎಂದೆಂದಿಗೂ ಪ್ರಸ್ತುತ. ಭಾರತೀಯ ವಿದ್ಯಾಭವನವು ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಸಹಕಾರದೊಂದಿಗೆ ಗಾಂಧಿ ಕೃತಿ ಸಂಚಯದ ಸಂಪುಟಗಳನ್ನು ಹೊರತರುತ್ತಿರುವುದು ಮೆಚ್ಚುಗೆಸಂಗತಿ~ ಎಂದು ಸಂತಸ ವ್ಯಕ್ತಪಡಿಸಿದರು.`ಇತ್ತೀಚಿನ ವರ್ಷಗಳಲ್ಲಿ ದೃಶ್ಯ ಮಾಧ್ಯಮಗಳ ಪ್ರಭಾವದಿಂದ ಯುವಕರು ಪುಸ್ತಕಗಳನ್ನು ಓದುವ ಹವ್ಯಾಸದಿಂದ ದೂರ ಸರಿಯುತ್ತಿದ್ದಾರೆ. ಇದು ಬೇಸರದ ಸಂಗತಿ. ಆದರೂ, ಪ್ರಾಚೀನ ಭಾಷೆಯಾದ ಕನ್ನಡಕ್ಕೆ ತನ್ನದೇ ಆದ ಅಸ್ತಿತ್ವವಿದೆ. ಜ್ಞಾನಪೀಠ ಪುರಸ್ಕೃತರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿರುವ ಸೇವೆ ಅಪ್ರತಿಮವಾದುದು~ ಎಂದು ಕೊಂಡಾಡಿದರು.ಕರ್ನಾಟಕವೇ ಅತ್ಯುತ್ತಮ: ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಅತ್ಯುತ್ತಮ ರಾಜ್ಯ. ಇಲ್ಲಿನ ಸಂಸ್ಕೃತಿ, ಜನರ ಸಂಸ್ಕಾರವನ್ನು ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ವಿನಯವಾದ ಭಾಷೆ, ಯಾರ ಮನಸನ್ನೂ ನೋಯಿಸದ ಮೃದು ಜನರು ನನಗೆ ತುಂಬಾ ಇಷ್ಟ ಎಂದು ಸಮಿತ್ರಾ ಗಾಂಧಿ ಹೇಳಿದರು.ಕಳೆದ 15 ವರ್ಷಗಳಿಂದ ಬೆಂಗಳೂರಿನ ನಂಟು ಹೊಂದಿದ್ದರೂ ಕನ್ನಡ ಕಲಿಯಲು ಸಾಧ್ಯವಾಗಲಿಲ್ಲ. ಒಂದು ಸುಂದರ ಭಾಷೆಯನ್ನು ಕಲಿಯಲು ಸಾಧ್ಯವಾಗದಿರುವುದಕ್ಕೆ ನನಗೆ ನೋವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಸಮಾರಂಭದಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್, ಗಾಂಧಿ ಕೃತಿ ಸಂಚಯದ ಇತರ ಸಂಪುಟಗಳನ್ನು ಹೊರತರಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಎಲ್ಲ ರೀತಿಯ ನೆರವು ನೀಡಲಿದೆ ಎಂದು ಭರವಸೆ ನೀಡಿದರು.ಇತ್ತೀಚಿನ ವರ್ಷಗಳಲ್ಲಿ ಗಾಂಧಿ ತತ್ವಗಳ ಮಹತ್ವ ಹೆಚ್ಚುತ್ತಿದೆ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಕೂಡ ಗಾಂಧಿ ತತ್ವಗಳನ್ನು ಪಾಲಿಸುವ ಮಾತುಗಳನ್ನಾಡುತ್ತಿದ್ದಾರೆ. ಇದು ಭಾರತೀಯರೆಲ್ಲರೂ ಹೆಮ್ಮೆ ಪಡುವ ಸಂಗತಿ ಎಂದರು.ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್. ರಾಮಾನುಜ, ಕಾರ್ಯಕ್ರಮ ನಿರ್ದೇಶಕ ಸುರೇಶ್, ಗಾಂಧಿ ಕೃತಿ ಸಂಚಯದ ಸಂಪುಟಗಳ ಪ್ರಧಾನ ಸಂಪಾದಕಿ ಡಾ. ಮೀನಾ ದೇಶಪಾಂಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಕೃತಿಗಳ ಅನುವಾದಕರಾದ ಎಚ್.ಎಸ್. ದೊರೆಸ್ವಾಮಿ, ನೀಲತ್ತಹಳ್ಳಿ ಕಸ್ತೂರಿ, ಎನ್. ಕೃಷ್ಣಸ್ವಾಮಿ, ವಿ. ನಾಗರಾಜರಾವ್, ಶಂಷಾ ಐತಾಳ, ಸರಸ್ವತಿ ವೆಂಕಟರಮಣನ್, ಬಸವರಾಜ ಪುರಾಣಿಕ್, ಶ್ರೀನಿವಾಸ ಉಡುಪ, ರಾಜೇಶ್ವರಿ ಕೃಷ್ಣ ಹಾಗೂ ಬಿ.ಜಿ. ರಮೇಶ್ ಅವರನ್ನು ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry